ರಾಜ್ಯದಲ್ಲಿ ಬೇಸಿಗೆ ರಜೆ ಮುಕ್ತಾಯಗೊಳ್ಳುತ್ತಾ ಬರುತ್ತಿದ್ದು, ಶೀಘ್ರ 2025-26ನೇ ಸಾಲಿನ ಶಾಲಾ ಶೈಕ್ಷಣಿಕ ವರ್ಷ ಹಾಗೂ ತರಗತಿ ಚಟುವಟಿಕೆಗಳು ಆರಂಭವಾಗಲಿವೆ.
ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ರಜೆ ಮುಕ್ತಾಯಗೊಳ್ಳುತ್ತಾ ಬರುತ್ತಿದ್ದು, ಶೀಘ್ರ 2025-26ನೇ ಸಾಲಿನ ಶಾಲಾ ಶೈಕ್ಷಣಿಕ ವರ್ಷ ಹಾಗೂ ತರಗತಿ ಚಟುವಟಿಕೆಗಳು ಆರಂಭವಾಗಲಿವೆ.
ಮೇ 29 ರಂದು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವದ ಮೂಲಕ ಮಕ್ಕಳನ್ನು ಸ್ವಾಗತಿಸುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ. ಶಾಲೆ ಆರಂಭದ ದಿನದಿಂದಲೇ ಮಕ್ಕಳ ದಾಖಲಾತಿ ಪ್ರಕ್ರಿಯೆ ಆರಂಭಿಸಿ ಜೂ.30ರೊಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ.
ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲ ಶಿಕ್ಷಕರೂ ಕಡ್ಡಾಯವಾಗಿ ಪಾಲ್ಗೊಂಡು ನಿರ್ದಿಷ್ಟ ವಯೋಮಿತಿ ಇರುವ ಎಲ್ಲ ಮಕ್ಕಳೂ ಶಾಲೆಗೆ ಸೇರುವಂತೆ ನೋಡಿಕೊಳ್ಳಬೇಕು. ಶಾಲೆಗಳಲ್ಲಿನ ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ, ಪಠ್ಯಪುಸ್ತಕ, ಸಮವಸ್ತ್ರಗಳ ವಿತರಣೆ ಮುಂತಾದ ಕಾರ್ಯಕ್ರಮಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಶಿಕ್ಷಣ ಅಧಿಕಾರಿಗಳು ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಲು ಮಿಂಚಿನ ಸಂಚಾರ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಕ್ರಿಸ್‌ಮಸ್ ಸಂದರ್ಭದಲ್ಲಿ ರಜೆ ನೀಡುವ ಉದ್ದೇಶ ಹೊಂದಿರುವ ಶಿಕ್ಷಣ ಸಂಸ್ಥೆಗಳು ಈ ಬಗ್ಗೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಬೇಕು. ಉಪನಿರ್ದೇಶಕರು ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತಾರೆ. ಕ್ರಿಸ್‌ಮಸ್ ಸಂದರ್ಭದಲ್ಲಿ ನೀಡುವ ರಜೆಯನ್ನು ಅಕ್ಟೋಬರ್ ತಿಂಗಳ ಮಧ್ಯಂತರ ರಜೆಯಲ್ಲಿ ಕಡಿತಗೊಳಿಸಿ ಸರಿದೂಗಿಸಬೇಕು ಎಂದು ಸೂಚಿಸಲಾಗಿದೆ. ಮುಷ್ಕರ, ಮಳೆ, ಮತ್ತಿತ್ತರ ಅನಿರೀಕ್ಷಿತ ಕಾರಣಗಳಿಂದ ವಿದ್ಯಾರ್ಥಿಗಳಿಗೆ ರಜೆ ನೀಡಬೇಕಾದ ಸಂದರ್ಭ ಒದಗಿದರೆ ಆ ರಜೆಯನ್ನು ಮುಂದಿನ ರಜಾ ದಿನದಲ್ಲಿ ಪೂರ್ಣವಾಗಿ ಶಾಲೆ ನಡೆಸಿ ಸರಿದೂಗಿಸಬೇಕು. ಉಳಿದಂತೆ ಶೈಕ್ಷಣಿಕ ಮಾರ್ಗಸೂಚಿಯನ್ನು ಮುಂದಿನ ದಿಗಳಲ್ಲಿ ನೀಡಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಕ್ರಿಯಾ ಯೋಜನೆ ರಚಿಸಿ ಜಾರಿಗೊಳಿಸುವಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.