ಬಿಜೆಪಿಯಲ್ಲಿ ಮತ್ತೆ ಅತೃಪ್ತಿ ಸ್ಫೋಟ

KannadaprabhaNewsNetwork |  
Published : Nov 18, 2023, 01:00 AM IST
ರಮೇಶ್‌ ಜಾರಕಿಹೊಳಿ ಬಸನಗೌಡ ಪಾಟೀಲ ಯತ್ನಾಳ | Kannada Prabha

ಸಾರಾಂಶ

ಉತ್ತರ ಕರ್ನಾಟಕಕ್ಕೆ ಪ್ರತಿಪಕ್ಷ ನಾಯಕನ ಹುದ್ದೆಗೆ ಪಟ್ಟು. ಶಾಸಕಾಂಗ ಸಭೆಗೆ ಯತ್ನಾಳ್‌, ಜಾರಕಿಹೊಳಿ ಬಹಿಷ್ಕಾರ. ವಿಜಯೇಂದ್ರ ನೇಮಕ ಬಗ್ಗೆ ಕೇಂದ್ರ ವೀಕ್ಷಕರಿಗೂ ದೂರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರಮುಖ ಪ್ರತಿಪಕ್ಷ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಹಿರಿಯ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಮತ್ತು ರಮೇಶ್ ಜಾರಕಿಹೊಳಿ ಅವರು ಆರ್‌. ಅಶೋಕ್‌ ಅವರನ್ನು ವಿಧಾನಸಭೆ ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಿದ ಶಾಸಕಾಂಗ ಪಕ್ಷದ ಸಭೆಗೆ ಆಗಮಿಸಿ ಕೆಲಹೊತ್ತಿನಲ್ಲೇ, ಅಲ್ಲಿಂದ ನಿರ್ಗಮಿಸಿ ಸಭೆಗೆ ಬಹಿಷ್ಕಾರ ಹಾಕಿದ್ದಾರೆ. ಈ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.ಈ ಅಸಮಾಧಾನದ ಮೂಲ ಪಕ್ಷದ ನೂತನ ರಾಜ್ಯಾಧ್ಯಕ್ಷರನ್ನಾಗಿ ಬಿ.ವೈ.ವಿಜಯೇಂದ್ರ ಅವರನ್ನು ನೇಮಿಸಿರುವುದು. ಬಳಿಕ ಅದು ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆಯೊಂದಿಗೆ ತಳಕು ಹಾಕಿಕೊಂಡಿತು.

ಶುಕ್ರವಾರ ಸಂಜೆ ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿತ್ತು. ಬೆಳಗ್ಗೆಯೇ ಶಾಸಕರಾದ ಯತ್ನಾಳ, ಜಾರಕಿಹೊಳಿ ಮತ್ತು ಅರವಿಂದ ಬೆಲ್ಲದ್‌ ಅವರು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ತೆರಳಿ ಸಮಾಲೋಚನೆ ನಡೆಸಿದರು. ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಉತ್ತರ ಕರ್ನಾಟಕದವರನ್ನೇ ಪರಿಗಣಿಸಬೇಕು. ಇಲ್ಲದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತೊಂದರೆಯಾಗಲಿದೆ. ಮೇಲಾಗಿ, ಪಕ್ಷಕ್ಕೆ ಮೊದಲಿನಿಂದಲೂ ಗಟ್ಟಿಯಾಗಿ ಬೆಂಬಲಿಸಿಕೊಂಡು ಬಂದಿರುವ ಉತ್ತರ ಕರ್ನಾಟಕಕ್ಕೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ವಿಜಯೇಂದ್ರ ನೇಮಕಕ್ಕೆ ಬೊಮ್ಮಾಯಿ ಬಳಿ ವಿರೋಧವನ್ನೂ ವ್ಯಕ್ತಪಡಿಸಿದರು ಎನ್ನಲಾಗಿದೆ.ನಂತರ ಶಾಸಕಾಂಗ ಸಭೆಯ ಹಿನ್ನೆಲೆ ವೀಕ್ಷಕರಾಗಿ ಆಗಮಿಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಪಕ್ಷದ ನಾಯಕ ದುಷ್ಯಂತ್ ಅವರು ತಮ್ಮ ನಿವಾಸಕ್ಕೆ ಭೇಟಿ ನೀಡಿದ ವೇಳೆಯೂ ಯತ್ನಾಳ ಅವರು ವಿಜಯೇಂದ್ರ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿದರು.

ಸಂಜೆ ಶಾಸಕಾಂಗ ಸಭೆ ನಿಗದಿಯಾಗಿದ್ದ ಖಾಸಗಿ ಹೋಟೆಲ್‌ಗೆ ಜತೆಯಾಗಿ ಆಗಮಿಸಿದ ಯತ್ನಾಳ ಮತ್ತು ಜಾರಕಿಹೊಳಿ ಅವರು ವೀಕ್ಷಕರೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು. ಈ ವೇಳೆ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆರ್.ಅಶೋಕ್ ಅವರನ್ನು ನೇಮಿಸುವ ಸುಳಿವನ್ನು ಅರಿತ ಅವರು ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ಸಿಗಬೇಕು ಎಂದು ಪ್ರತಿಪಾದಿಸಿ ಸಭೆ ಆರಂಭಕ್ಕೂ ಮೊದಲೇ ಬಹಿಷ್ಕಾರ ಹಾಕಿ ತೆರಳಿದರು. ಬಳಿಕ ಅಶೋಕ್ ಅವರ ಆಯ್ಕೆ ಘೋಷಣೆ ಮಾಡಲಾಯಿತು.

ಏನೇನಾಯ್ತು?- ಶುಕ್ರವಾರ ಬೆಳಗ್ಗೆ ಬೊಮ್ಮಾಯಿ ನಿವಾಸಕ್ಕೆ ಯತ್ನಾಳ, ಜಾರಕಿಹೊಳಿ, ಅರವಿಂದ್ ಬೆಲ್ಲದ್‌- ಶಾಸಕಾಂಗ ನಾಯಕನ ಸ್ಥಾನಕ್ಕೆ ಉತ್ತರ ಕರ್ನಾಟಕದವರನ್ನೇ ಪರಿಗಣಿಸಬೇಕೆಂದು ಆಗ್ರಹ- ಇಲ್ಲದಿದ್ದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ತೊಂದರೆ ಆಗುವ ಬಗ್ಗೆ ವಿವರಣೆ- ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಕ್ಕೂ ಬೊಮ್ಮಾಯಿ ಬಳಿ ವಿರೋಧ- ಈ ಮಧ್ಯೆ ಯತ್ನಾಳ್‌ ಮನೆಗೆ ಕೇಂದ್ರ ವೀಕ್ಷಕರಾದ ನಿರ್ಮಲಾ ಸೀತಾರಾಮನ್‌, ದುಷ್ಯಂತ್ ಭೇಟಿ- ಅವರ ಬಳಿಯೂ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ ಯತ್ನಾಳ್‌- ಬಳಿಕ ಶಾಸಕಾಂಗ ಪಕ್ಷದ ಸಭೆಗೆ ಯತ್ನಾಳ, ಜಾರಕಿಹೊಳಿ ಆಗಮನ. ವೀಕ್ಷಕರ ಜತೆ ಚರ್ಚೆ- ಆರ್‌. ಅಶೋಕ್‌ ನೇಮಕವಾಗುವ ಸುಳಿವು ದೊರೆತಿದ್ದರಿಂದ ಇಬ್ಬರಿಗೂ ಅಸಮಾಧಾನ- ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ಸಿಗಬೇಕೆಂದು ಆಗ್ರಹಿಸಿ ಸಭೆ ಆರಂಭಕ್ಕೂ ಮುನ್ನ ಬಹಿಷ್ಕಾರ

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ