ಜ.22ರಂದು ಅಯೋಧ್ಯೆ ರಾಮಮಂದಿರದಲ್ಲಿ ನಡೆಯಲಿರುವ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಗೈರಾಗುವ ಶಂಕರಾಚಾರ್ಯ ಪೀಠದ ಯತಿಗಳ ನಿರ್ಧಾರವನ್ನು ಕಟುವಾಗಿ ಟೀಕಿಸಿರುವ ಕೇಂದ್ರ ಸಚಿವ ನಾರಾಯಣ ರಾಣೆ, ‘ಹಿಂದೂ ಧರ್ಮಕ್ಕೆ ಶಂಕರಾಚಾರ್ಯರ ಕೊಡುಗೆ ಏನು?’ ಎಂದು ಪ್ರಶ್ನಿಸಿದ್ದಾರೆ.
ಮುಂಬೈ: ಜ.22ರಂದು ಅಯೋಧ್ಯೆ ರಾಮಮಂದಿರದಲ್ಲಿ ನಡೆಯಲಿರುವ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಗೈರಾಗುವ ಶಂಕರಾಚಾರ್ಯ ಪೀಠದ ಯತಿಗಳ ನಿರ್ಧಾರವನ್ನು ಕಟುವಾಗಿ ಟೀಕಿಸಿರುವ ಕೇಂದ್ರ ಸಚಿವ ನಾರಾಯಣ ರಾಣೆ, ‘ಹಿಂದೂ ಧರ್ಮಕ್ಕೆ ಶಂಕರಾಚಾರ್ಯರ ಕೊಡುಗೆ ಏನು?’ ಎಂದು ಪ್ರಶ್ನಿಸಿದ್ದಾರೆ.
ಇದು ವಿವಾದಕ್ಕೆ ಕಾರಣವಾಗಿದ್ದು, ಶಿವಸೇನೆ, ಎನ್‌ಸಿಪಿ ಆಕ್ಷೇಪ ವ್ಯಕ್ತಪಡಿಸಿ ಸಚಿವರ ಕ್ಷಮೆಯಾಚನೆ ಹಾಗೂ ವಜಾಗೆ ಆಗ್ರಹಿಸಿವೆ.ಭಾನುವಾರ ಮಾತನಾಡಿದ ರಾಣೆ, ‘ರಾಮಮಂದಿರ ಕಾರ್ಯಕ್ರಮ ಬಹಿಷ್ಕರಿಸುವುದು ಬಿಟ್ಟು ಶಂಕರಾಚಾರ್ಯರು ಸಮಾರಂಭಕ್ಕೆ ಹಾಜರಾಗಿ ಆಶೀರ್ವದಿಸಬೇಕು.
ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ರಾಜಕೀಯ ದೃಷ್ಟಿಕೋನದಿಂದ ನೋಡುತ್ತಿದ್ದಾರೆ. ಬಿಜೆಪಿ ಮತ್ತು ಪ್ರಧಾನಿ ಮೋದಿ ಮುಂದಾಗುವವರೆಗೂ ಯಾರೂ ರಾಮಮಂದಿರ ನಿರ್ಮಾಣಕ್ಕೆ ಮುಂದಾಗಿರಲಿಲ್ಲ.
ಹೀಗಿರುವಾಗ ಅವರು ಪ್ರಾಣಪ್ರತಿಷ್ಠಾಪನೆಯನ್ನು ಬಹಿಷ್ಕರಿಸಬೇಕೇ? ಅಥವಾ ಹರಸಬೇಕೇ? ರಾಮಮಂದಿರವನ್ನು ಧಾರ್ಮಿಕ ಕಾರಣಕ್ಕಾಗಿ ನಿರ್ಮಿಸಲಾಗಿದೆಯೇ ಹೊರತು ರಾಜಕೀಯ ಕಾರಣಕ್ಕಲ್ಲ. ರಾಮ ನಮ್ಮ ದೇವತೆ. ಅಷ್ಟಕ್ಕೂ ಹಿಂದೂ ಧರ್ಮಕ್ಕೆ ಶಂಕರಾಚಾರ್ಯರ ಕೊಡುಗೆ ಏನೆಂಬುದನ್ನು ಅವರೇ ತಿಳಿಸಬೇಕು’ ಎಂದು ಹೇಳಿದರು.
ವಿಪಕ್ಷಗಳು ಗರಂ: ರಾಣೆ ಹೇಳಿಕೆ ಹಿಂದೂ ಧರ್ಮಕ್ಕೆ ಮಾಡಿದ ಅವಮಾನ ಎಂದು ಟೀಕಿಸಿರುವ ಶಿವಸೇನೆ (ಉದ್ಧವ್ ಬಣ) ನಾಯಕ ಸಂಜಯ್ ರಾವುತ್, ಜ.22ಕ್ಕೂ ಮುನ್ನ ಬಿಜೆಪಿ ಈ ಹೇಳಿಕೆ ಕುರಿತು ಕ್ಷಮೆ ಯಾಚಿಸಬೇಕು ಮತ್ತು ಪ್ರಧಾನಿ ಮೋದಿ ಅವರು ರಾಣೆ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ.
ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಕೂಡಾ ರಾಣೆ ಹೇಳಿಕೆ ಕುರಿತು ಬಿಜೆಪಿ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.ರಾಮಮಂದಿರ ಅಪೂರ್ಣವಾಗಿರುವ ಕಾರಣ, ಅದರ ಪ್ರಾಣ ಪ್ರತಿಷ್ಠಾಪನೆಯಲ್ಲಿ ತಾವು ಭಾಗಿಯಾಗುತ್ತಿಲ್ಲ ಎಂದು ಇತ್ತೀಚೆಗೆ ಬದರಿನಾಥ ಮತ್ತು ಪುರಿ ಶಂಕರಾಚಾರ್ಯರು ಹೇಳಿದ್ದರು.
ಆದರೆ ಶೃಂಗೇರಿ ಮತ್ತು ದ್ವಾರಕಾ ಶ್ರೀಗಳು ಪ್ರಾಣಪ್ರತಿಷ್ಠಾಪನೆ ಸ್ವಾಗತಿಸಿದ್ದರು. ಆದರೆ ಅನ್ಯ ಕಾರ್ಯಕ್ರಮ ಇರುವ ಕಾರಣ ಪ್ರಾಣಪ್ರತಿಷ್ಠೆಗೆ ಗೈರಾಗುವುದಾಗಿ ಹೇಳಿದ್ದರು.