ರಾಹುಲ್‌ ಜೊತೆ ಸಿಎಂ, ಡಿಸಿಎಂ ಭೇಟಿ ವಿಳಂಬ?

KannadaprabhaNewsNetwork |  
Published : Nov 06, 2025, 02:00 AM ISTUpdated : Nov 06, 2025, 06:18 AM IST
Congress

ಸಾರಾಂಶ

ಬಿಹಾರ ವಿಧಾನಸಭೆ ಚುನಾವಣೆ ಬೆನ್ನಲ್ಲೇ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ವಿದೇಶಕ್ಕೆ ತೆರಳಲಿದ್ದು, ಇದರಿಂದ ನ.15 ರಿಂದ ನ.20ರ ನಡುವೆ ನಡೆಯಲಿದೆ ಎನ್ನಲಾಗಿದ್ದ ‘ನವೆಂಬರ್‌ ಕ್ರಾಂತಿ’ಯ ಬೆಳವಣಿಗೆಗಳ ಬಗ್ಗೆ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿದೆ.

  ಬೆಂಗಳೂರು :  ಬಿಹಾರ ವಿಧಾನಸಭೆ ಚುನಾವಣೆ ಬೆನ್ನಲ್ಲೇ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ವಿದೇಶಕ್ಕೆ ತೆರಳಲಿದ್ದು, ಇದರಿಂದ ನ.15 ರಿಂದ ನ.20ರ ನಡುವೆ ನಡೆಯಲಿದೆ ಎನ್ನಲಾಗಿದ್ದ ‘ನವೆಂಬರ್‌ ಕ್ರಾಂತಿ’ಯ ಬೆಳವಣಿಗೆಗಳ ಬಗ್ಗೆ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿದೆ.

ಸಚಿವ ಸಂಪುಟ ಪುನರ್‌ರಚನೆ ಸೇರಿ ವಿವಿಧ ವಿಷಯಗಳ ಕುರಿತು ನ.15ರ ಬಳಿಕ ದೆಹಲಿಗೆ ತೆರಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ವತಃ ಸ್ಪಷ್ಟಪಡಿಸಿದ್ದರು. ಇದೇ ವೇಳೆ ಅಥವಾ ಇದಕ್ಕೂ ಮೊದಲು ಡಿ.ಕೆ.ಶಿವಕುಮಾರ್‌ ಅವರು ದೆಹಲಿ ನಾಯಕರನ್ನು ಭೇಟಿ ಮಾಡಲಿದ್ದಾರೆ. ಹೀಗಾಗಿ ನ.15 ರಿಂದ ನ.20ರ ನಡುವೆ ಸಂಪುಟ ಪುನರ್‌ರಚನೆ, ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮತ್ತಿತರ ಬೆಳವಣಿಗೆಗಳನ್ನು ನಿರೀಕ್ಷಿಸಲಾಗಿತ್ತು.

ಬಿಹಾರ ಚುನಾವಣೆ ಫಲಿತಾಂಶ ಬಳಿಕ ವಿದೇಶಕ್ಕೆ

ಆದರೆ, ರಾಹುಲ್‌ಗಾಂಧಿ ಅವರು ನ.14 ರಂದು ಬಿಹಾರ ಚುನಾವಣೆ ಫಲಿತಾಂಶ ಬಳಿಕ ವಿದೇಶಕ್ಕೆ ತೆರಳಲಿದ್ದಾರೆ. ಹೀಗಾಗಿ ರಾಜ್ಯದ ನಾಯಕರ ಭೇಟಿಗೆ ಸಿಗುವುದಿಲ್ಲ. ರಾಹುಲ್‌ಗಾಂಧಿ ದೇಶಕ್ಕೆ ವಾಪಸ್‌ ಬರುವವರೆಗೂ ರಾಜ್ಯ ಕಾಂಗ್ರೆಸ್‌ನ ಬೆಳವಣಿಗೆಗಳು ಮುಂದೂಡಲ್ಪಡುತ್ತವೆಯೇ ಅಥವಾ ಅವರ ಅನುಪಸ್ಥಿತಿಯಲ್ಲಿ ಅವರ ಸಲಹೆ-ಸೂಚನೆ ಪಡೆದು ನಿರ್ಧಾರ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ರಾಹುಲ್‌ಗಾಂಧಿ ಅವರು ವಿದೇಶ ಪ್ರವಾಸಕ್ಕೆ ಹೋಗುವ ಮೊದಲೇ ಸೂಚನೆ ನೀಡಿ ಸಂಪುಟ ಪುನರ್‌ ರಚನೆ ಸೇರಿ ವಿವಿಧ ವಿಷಯಗಳ ಬಗ್ಗೆ ಎಐಸಿಸಿ ಅಧ್ಯಕ್ಷರು, ರಾಜ್ಯ ನಾಯಕರಿಗೆ ಸ್ಪಷ್ಟನೆ ನೀಡಲಿದ್ದಾರೆಯೇ ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಹೀಗಾಗಿ ರಾಹುಲ್‌ಗಾಂಧಿ ಅವರ ವಿದೇಶ ಪ್ರವಾಸ ರಾಜ್ಯ ರಾಜಕೀಯ ಬೆಳವಣಿಗೆಗಳ ಮೇಲೆ ಬೀರಲಿರುವ ಪರಿಣಾಮದ ಬಗ್ಗೆ ತೀವ್ರ ಕುತೂಹಲ ಮೂಡಿದೆ. 

ಸಿದ್ದು ಎಷ್ಟು ದಿನ ಸಿಎಂ ಆಗಿರ್ತಾರೋ ಅಷ್ಟೂ ದಿನಅವ್ರೇ ಸಿಎಂ: ಡಿಕೆಸು

ಬೆಂಗಳೂರು: ‘ಸಿದ್ದರಾಮಯ್ಯ ಅವರು ಎಷ್ಟು ದಿನ ಮುಖ್ಯಮಂತ್ರಿಯಾಗಿ ಇರುತ್ತಾರೋ ಅಷ್ಟೂ ದಿನ ಅವರೇ ಮುಖ್ಯಮಂತ್ರಿಗಳು’ ಎಂದು ಮಾಜಿ ಸಂಸದ ಹಾಗೂ ಬಮೂಲ್‌ ಅಧ್ಯಕ್ಷ ಡಿ.ಕೆ.ಸುರೇಶ್‌ ಹೇಳಿದ್ದಾರೆ. ಜತೆಗೆ, ‘ಅವರಿಗೆ ವಯಸ್ಸಾಗಿಲ್ಲ, ಮುಂದಿನ ಚುನಾವಣೆಗಳನ್ನು ಅವರ ನಾಯಕತ್ವದಲ್ಲೇ ಎದುರಿಸುತ್ತೇವೆ’ ಎಂದೂ ಡಿ.ಕೆ.ಸುರೇಶ್‌ ತಿಳಿಸಿದ್ದಾರೆ.

ನ.14ರಂದು ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟ ರಾಹುಲ್‌ ಗಾಂಧಿ ವಿದೇಶ ಪ್ರವಾಸಕ್ಕೆ

ಹೀಗಾದಲ್ಲಿ ನ.15ರ ಬಳಿಕ ರಾಹುಲ್‌ ಜತೆ ನಡೆಸಲು ಉದ್ದೇಶಿಸಿದ್ದ ಸಿಎಂ, ಡಿಸಿಎಂ ಸಭೆ ವಿಳಂಬ ಸಾಧ್ಯತೆ

ರಾಹುಲ್‌ ಅನುಪಸ್ಥಿತಿಯಲ್ಲಿ ಸಂಪುಟ ಪುನರ್‌ರಚನೆ, ನಾಯಕತ್ವ ಬದಲಾವಣೆ ಚರ್ಚೆ ನಡೆವ ಬಗ್ಗೆ ಅನುಮಾನ

ರಾಹುಲ್‌ ವಿದೇಶದಿಂದಲೇ ದೂರವಾಣಿ ಮೂಲಕ ಪಕ್ಷದ ನಾಯಕರಿಗೆ ಸೂಚನೆ ನೀಡುವ ಸಾಧ್ಯತೆ ಇಲ್ಲದಿಲ್ಲ

ಒಂದು ವೇಳೆ ರಾಗಾ ಮರಳಿದ ಬಳಿಕವೇ ಭೇಟಿ ಎಂದಾದಲ್ಲಿ ಸಂಪುಟ ಪುನರ್‌ರಚನೆ ಮುಂದೂಡಿಕೆ ಸಾಧ್ಯತೆ

PREV
Read more Articles on

Recommended Stories

ಹರ್ಯಾಣದಲ್ಲಿ ಬ್ರೆಜಿಲ್‌ ಮಾಡೆಲ್‌ನಿಂದ ಮತ!
ಹಾಯ್‌ ಎಂದ ತೇಜಸ್ವಿ, ತಿರುಗಿಯೂ ನೋಡದ ತೇಜ್‌!