ಸ್ಟಿಂಗ್‌ ಕೇಸಲ್ಲಿ ಸರ್ಕಾರ ಉಳಿಸಿಕೊಳ್ಳಲು ತರಾತುರಿಯಲ್ಲಿ ಸಿದ್ದುಗೆ ಕ್ಲೀನ್‌ ಚಿಟ್‌: ಎಚ್ಡಿಕೆ

Published : Nov 03, 2026, 07:46 AM IST
Siddaramaiah HD Kumaraswamy

ಸಾರಾಂಶ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಡೆದ ಸ್ಟಿಂಗ್‌ ಆಪರೇಷನ್‌ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಸಿದ್ದರಾಮಯ್ಯಗೆ ಕ್ಲೀನ್ ಚಿಟ್‌ ಕೊಟ್ಟಿದ್ದಾರೆ. ರಾಜ್ಯ ಸರ್ಕಾರ ಉಳಿಸಿಕೊಳ್ಳುವ ತರಾತುರಿಯಲ್ಲಿ ಈ ರೀತಿ ಮಾಡಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಡೆದ ಸ್ಟಿಂಗ್‌ ಆಪರೇಷನ್‌ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಸಿದ್ದರಾಮಯ್ಯಗೆ ಕ್ಲೀನ್ ಚಿಟ್‌ ಕೊಟ್ಟಿದ್ದಾರೆ. ರಾಜ್ಯ ಸರ್ಕಾರ ಉಳಿಸಿಕೊಳ್ಳುವ ತರಾತುರಿಯಲ್ಲಿ ಈ ರೀತಿ ಮಾಡಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸ್ಟಿಂಗ್ ಆಪರೇಷನ್ ಎನ್ನುವುದು ಕಟ್ಟುಕಥೆ’ ಎಂದು ಪತ್ರಿಕಾ ಹೇಳಿಕೆಯಲ್ಲಿ ಪೊಲೀಸರು ಹೇಳಿದ್ದಾರೆ. ಕಟ್ಟುಕಥೆ ಎಂದಾದರೆ ಇನ್ನೂ ತನಿಖೆ ಏಕೆ ಮಾಡುತ್ತಿರುವಿರಿ? ಯಾರ ವಿರುದ್ಧ ಸಂಚು ಮಾಡಲು ತನಿಖೆ ಮುಂದುವರೆದಿದೆ’ ಎಂದು ಅವರು ಕಿಡಿಕಾರಿದ್ದಾರೆ.

ಸೋಮವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಸ್ಟಿಂಗ್‌ ವಿಡಿಯೋ ರೆಕಾರ್ಡ್‌ ಮಾಡಿದ ಮೂಲ ಮೊಬೈಲ್‌ ಅನ್ನು ಫೊರೆನ್ಸಿಕ್‌ ಲ್ಯಾಬ್‌ಗೆ ಕಳುಹಿಸಿದ್ದಾರಂತೆ. ಇನ್ನೂ ಅದರ ವರದಿ ಬಂದಿಲ್ಲ. ಅಲ್ಲದೆ, ನಮ್ಮ ಮನೆಯಲ್ಲಿ ಪೊಲೀಸರು ಶೋಧ ಮಾಡಿದ್ದಾರಂತೆ. ಅಂದರೆ, ಇನ್ನು ತನಿಖೆ ನಡೆಯುತ್ತಿರುವಾಗ ಸಿದ್ದರಾಮಯ್ಯಗೆ ಕ್ಲೀನ್‌ ಚಿಟ್‌ ಹೇಗೆ ಕೊಟ್ಟರು? ನಮ್ಮ ಮನೆ ಮಹಜರು ಮಾಡಲು ಪೊಲೀಸರು ಬಂದಿದ್ದರ ಬಗ್ಗೆ ನಗರ ಪೊಲೀಸ್‌ ಆಯುಕ್ತ ಮತ್ತು ಗೃಹ ಸಚಿವರನ್ನು ಕೇಳಿ. ಈ ಮಹಜರ್‌ ಬಗ್ಗೆ ನನಗೇನೂ ಗೊತ್ತಿಲ್ಲ. ನಾನೂ ಮಾಧ್ಯಮದಲ್ಲಿ ಸುದ್ದಿ ನೋಡಿದೆ ಎಂದು ಹೇಳಿದರು.

ವಿಡಿಯೋ ಚಿತ್ರೀಕರಣ ಆಗಿದ್ದು ಎಲ್ಲಿ?:

ಸ್ಟಿಂಗ್‌ ಆಪರೇಷನ್‌ನಲ್ಲಿ ನಮ್ಮ ಪಕ್ಷದವರೇ ಇದ್ದಾರೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಸಿಸಿಬಿ ಪೊಲೀಸರು ಸಿದ್ದರಾಮಯ್ಯಗೆ ಕ್ಲೀನ್‌ ಚಿಟ್‌ ಹೇಗೆ ಕೊಟ್ಟರು? ಸರ್ಕಾರ ಉಳಿಸಿಕೊಳ್ಳಲು ತರಾತುರಿಯಲ್ಲಿ ಕ್ಲೀನ್‌ ಚಿಟ್ ಕೊಟ್ಟಿದ್ದಾರೆ. ಫೊರೆನ್ಸಿಕ್ ಲ್ಯಾಬ್‌ ವರದಿ ಬರುವ ಮುನ್ನವೇ ನಿಮ್ಮ ತನಿಖೆ ಇನ್ನೂ ಮುಂದೆ ಹೋಗಿದೆ. ಈ ಸ್ಟಿಂಗ್‌ ವಿಡಿಯೋ ಚಿತ್ರೀಕರಣ ಆಗಿದ್ದು ಎಲ್ಲಿ? ಇದರ ಹಿಂದಿನ ದುರುದ್ದೇಶವೇನು? ಈ ಬಗ್ಗೆ ಏನಾದರೂ ತನಿಖೆ ಮಾಡಿದ್ದೀರಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಈ ಸ್ಟಿಂಗ್ ನಲ್ಲಿ ಇರುವ ವ್ಯಕ್ತಿ ಮನೆಗೆ ಸಿದ್ದರಾಮಯ್ಯ ಯಾಕೆ ಹೋಗಿದ್ದರು? ಕೃಪಾ ಆಳ್ವ ಅವರನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಮಾಡಿದ್ದು ಇದೇ ಸಿದ್ದರಾಮಯ್ಯ. 2023ರಲ್ಲಿ ಸ್ಟಿಂಗ್‌ ವಿಡಿಯೋ ಚಿತ್ರೀಕರಣ ಮಾಡಿದ್ದು ನಾನಲ್ಲ. ಖಾಸಗಿ ಸುದ್ದಿ ವಾಹಿನಿ ಮುಖ್ಯಸ್ಥ ಹಾಗೂ ಕೃಪಾ ಆಳ್ವ ಮತ್ತು ಮತ್ತೊಬ್ಬ ವಯಸ್ಸಾದ ವ್ಯಕ್ತಿ. ಪೊಲೀಸ್‌ ಅಧಿಕಾರಿಗಳು ಇವರ ಬಗ್ಗೆ ತನಿಖೆ ಮಾಡಿದ್ದಾರಾ ಎಂದು ಕೇಳಿದರು.

ಆ ಹೆಣ್ಣು ಮಗಳು ಕೃಪಾ ಆಳ್ವಗೆ ಹೇಗೆ ಪರಿಚಯ?

ನನ್ನ ಮೇಲೆ ಲೈಂಗಿಕ ದೌರ್ಜನ್ಯ ಆಗಿದೆ ಎಂದು ಆ ಹೆಣ್ಣು ಮಗಳು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವಗೆ ಇ-ಮೇಲ್‌ ಮಾಡಿದ್ದಳಲ್ಲ, ಆ ರೆಕಾರ್ಡ್‌ ಎಲ್ಲಿಗೆ ಹೋಯಿತು? ಆ ಹೆಣ್ಣುಮಗಳಿಗೂ ಕೃಪಾ ಆಳ್ವಗೆ ಹೇಗೆ ಪರಿಚಯ ಎಂದು ತನಿಖೆ ಆಗಬೇಕು ಅಲ್ಲವೇ? ಸಿದ್ದರಾಮಯ್ಯ ಅವರಿಗೆ ಎಷ್ಟು ದಿನದಿಂದ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದರು ಎಂಬುದು ತನಿಖೆ ಆಗಬೇಕಲ್ಲವೇ ಎಂದು ಪ್ರಶ್ನಿಸಿದರು.

ಹೇಳಿಕೆ ಬದಲಿಸಿದ್ದರೆ, ಆಕೆಯೂ ಪಿತೂರಿ ಭಾಗ:

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಡೆದಿರುವ ಸ್ಟಿಂಗ್ ಆಪರೇಷನ್ ಸಂದರ್ಭದಲ್ಲಿ ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದ ಕೇರಳದ ಮಹಿಳೆ, ನಂತರ ಹೇಳಿಕೆ ಬದಲಿಸಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಒಂದು ವೇಳೆ ಆಕೆ ಹೇಳಿಕೆ ಬದಲಿಸಿದ್ದರೆ ಅವರನ್ನು ಕರೆತಂದು ನ್ಯಾಯಾಲಯದ ಮುಂದೆ ಯಾಕೆ ಹಾಜರುಪಡಿಸಿಲ್ಲ? ಆಕೆ ಹೇಳಿಕೆಗಳನ್ನು ಬದಲಿಸಿದ್ದರೆ ಈ ಸ್ಟಿಂಗ್ ಪಿತೂರಿಯ ಭಾಗವೇ ಆಗುತ್ತಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಆರೋಪಿ ಎಂದು ಹೆಸರಿಸಬೇಕಾಗುತ್ತದೆ. ಇದನ್ನು ಪೊಲೀಸರು ಮಾಡಿದ್ದಾರೆಯೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತಿಲ್ಲ:

ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತಿದೆ ಎನ್ನುವುದೇ ಅನುಮಾನ. ಸ್ಟಿಂಗ್ ಆಪರೇಷನ್ ವಿಡಿಯೋ ಅಸಲಿಯೇ ಅಥವಾ ನಕಲಿಯೇ ಅಥವಾ ಉದ್ದೇಶಪೂರ್ವಕವಾಗಿ ಎಡಿಟ್ ಮಾಡಲಾಗಿದೆಯೇ ಅಥವಾ ವ್ಯವಸ್ಥಿತವಾಗಿ ರೂಪಿಸಲಾಗಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸಬೇಕು. ತಮ್ಮ ಹೊಣೆಗಾರಿಕೆಯನ್ನು ಅವರು ಸರಿಯಾಗಿ ನಿರ್ವಹಣೆ ಮಾಡುತ್ತಿದ್ದಾರೆಯೇ ಎಂದು ಕೇಳಿದರು.

ತನಿಖೆ ನೆಪದಲ್ಲಿ ಪೊಲೀಸರು ನಮ್ಮ ಕಾರ್ಯಕರ್ತರನ್ನು ಬೆದರಿಸುತ್ತಿದ್ದಾರೆ. ಒಂದೇ ದಿಕ್ಕಿನಲ್ಲಿ ತನಿಖೆ ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಾಗುತ್ತಿದೆ. ಬೆಂಗಳೂರು ಪೊಲೀಸರು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆ ಹಾಗೂ ಪೊಲೀಸ್ ಆಯುಕ್ತ ನೀಡಿರುವ ಹೇಳಿಕೆಗಳಲ್ಲಿ ಪರಸ್ಪರ ವೈರುಧ್ಯಗಳಿವೆ. ಅಪ್ಲೋಡ್ ಮಾಡಿರುವ ವಿಷಯದ ಬಗ್ಗೆ ಇವರು ತೋರಿಸುತ್ತಿರುವ ಕಾಳಜಿ, ಸ್ಟಿಂಗ್ ಮಾಡಿ ವಿಡಿಯೋ ರೆಕಾರ್ಡಿಂಗ್ ಮಾಡಿರುವ ಪಿತೂರಿಯ ಬಗ್ಗೆ ತನಿಖೆ ಮಾಡುತ್ತಿಲ್ಲ ಎಂದು ಕುಮಾರಸ್ವಾಮಿ ದೂರಿದರು.

ಮಟ್ಟ ಹಾಕದಿದ್ದರೆ ಪೊಲೀಸ್‌ ಇಲಾಖೆಗೆ ಕಂಟಕ:

ನೂರಾರು ಸ್ಪ್ರಿಂಗ್ ವಿಡಿಯೋಗಳನ್ನು ಮಾಡಿಕೊಂಡು ಅಧಿಕಾರಿಗಳು, ಉದ್ದಿಮೆದಾರರು ಹಾಗೂ ಅನೇಕ ಗಣ್ಯ ವ್ಯಕ್ತಿಗಳನ್ನು ಬ್ಲ್ಯಾಕ್‌ ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿರುವ ಪ್ರವೃತ್ತಿಯನ್ನು ಮಟ್ಟ ಹಾಕದಿದ್ದರೆ ಅದು ಪೊಲೀಸ್ ಇಲಾಖೆಗೆ ಕಂಟಕವಾಗುತ್ತದೆ. ನಾನು ಯಾವುದೇ ವ್ಯಕ್ತಿಯನ್ನು ವೈಯಕ್ತಿಕವಾಗಿ ಗುರಿ ಮಾಡಿಕೊಂಡು ಈ ವಿಷಯ ಹೇಳುತ್ತಿಲ್ಲ. ಬದಲಿಗೆ ಸಮಾಜದ ಹಿತದೃಷ್ಟಿಯಿಂದ ಈ ಮಾತು ಹೇಳುತ್ತಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ನಾನೇನು ಕೆಪಿಎಸ್ಸಿ ಅಕ್ರಮ ಮುಚ್ಚಿ ಹಾಕಲು ಹೇಳಿದ್ನಾ: ಕುಮಾರಸ್ವಾಮಿ
ಪ್ರಜ್ವಲ್‌ ಕೇಸಲ್ಲಿ ಸಿಕ್ಕಂತೆ ಸ್ಟಿಂಗ್‌ ತನಿಖೆಗೂ ಪ್ರಶಸ್ತಿ ಸಿಗುತ್ತೆ: ಖರ್ಗೆ