ಪಹಲ್ಗಾಂ ದಾಳಿಗೆ ಕೇಂದ್ರದ ವೈಫಲ್ಯ ಕಾರಣ : ಸಿದ್ದು ಕಿಡಿ

KannadaprabhaNewsNetwork | Updated : Apr 29 2025, 04:38 AM IST

ಸಾರಾಂಶ

ಪಹಲ್ಗಾಂ ಭಯೋತ್ಪಾದಕ ಘಟನೆಗೆ ಸಂಬಂಧಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ದಾಳಿಗೆ ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯವೇ ಕಾರಣ’ ಎಂದು ಮತ್ತೆ ಅರೋಪಿಸಿದ್ದಾರೆ.

 ಬೆಳಗಾವಿ :  ಪಹಲ್ಗಾಂ ಭಯೋತ್ಪಾದಕ ಘಟನೆಗೆ ಸಂಬಂಧಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ದಾಳಿಗೆ ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯವೇ ಕಾರಣ’ ಎಂದು ಮತ್ತೆ ಅರೋಪಿಸಿದ್ದಾರೆ.

ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಸೋಮವಾರ ಮಾತನಾಡಿದ ಸಿಎಂ, ‘ಕಾಶ್ಮೀರದಲ್ಲಿ ಕರ್ನಾಟಕದ ಮೂವರು ಸೇರಿದಂತೆ 28 ಅಮಾಯಕ ಭಾರತೀಯರನ್ನು ಉಗ್ರಗಾಮಿಗಳು ರಾಜಾರೋಷವಾಗಿ ಬಂದು ಅಮಾನುಷವಾಗಿ ಹತ್ಯೆ ಮಾಡಿ ಹೋಗಿದ್ದು ಕೇಂದ್ರ ಸರ್ಕಾರದ ಭದ್ರತಾ ಲೋಪ ಅಲ್ಲವೇ? ಭಾರತೀಯರಿಗೆ ರಕ್ಷಣೆ ಕೊಡುವುದರಲ್ಲಿ ವಿಫಲ ಆಗಿರುವುದನ್ನು ನಾವು ಭಾರತೀಯರು ಪ್ರಶ್ನಿಸಬಾರದೇ?’ ಎಂದು ಕೇಳಿದರು.

‘ಪಾಕಿಸ್ತಾನದ ವಿರುದ್ಧ ಯುದ್ಧ ಅನಗತ್ಯ. ಯುದ್ಧ ಕೊನೆಯ ಅಸ್ತ್ರ ಆಗಬೇಕು’ ಎಂಬ ತಮ್ಮ ಇತ್ತೀಚಿನ ಹೇಳಿಕೆ ಬಗ್ಗೆ ಟೀಕೆ ಉಂಟಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಪಹಲ್ಗಾಂನಲ್ಲಿ ಉಗ್ರರ ದಾಳಿಯಾದಾಗ ಒಬ್ಬನೇ ಒಬ್ಬ ಪೊಲೀಸ್‌ ಅಲ್ಲಿ ಇರಲಿಲ್ಲ. ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು? ಅಮಾಯಕ 28 ಜನ ಪ್ರಾಣ ಕಳೆದುಕೊಂಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ವೈಫಲ್ಯ ಕಾರಣ ಅಲ್ಲವೆ? ಅದನ್ನು ಮುಚ್ಚಿಹಾಕಲು ನನ್ನ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಭಯೋತ್ಪಾದನೆ ಬೆಳೆಯಲು ಬಿಟ್ಟು ನನ್ನ ಮೇಲೆ ಗೂಬೆ ಕೂರಿಸುವ ಯತ್ನ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ನಾವು ದೇಶದ ರಕ್ಷಣೆ, ಸಾರ್ವಭೌಮತೆಗೆ ಧಕ್ಕೆ ಬರಲು ಬಿಡುವುದಿಲ್ಲ. ಬ್ರಿಟೀಷರನ್ನು ದೇಶಬಿಟ್ಟು ಓಡಿಸಿದ್ದು ನಾವು’ ಎಂದು ಹರಿಹಾಯ್ದರು.

Share this article