ಮೋಹನ ಹಂಡ್ರಂಗಿ
ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಸಂಬಂಧ ಆರೋಪಿಗಳಿಂದ ಹಣ ಜಪ್ತಿ ಮಾಡುವ ವಿಚಾರದಲ್ಲಿ ವಿಶೇಷ ತನಿಖಾ ತಂಡ(ಎಸ್‌ಐಟಿ) ಹಾಗೂ ಜಾರಿ ನಿರ್ದೇಶನಾಲಯದ (ಇಡಿ) ನಡುವೆ ತೀವ್ರ ತಿಕ್ಕಾಟ ಶುರುವಾಗಿದೆ.
ಒಂದೇ ಪ್ರಕರಣದಲ್ಲಿ ಎರಡು ತನಿಖಾ ಸಂಸ್ಥೆಗಳು ಏಕಕಾಲಕ್ಕೆ ತನಿಖೆ ನಡೆಸುತ್ತಿರುವುದರಿಂದ ಈ ಸಮಸ್ಯೆ ಎದುರಾಗಿದೆ. ಈಗಾಗಲೇ ಪ್ರಕರಣ ಸಂಬಂಧ ಎಸ್ಐಟಿ 11 ಆರೋಪಿಗಳನ್ನು ಬಂಧಿಸಿ ಸುಮಾರು 40 ಕೋಟಿ ರು. ಜಪ್ತಿ ಮಾಡಿದೆ. ಬಾಕಿ ಉಳಿದಿರುವ 49 ಕೋಟಿ ರು. ಜಪ್ತಿ ಸಂಬಂಧ ತನಿಖೆ ತೀವ್ರಗೊಳಿಸಿದೆ. ಈ ನಡುವೆ ಇಡಿ ತನಿಖೆ ಆರಂಭಿಸಿ ಹಗರಣ ಸಂಬಂಧ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದೆ. ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಬಂಧನಕ್ಕೆ ಶೋಧ ಕಾರ್ಯ ತೀವ್ರಗೊಳಿಸಿದೆ.
ನಿಗಮದ ಹಗರಣ ಸಂಬಂಧ ಈಗಾಗಲೇ ವಂಚನೆ, ನಕಲಿ ದಾಖಲೆ ಸೃಷ್ಟಿ, ಅಪರಾಧಿಕ ಸಂಚು ಆರೋಪದಡಿ ತನಿಖೆ ನಡೆಸುತ್ತಿದ್ದೇವೆ. ಈ ನಡುವೆ ಅಕ್ರಮ ಹಣ ವರ್ಗಾವಣೆ ಸಂಬಂಧ ಇಡಿ ಪ್ರತ್ಯೇಕ ತನಿಖೆ ನಡೆಸುತ್ತಿದೆ. ಈಗಾಗಲೇ ನಾವು ಆರೋಪಿಗಳು ಹಣ ವರ್ಗಾವಣೆ ಮಾಡಿದ್ದ ಬ್ಯಾಂಕ್‌ಗಳಿಗೆ ಪತ್ರ ಬರೆದು ಮಾಹಿತಿ ಕೇಳಿದ್ದೇವೆ. ಈಗ ಇಡಿ ಸಹ ತನಿಖೆ ಆರಂಭಿಸಿರುವುದರಿಂದ ಆ ಬ್ಯಾಂಕ್‌ಗಳು ಹೇಗೆ ಸ್ಪಂದಿಸಲಿವೆ ಎಂದು ನೋಡಬೇಕು. ಆರೋಪಿಗಳಿಂದ ನಿಗಮಕ್ಕೆ ಸೇರಿದ ಇನ್ನೂ 49 ಕೋಟಿ ರು. ಜಪ್ತಿ ಮಾಡಬೇಕು. ತನಿಖೆ ನಡುವೆ ಇಡಿ ಪ್ರವೇಶದಿಂದ ಈ ವಿಚಾರದಲ್ಲಿ ಗೊಂದಲ ಉಂಟಾಗಿದೆ ಎಂದು ಎಸ್ಐಟಿ ಉನ್ನತ ಮೂಲಗಳು ತಿಳಿಸಿವೆ.
40 ಕೋಟಿ ರು. ಜಪ್ತಿ ಮಾಡಿದ ಎಸ್‌ಐಟಿ:
ಆರೋಪಿಗಳು ವ್ಯವಸ್ಥಿತ ಸಂಚು ರೂಪಿಸಿ ಹೈದರಾಬಾದ್‌ನ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ 18 ನಕಲಿ ಖಾತೆ ತೆರೆದು ಬಳಿಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಿಂದ ಈ 18 ನಕಲಿ ಖಾತೆಗಳಿಗೆ 94.73 ಕೋಟಿ ರು. ವರ್ಗಾಯಿಸಿದ್ದರು. ಇದರಲ್ಲಿ ಬ್ಯಾಂಕ್ ಅಧಿಕಾರಿಗಳು ಶಾಮೀಲಾಗಿರುವುದು ಎಸ್‌ಐಟಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಹಗರಣ ಬೆಳಕಿಗೆ ಬಂದ ಬೆನ್ನಲ್ಲೇ ಆರೋಪಿಗಳು 5 ಕೋಟಿ ರು. ಹಣವನ್ನು ನಿಗಮದ ಖಾತೆಗೆ ಜಮೆ ಮಾಡಿದ್ದರು. ಉಳಿದ 89 ಕೋಟಿ ರು. ಪೈಕಿ ನಗದು, ಚಿನ್ನಾಭರಣ, ಐಷಾರಾಮಿ ಕಾರುಗಳನ್ನು ಮಾಲೀಕರಿಗೆ ಮರಳಿಸುವ ಮುಖಾಂತರ ಸುಮಾರು 40 ಕೋಟಿ ರು. ಹಣವನ್ನು ಎಸ್‌ಐಟಿ ಅಧಿಕಾರಿಗಳು ಆರೋಪಿಗಳಿಂದ ಜಪ್ತಿ ಮಾಡಿದ್ದಾರೆ.
40 ಕೋಟಿ ರು. ಫ್ರೀಜ್:
ಎಸ್‌ಐಟಿ ಅಧಿಕಾರಿಗಳು ಪ್ರಕರಣ ಸಂಬಂಧ ಆರೋಪಿ ಸತ್ಯನಾರಾಯಣ ಇಟಕಾರಿ ಅಧ್ಯಕ್ಷನಾಗಿರುವ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಖಾತೆಯಲ್ಲಿ 40 ಕೋಟಿ ರು. ಫ್ರೀಜ್ ಮಾಡಿದ್ದಾರೆ. ಈ ಹಣ ನಿಗಮಕ್ಕೆ ಸೇರಿದ್ದೇ ಅಥವಾ ಸೊಸೈಟಿಯ ಠೇವಣಿದಾರರಿಗೆ ಸೇರಿದ್ದೇ ಎಂಬುದರ ಬಗ್ಗೆ ತನಿಖೆ ಮಾಡುತ್ತಿದ್ದಾರೆ. ಇದರ ಜತೆಗೆ ಹೈದರಾಬಾದ್, ಚೆನ್ನೈ, ಮುಂಬೈ, ಬೆಂಗಳೂರು ಸೇರಿದಂತೆ ವಿವಿಧ ಬ್ಯಾಂಕ್‌ಗಳ 193ಕ್ಕೂ ಅಧಿಕ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ಮಾಹಿತಿ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ಈಗಾಗಲೇ ಎಸ್‌ಐಟಿ ಪ್ರಕರಣದ ತನಿಖೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಈ ಮಧ್ಯೆ ಇಡಿ ತನಿಖೆಗೆ ಪ್ರವೇಶ ಪಡೆದಿರುವುದರಿಂದ ಎರಡೂ ತನಿಖಾ ಸಂಸ್ಥೆಗಳ ನಡುವೆ ಗೊಂದಲ ಏರ್ಪಟ್ಟಿದೆ. ಈ ಗೊಂದಲ ಹೇಗೆ ಬಗೆಹರಿಯಲಿದೆ ಎಂಬ ಕುತೂಹಲವೂ ಸೃಷ್ಟಿಯಾಗಿದೆ.