ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಡಾ.ನಾರಾಯಣಸ್ವಾಮಿ ನಾಮಪತ್ರ

KannadaprabhaNewsNetwork | Updated : May 16 2024, 04:32 AM IST

ಸಾರಾಂಶ

ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಾಗ ಡಿಸೆಂಬರ್ ಒಳಗೆ ೭ನೇ ವೇತನ ಆಯೋಗ, ಒಪಿಎಸ್ ಜಾರಿ ಮಾಡುವ ಭರವಸೆ ಈಡೇರಿಸುವುದಾಗಿ ತಿಳಿಸಿ ಇದೀಗ ವಿಫಲವಾಗಿದೆ, ಜತೆಗೆ ಒಪಿಎಸ್ ಜಾರಿಯ ತನ್ನ ಪ್ರಣಾಳಿಕೆಯಿಂದಲೂ ಹಿಂದೆ ಸರಿದಿದೆ

 ಕೋಲಾರ :  ಕೋಲಾರ ಜಿಲ್ಲೆ ಸೇರಿರುವ ವಿಧಾನಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹಾಲಿ ವಿಧಾನಪರಿಷತ್ ಸದಸ್ಯ ಡಾ.ವೈ.ಎ. ನಾರಾಯಣಸ್ವಾಮಿ ತುಮಕೂರಿನಲ್ಲಿ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಹಿರಿಯ ಮುಖಂಡ ಗೋವಿಂದ ಕಾರಜೋಳ ಸಾಥ್ ನೀಡಿದರು.

ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಡಾ.ವೈ.ಎ. ನಾರಾಯಣಸ್ವಾಮಿ, ಸತತವಾಗಿ ಶಿಕ್ಷಕರ ಸಮಸ್ಯೆಗಳಿಗೆ ಸದನದ ಹೊರಗೂ, ಒಳಗೂ ನಿರಂತರ ಹೋರಾಟ ಮಾಡಿದ್ದೇನೆ, ಅನೇಕ ಬೇಡಿಕೆಗಳ ಈಡೇರಿಕೆಗೆ ಸ್ಪಂದಿಸಿರುವುದರಿಂದ ಕ್ಷೇತ್ರದ ಗುರುವೃಂದ ನನ್ನೊಂದಿಗೆ ಇದ್ದು, ಅವರ ಆಶೀರ್ವಾದವೇ ನನಗೆ ಶ್ರೀರಕ್ಷೆ ಎಂದು ತಿಳಿಸಿದರು.

ಸರ್ಕಾರ ಒಪಿಎಸ್‌ ಜಾರಿ ಮಾಡಿಲ್ಲ

ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಾಗ ಡಿಸೆಂಬರ್ ಒಳಗೆ ೭ನೇ ವೇತನ ಆಯೋಗ, ಒಪಿಎಸ್ ಜಾರಿ ಮಾಡುವ ಭರವಸೆ ಈಡೇರಿಸುವುದಾಗಿ ತಿಳಿಸಿ ಇದೀಗ ವಿಫಲವಾಗಿದೆ, ಜತೆಗೆ ಒಪಿಎಸ್ ಜಾರಿಯ ತನ್ನ ಪ್ರಣಾಳಿಕೆಯಿಂದಲೂ ಹಿಂದೆ ಸರಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಸಿದ್ದರಾಮಯ್ಯ ಸರ್ಕಾರ ಶಿಕ್ಷಕರು ಮತ್ತು ನೌಕರರಿಗೆ ನೀಡಿರುವ ಭರವಸೆ ಈಡೇರಿಸಬೇಕು ಎಂದು ಒತ್ತಾಯಿಸಿ, ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಎನ್‌ಪಿಎಸ್ ರದ್ದು- ಒಪಿಎಸ್ ಜಾರಿ ಮಾಡುವ ಭರವಸೆ ನೀಡಿತ್ತು. ವಿಧಾನಸಭೆ ಮಾತ್ರವಲ್ಲ ಲೋಕಸಭಾ ಚುನಾವಣೆ ಮುಗಿದರೂ ಕಾರ್ಯಗತಗೊಳಿಸಲು ಮುಂದಾಗಿಲ್ಲ ಎಂದು ಟೀಕಿಸಿದರು.ಶಿಕ್ಷಕರ ಖಾಲಿ ಹುದ್ದೆ ತುಂಬಲು ಆಗ್ರಹಪ್ರತಿ ವರ್ಷ ಮಾರ್ಚ್‌ನಿಂದ ಮೇ ತಿಂಗಳ ನಡುವೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ, ಸಹಶಿಕ್ಷಕರಿಂದ ಮುಖ್ಯಶಿಕ್ಷಕರಾಗಿ ಬಡ್ತಿ, ಸಹಶಿಕ್ಷಕರಿಂದ ಉಪನ್ಯಾಸಕರಾಗಿ ಬಡ್ತಿ ಪ್ರಕ್ರಿಯೆಗಳನ್ನು ಮುಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ ಅವರು, ಅನುದಾನಿತ ಶಾಲೆಗಳಲ್ಲಿ 2015 ರಿಂದೀಚೆಗೆ ಹುದ್ದೆಗಳ ಭರ್ತಿಗೆ ಅವಕಾಶ ನೀಡಬೇಕು, ಶಿಕ್ಷಕರ ಕೊರತೆಯಿಂದ ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ಮೇಲಾಗುತ್ತಿರುವ ದುಷ್ಪರಿಣಾಮ ತಡೆಯಬೇಕು ಎಂದು ಆಗ್ರಹಿಸಿದರು.

ಖಾಸಗಿ ಶಾಲೆಗಳ ಶಿಕ್ಷಕರು ಕಡಿಮೆ ಸಂಬಳದೊಂದಿಗೆ ಅತ್ಯಂತ ಕಷ್ಟದ ಜೀವನ ನಡೆಸುತ್ತಿದ್ದು, ಈ ಶಿಕ್ಷಕರಿಗೆ ಆರೋಗ್ಯ ವಿಮೆ ಸೌಲಭ್ಯ ಒದಗಿಸಲು ಆಗ್ರಹಿಸಿದ ಅವರು, ಸರ್ಕಾರಿ ನೌಕರರು, ಶಿಕ್ಷಕರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಲು ಒತ್ತಾಯಿಸಿದರು.ಕಳೆದ ೧೮ ವರ್ಷಗಳಿಂದ ಆಗ್ನೇಯ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಸದನದ ಹೊರಗೆ, ಒಳಗೆ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ, ಜಾತಿ, ಮತ ಎಣಿಸದೇ ಶಿಕ್ಷಕ ಸ್ನೇಹಿಯಾಗಿದ್ದೇನೆ ಎಂದರು. ಈ ಸಂದರ್ಭದಲ್ಲಿ ವಿಧಾನಪರಿಷತ್ ಇಂಚರ ಗೋವಿಂದರಾಜು ಇದ್ದರು.

Share this article