ಕ್ಷೇತ್ರ ಮರುವಿಂಗಡಣೆ ವೇಳೆ ದಕ್ಷಿಣ ಭಾರತಕ್ಕೆ ಅನ್ಯಾಯ ಆಗಲ್ಲ - ನ್ಯಾಯಯುತ ಪಾಲು ಸಿಗುತ್ತೆ : ಅಮಿತ್‌

ಸಾರಾಂಶ

ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆಯಾದರೆ ತಮಿಳುನಾಡು 8 ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ ಎಂದು ಆರೋಪಿಸಿದ್ದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಆರೋಪ ಪೂರ್ಣ ಸುಳ್ಳು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿರುಗೇಟು ನೀಡಿದ್ದಾರೆ.

ಕೊಯಮತ್ತೂರು: ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆಯಾದರೆ ತಮಿಳುನಾಡು 8 ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ ಎಂದು ಆರೋಪಿಸಿದ್ದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಆರೋಪ ಪೂರ್ಣ ಸುಳ್ಳು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿರುಗೇಟು ನೀಡಿದ್ದಾರೆ. ಜೊತೆಗೆ ‘ಕ್ಷೇತ್ರ ಮರುವಿಂಗಡಣೆಯಾದರೆ ದಕ್ಷಿಣದ ರಾಜ್ಯಗಳಿಗೆ ನ್ಯಾಯಯುತ ಪಾಲು ಸಿಗುತ್ತದೆ. ಈ ರಾಜ್ಯಗಳು ಒಂದೇ ಒಂದು ಕ್ಷೇತ್ರ ಕೂಡ ಕಳೆದುಕೊಳ್ಳುವುದಿಲ್ಲ’ ಎಂದು ಭರವಸೆ ನೀಡಿದ್ದಾರೆ.

ಬುಧವಾರ ತಮಿಳುನಾಡಿನ ವಿವಿಧೆಡೆ ಬಿಜೆಪಿ ಕಚೇರಿ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ‘ಸೀಮಿತ ಗಡಿ ವಿಂಗಡಣೆಯಿಂದ ದಕ್ಷಿಣಕ್ಕೆ ಸಮಸ್ಯೆಯಾಗದ ಹಾಗೆ ಚರ್ಚಿಸಲು ಸಭೆ ನಡೆಸಲಾಗುತ್ತದೆ. ಸಿಎಂ ಸ್ಟಾಲಿನ್ ಮತ್ತು ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯಿಂದ ತಮಿಳುನಾಡಿನ ಜನ ಆತಂಕದಲ್ಲಿದ್ದಾರೆ. ಅವರು ಸಾರ್ವಜನಿಕರ ಹಾದಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಲೋಕಸಭೆಯಲ್ಲಿ ಮೋದಿ ಸರ್ಕಾರ ಸ್ಪಷ್ಟಪಡಿಸಿರುವ ಪ್ರಕಾರ, ಕ್ಷೇತ್ರ ಪುರ್ನವಿಂಗಡಣೆಯ ನಂತರ ಅನುಪಾತದ ಆಧಾರದಲ್ಲಿ ದಕ್ಷಿಣದ ಯಾವುದೇ ಕ್ಷೇತ್ರಗಳಲ್ಲಿಯೂ ಒಂದೂ ಲೋಕಸಭಾ ಕ್ಷೇತ್ರ ನಷ್ಟವಾಗುವುದಿಲ್ಲ. ದಕ್ಷಿಣದ ಜನರ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು ಮೋದಿಯವರು ಅನುಪಾತದ ಆಧಾರದಲ್ಲಿ ಒಂದು ಕ್ಷೇತ್ರವೂ ನಷ್ಟ ಆಗದಂತೆ ನೋಡಿಕೊಳ್ಳುತ್ತಾರೆ. ಹೆಚ್ಚಳವಾದರೂ ದಕ್ಷಿಣಕ್ಕೂ ಸಮಪಾಲು ಸಿಗುತ್ತದೆ. ಇದರಲ್ಲಿ ಯಾವುದೇ ಸಂಶಯವಿಲ್ಲ’ ಎಂದಿದ್ದಾರೆ.

ಇದೇ ವೇಳೆ ಕೇಂದ್ರ ಸರ್ಕಾರದಿಂದ ತಮಿಳುನಾಡಿಗೆ ಅನ್ಯಾಯವಾಗುತ್ತಿದೆ ಎನ್ನುವ ಸ್ಟಾಲಿನ್ ಆರೋಪಕ್ಕೂ ಪ್ರತಿಕ್ರಿಯಿಸಿದ್ದು, ‘ಯುಪಿಎ ಅವಧಿಯಲ್ಲಿ 1.52 ಲಕ್ಷ ಕೋಟಿ ರು. ಬಂದಿತ್ತು. ಆದರೆ ನರೇಂದ್ರ ಮೋದಿ ಸರ್ಕಾರ 2014-24ರ ಅವಧಿಯಲ್ಲಿ ತಮಿಳುನಾಡಿಗೆ 5 ಲಕ್ಷ ಅನುದಾನ ನೀಡಿದೆ. 1.43 ಲಕ್ಷ ಕೋಟಿ ರು.ಗಳನ್ನು ಮೂಲ ಸೌಕರ್ಯ ಅಭಿವೃದ್ಧಿಗೆ ನೀಡಿದೆ’ ಎಂದರು.

ತಮಿಳುನಾಡು ಸಿಎಂ ಸ್ಟಾಲಿನ್ ಅವರು, ಕ್ಷೇತ್ರ ಮರು ವಿಂಗಡಣೆಯಿಂದಾಗಿ ಸದ್ಯ ಇರುವ 39 ಲೋಕಸಭಾ ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳು ಕೈ ತಪ್ಪಿ ಹೋಗಲಿವೆ ಎಂದಿದ್ದರು. ಇದು ದಕ್ಷಿಣ ರಾಜ್ಯಗಳ ತಲೆ ಮೇಲೆ ನೇತಾಡುವ ಕತ್ತಿ ಎಂದಿದ್ದರು. ಅಲ್ಲದೇ ಈ ಬಗ್ಗೆ ಚರ್ಚಿಸಲು ಮಾ.5ರಂದು ಸರ್ವ ಪಕ್ಷಗಳ ಸಭೆ ಕರೆದಿದ್ದರು. ಈ ಬೆನ್ನಲ್ಲೇ ಶಾ ಸ್ಪಷ್ಟನೆ ನೀಡಿದ್ದಾರೆ.

ಅಮಿತ್‌ ಶಾ ಹೇಳಿದ್ದೇನು?

- ಕ್ಷೇತ್ರ ಪುನರ್‌ವಿಂಗಡಣೆಯಿಂದ ತಮಿಳುನಾಡು 8 ಸ್ಥಾನ ಕಳೆದುಕೊಳ್ಳುತ್ತೆಂಬುದು ಸುಳ್ಳು

- ಒಂದೇ ಒಂದು ಕ್ಷೇತ್ರವನ್ನೂ ದಕ್ಷಿಣ ಭಾರತ ಕಳೆದುಕೊಳ್ಳಲ್ಲ. ಸಮಾನ ಪಾಲು ಸಿಗುತ್ತದೆ

- ದಕ್ಷಿಣ ಭಾರತಕ್ಕೆ ಸಮಸ್ಯೆಯಾಗದ ರೀತಿಯಲ್ಲಿ ಚರ್ಚೆ ನಡೆಸಲು ಸಭೆ ಕರೆಯಲಾಗುತ್ತದೆ

- ಪ್ರಧಾನಿ ಮೋದಿ ಅವರು ಯಾವುದೇ ಕ್ಷೇತ್ರ ನಷ್ಟವಾಗದಂತೆ ನೋಡಿಕೊಳ್ಳುತ್ತಾರೆ

- ತಮಿಳುನಾಡು ಸಿಎಂ, ಅವರ ಪುತ್ರನ ಹೇಳಿಕೆಯಿಂದ ತಮಿಳು ಜನ ಆತಂಕದಲ್ಲಿದ್ದಾರೆ

- ಅವರಿಬ್ಬರೂ ಹಾದಿ ತಪ್ಪಿಸಲು ಯತ್ನಿಸುತ್ತಿದ್ದಾರೆ. ಮರುವಿಂಗಡಣೆ ಬಗ್ಗೆ ಸಂಶಯ ಬೇಡ

ಶಾ ಹೇಳಿಕೆ ಏಕೆ?

ಕ್ಷೇತ್ರ ಮರು ವಿಂಗಡಣೆ ಎಂಬುದು ಇದು ದಕ್ಷಿಣ ರಾಜ್ಯಗಳ ತಲೆ ಮೇಲೆ ನೇತಾಡುವ ಕತ್ತಿ. ಇದರಿಂದಾಗಿ, ತಮಿಳುನಾಡಿನಲ್ಲಿ ಸದ್ಯ ಇರುವ 39 ಲೋಕಸಭಾ ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳು ಕೈ ತಪ್ಪಿ ಹೋಗಲಿವೆ ಎಂದು ತ.ನಾಡು ಮುಖ್ಯಮಂತ್ರಿ ಸ್ಟಾಲಿನ್‌ ಹೇಳಿದ್ದರು. ಅಲ್ಲದೇ ಈ ಬಗ್ಗೆ ಚರ್ಚಿಸಲು ಮಾ.5ರಂದು ಸರ್ವ ಪಕ್ಷಗಳ ಸಭೆ ಕರೆದಿದ್ದರು. ಈ ಬೆನ್ನಲ್ಲೇ ಶಾ ಸ್ಪಷ್ಟನೆ ನೀಡಿದ್ದಾರೆ.

ಜೀವನದ ಅಂತಿಮ ಗುರಿಯೇ ಶಿವತ್ವ

ಕೊಯಮತ್ತೂರು: ‘ಜೀವನದ ಅಂತಿಮ ಗುರಿಯೇ ಶಿವತ್ವ. ಈಶ ಯೋಗಕೇಂದ್ರ ಯುವಜನತೆಯನ್ನು ಶಿವತ್ವದೊಂದಿಗೆ ಜೋಡಿಸುವ ಮಾಧ್ಯಮವಾಗಿ ಕೆಲಸ ಮಾಡುತ್ತಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಇಲ್ಲಿನ ಈಶ ಯೋಗಕೇಂದ್ರದಲ್ಲಿ ಬುಧವಾರ ನಡೆದ ಶಿವರಾತ್ರಿ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ಧ್ಯಾನ ಮತ್ತು ಸಾಧನೆ ಮೂಢನಂಬಿಕೆಗಳಲ್ಲ, ಅವು ವಿಜ್ಞಾನದಲ್ಲಿ ಬೇರೂರಿವೆ. ಶಿವನು ಶಾಶ್ವತ. ಆತ ಪ್ರಜ್ಞೆಯನ್ನು ಪ್ರತಿನಿಧಿಸುತ್ತಾನೆ ಎಂಬುದನ್ನು ಸದ್ಗುರು ಸಾಬೀತುಪಡಿಸಿದ್ದಾರೆ. ಆದಿಯೋಗಿಯ ಮೂಲಕ ಸದ್ಗುರುಗಳು ಯೋಗಕ್ಕೆ ಹೊಸ ಆಯಾಮ ನೀಡಿದ್ದಾರೆ. ಹಾಗೆಯೇ, ಪ್ರಧಾನಿ ನರೇಂದ್ರ ಮೋದಿಯವರು ಅಂತಾರಾಷ್ಟ್ರೀಯ ಯೋಗ ದಿನದ ಮೂಲಕ ಯೋಗದತ್ತ ಜಾಗತಿಕ ಗಮನವನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ’ ಎಂದು ಹೇಳಿದರು.

Share this article