ಸಿಎಂ ಆಗುವ ಸ್ವಾರ್ಥಕ್ಕೆ ಧರಂ ಸರ್ಕಾರ ತೆಗೆದವರು ನೀವಲ್ಲವೆ : ಎಚ್‌ಡಿಕೆ ವಿರುದ್ಧ ಎಸ್‌ಟಿಎಸ್ ಕಿಡಿ

Published : Apr 13, 2026, 09:02 AM IST
ST Somashekhar

ಸಾರಾಂಶ

ಕುಮಾರಸ್ವಾಮಿ ಅವರೇ, ಯಾರನ್ನು ಕೇಳಿ ಎನ್‌. ಧರ್ಮಸಿಂಗ್‌ ನೇತೃತ್ವದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ತೆಗೆದಿರಿ? ನೀವು ಮುಖ್ಯಮಂತ್ರಿ ಆಗುವ ಸ್ವಹಿತಾಸಕ್ತಿಯಿಂದ ಆ ಸರ್ಕಾರ ತೆಗೆದಿರಿ ಎಂದು  ಎಸ್‌.ಟಿ. ಸೋಮಶೇಖರ್‌ ಅವರು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  ಬೆಂಗಳೂರು :  ಕುಮಾರಸ್ವಾಮಿ ಅವರೇ, ಯಾರನ್ನು ಕೇಳಿ ಎನ್‌. ಧರ್ಮಸಿಂಗ್‌ ನೇತೃತ್ವದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ತೆಗೆದಿರಿ? ನೀವು ಮುಖ್ಯಮಂತ್ರಿ ಆಗುವ ಸ್ವಹಿತಾಸಕ್ತಿಯಿಂದ ಆ ಸರ್ಕಾರ ತೆಗೆದಿರಿ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಎಸ್‌.ಟಿ. ಸೋಮಶೇಖರ್‌ ಅವರು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರದಲ್ಲಿ ಧರ್ಮಸಿಂಗ್‌ ಮುಖ್ಯಮಂತ್ರಿ, ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದರು. ಆಗ ಸರ್ಕಾರ ತೆಗೆದವರು ಯಾರು? ನೀವೇ ಅಲ್ಲವೇ ಎಂದು ಕೇಳಿದರು.

ಕಷ್ಟ-ಸುಖ ಕೇಳಿದ್ರೆ ಬಿಜೆಪಿಗೆ ಹೋಗ್ತಿರಲಿಲ್ಲ:

2018ರಲ್ಲಿ 37 ಸ್ಥಾನ ಗೆದ್ದಿದ್ದ ನಿಮ್ಮನ್ನು 78 ಸ್ಥಾನ ಗೆದ್ದಿದ್ದ ಕಾಂಗ್ರೆಸ್‌ ಮುಖ್ಯಮಂತ್ರಿ ಮಾಡಿತು. ಆಗ ನಾನು ಕಾಂಗ್ರೆಸ್‌ ಶಾಸಕನಾಗಿದ್ದೆ. ಆಗ ನೀವು ಕರೆದು ಕಷ್ಟ-ಸುಖ ಕೇಳಿದ್ದರೆ, ನಾನು ಬಿಜೆಪಿಗೆ ಹೋಗುವ ಅವಶ್ಯಕತೆ ಬರುತ್ತಿರಲಿಲ್ಲ. ನಾನೊಬ್ಬನೇ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರ ತೆಗೆಯಲಿಲ್ಲ. ನಿಮ್ಮ ಜೆಡಿಎಸ್‌ ಶಾಸಕರು ಅದರಲ್ಲಿ ಇದ್ದರು ಎಂದು ಕುಮಾರಸ್ವಾಮಿಗೆ ಟಾಂಗ್‌ ನೀಡಿದರು.

ಜಿಬಿಎ ಟಿಕೆಟ್‌ ಹೆಸರಲ್ಲಿ ಸಮಾವೇಶ:

ಕೊಮ್ಮಘಟ್ಟದಲ್ಲಿ ಜೆಡಿಎಸ್‌ ಸಮಾವೇಶ ಮಾಡಿ, ಇಂತಹ ಸಮಾವೇಶ ಮಾಡಲು ಈ ಸರ್ಕಾರಕ್ಕೂ ಆಗಲ್ಲ ಎಂದಿದ್ದೀರಿ. ನಾನು ಕೇಂದ್ರದ ಮಂತ್ರಿ ಅಲ್ಲ. ಯಶವಂತಪುರ ವಿಧಾನಸಭಾ ಕ್ಷೇತ್ರದ 9 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂತಹ ಕಾರ್ಯಕ್ರಮ ಮಾಡಿದ್ದೇನೆ. ನೀವು ಜಿಬಿಎ ಚುನಾವಣೆ ಬರುತ್ತಿದೆ ಎಂದು ಟಿಕೆಟ್‌ ಆಕಾಂಕ್ಷಿಗಳಿಗೆ ಟಿಕೆಟ್‌ ಕೊಡುವುದಾಗಿ ಹೇಳಿ ಸಮಾವೇಶ ಮಾಡಿದ್ದೀರಿ. ಚುನಾವಣೆ ಬಂದಾಗ ನಿಮಗೆ ಯಶವಂತಪುರ ಕ್ಷೇತ್ರ ನೆನಪಾಗುತ್ತದೆ ಎಂದು ಕಿಡಿಕಾರಿದರು.

ನಾನು 5 ವರ್ಷಕ್ಕೆ ಒಮ್ಮೆ ಕ್ಷೇತ್ರಕ್ಕೆ ಬರಲ್ಲ:

ಜೆಡಿಎಸ್‌ ರೀತಿ ಐದು ವರ್ಷಕ್ಕೆ ಒಮ್ಮೆ ಕ್ಷೇತ್ರ ಬರುವ ಸೋಮಶೇಖರ್‌ ನಾನಲ್ಲ. ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೀನಿ. ಮಾಡುವ ಕೆಲಸ ಇನ್ನೂ ಬೇಕಾದಷ್ಟಿದೆ. ನನಗೆ ಇನ್ನೂ ಎರಡು ವರ್ಷ ಸಮಯವಿದೆ ಎಂದು ಸೋಮಶೇಖರ್‌ ಗುಡುಗಿದರು.

ಕೊಮ್ಮಘಟ್ಟದಲ್ಲಿ ನೀವು ಮಾಡಿದ ಕಾರ್ಯಕ್ರಮದ ರೀತಿ ಕಾರ್ಯಕ್ರಮ ಮಾಡಲು ಸರ್ಕಾರ ಬೇಕಿಲ್ಲ. ಈ ಸೋಮಶೇಖರ್‌ ಒಬ್ಬನೇ ಸಾಕು. ಈ ಹಿಂದೆ ಒಂದು ಲಕ್ಷಕ್ಕೂ ಅಧಿಕ ಜನ ಸೇರಿಸಿ ಹಲವು ಕಾರ್ಯಕ್ರಮ ಮಾಡಿದ್ದೇನೆ. ನನ್ನ ಕ್ಷೇತ್ರದಲ್ಲಿ ಮೋದಿ, ಅಮಿತ್‌ ಶಾ, ಮಲ್ಲಿಕಾರ್ಜುನ್‌ ಖರ್ಗೆ ಅವರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಿದ್ದೇನೆ ಎಂದು ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ದಾವಣಗೆರೇಲಿ ಕಾಂಗ್ರೆಸ್ಸಿಗನಿಂದ್ಲೇ ಡಬಲ್‌ ಗೇಮ್ : ಅರ್ಷದ್‌
ಜಬ್ಬಾರ್‌ ರಾಜೀನಾಮೆ ಅಂಗೀಕಾರ - ಕೆಪಿಸಿಸಿ ಅಲ್ಪಸಂಖ್ಯಾತ ಘಟಕವೇ ವಿಸರ್ಜನೆ