ರಮೇಶ್‌ ಜಾರಕಿಹೊಳಿ ₹233 ಕೋಟಿ ವಂಚನೆ ಕೇಸ್‌ ಸಿಐಡಿಗೆ ವರ್ಗ?

KannadaprabhaNewsNetwork | Updated : Jan 11 2024, 04:52 PM IST

ಸಾರಾಂಶ

ಬೆಳಗಾವಿಯ ಬಿಜೆಪಿ ನಾಯಕ ರಮೇಶ್‌ ಜಾರಕಿಹೊಳಿ ಅವರ ವಿರುದ್ಧ ಅಪೆಕ್ಸ್‌ ಬ್ಯಾಂಕ್‌ ಹಗರಣವನ್ನು ರಾಜ್ಯ ಪೊಲೀಸರು ಅಪರಾಧ ತನಿಖಾ ದಳಕ್ಕೆ ವರ್ಗಾಯಿಸಲು ಮುಂದಾಗಿದ್ದಾರೆ. ಹೀಗಾಗಿ ಮಾಜಿ ಸಚಿವಗೆ ಸಂಕಷ್ಟ ಎದುರಾಗಿದೆ ಎನ್ನಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಾಜಿ ಸಚಿವ, ಬಿಜೆಪಿ ಮುಖಂಡ ರಮೇಶ್ ಜಾರಕಿಹೊಳಿ ಹಾಗೂ ಇತರರ ವಿರುದ್ಧ ರಾಜ್ಯ ಅಪೆಕ್ಸ್‌ ಸಹಕಾರಿ ಬ್ಯಾಂಕ್‌ಗೆ 233 ಕೋಟಿ ರು ವಂಚನೆ ಪ್ರಕರಣದ ತನಿಖೆಯನ್ನು ರಾಜ್ಯ ಅಪರಾಧ ತನಿಖಾ ದಳಕ್ಕೆ (ಸಿಐಡಿ) ವಹಿಸಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ.

ಇನ್ನೆರಡು ದಿನಗಳಲ್ಲಿ ಈ ಸಂಬಂಧ ಆದೇಶ ಹೊರ ಬೀಳುವ ಸಾಧ್ಯತೆಯಿದೆ.ಬೆಳಗಾವಿ ಜಿಲ್ಲೆ ಗೋಕಾಕ್‌ ತಾಲೂಕಿನಲ್ಲಿ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಲಿಮಿಟೆಡ್ ಕಂಪನಿ ಸ್ಥಾಪನೆ ಸಲುವಾಗಿ 233 ಕೋಟಿ ರು. ಹಣವನ್ನು ಅಪೆಕ್ಸ್ ಬ್ಯಾಂಕ್‌ನಲ್ಲಿ ಕಂಪನಿ ಪಡೆದಿತ್ತು. ಆದರೆ ಸಕಾಲಕ್ಕೆ ಸಾಲ ಪಾವತಿಸದೆ ಬ್ಯಾಂಕ್‌ಗೆ ವಂಚಿಸಲಾಗಿದೆ ಎಂಬ ಆರೋಪ ಬಂದಿತ್ತು.

ಈ ಸಂಬಂಧ ವಿ.ವಿ.ಪುರ ಪೊಲೀಸ್ ಠಾಣೆಯಲ್ಲಿ ಅಪೆಕ್ಸ್ ಬ್ಯಾಂಕ್‌ ಕೇಂದ್ರ ಕಚೇರಿಯ ಪ್ರಧಾನ ವ್ಯವಸ್ಥಾಪಕ ರಾಜಣ್ಣರವರ ದೂರು ಆಧರಿಸಿ ಶುಗರ್ಸ್‌ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ರಮೇಶ್ ಜಾರಕಿಹೊಳಿ, ನಿರ್ದೇಶಕರಾದ ವಸಂತ್ ವಿ.ಪಾಟೀಲ್ ಮತ್ತು ಶಂಕರ್ ಎ. ಪಾವಡೆ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.

ಬಹುಕೋಟಿ ವಂಚನೆ ಪ್ರಕರಣ ಕಾರಣಕ್ಕೆ ಸಿಐಡಿಗೆ ವಹಿಸಲು ಬೆಂಗಳೂರು ಪೊಲೀಸರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಏನಿದು ಪ್ರಕರಣ?
ರಾಜ್ಯ ಅಪೆಕ್ಸ್‌ ಸಹಕಾರಿ ಬ್ಯಾಂಕ್‌ನಿಂದ 233 ಕೋಟಿ ರು. ಸಾಲ ಪಡೆದಿದ್ದ ಬೆಳಗಾವಿ ಜಿಲ್ಲೆ ಗೋಕಾಕ್‌ ತಾಲೂಕಿನ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಲಿ. ಸೌಭಾಗ್ಯಲಕ್ಷ್ಮೀ ಶುಗರ್ಸ್‌ಗೆ ರಮೇಶ್‌ ಜಾರಕಿಹೊಳಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ, ಸಾಲ ಮರುಪಾವತಿ ಮಾಡದೆ ಬ್ಯಾಂಕ್‌ಗೆ ವಂಚನೆ ಎಸಗಿದ ಆರೋಪ. ಜಾರಕಿಹೊಳಿ ಜೊತೆ ಕಂಪನಿ ನಿರ್ದೇಶಕರಾದ ವಸಂತ್ ಪಾಟೀಲ್ ಮತ್ತು ಶಂಕರ್ ಪಾವಡೆ ವಿರುದ್ಧವೂ ಎಫ್‌ಐಆರ್, ಬಹುಕೋಟಿ ವಂಚನೆ ಕೇಸಾಗಿರುವುದರಿಂದ ಸಿಐಡಿಗೆ ವಹಿಸಲು ಬೆಂಗಳೂರು ಪೊಲೀಸರ ನಿರ್ಧಾರ

Share this article