ಬೆಂಗಳೂರು : ನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ವಿರೋಧಿಸಿ ಬೀದಿಬದಿ ವ್ಯಾಪಾರಿಗಳು ಬುಧವಾರ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು. ನಗರದಲ್ಲಿ ಜು.1ರಿಂದ ನಡೆಯುತ್ತಿರುವ ಫುಟ್‌ಪಾತ್ ತೆರವು ಕಾರ್ಯಾಚರಣೆಯನ್ನು ತಕ್ಷಣ ನಿಲ್ಲಿಸಬೇಕು.
ಪಾದಚಾರಿ ಮಾರ್ಗ ತೆರವು ಹೆಸರಿನಲ್ಲಿ ತಮ್ಮ ಜೀವನೋಪಾಯವನ್ನು ಕಸಿಯಲಾಗುತ್ತಿದೆ. ನಗರದಲ್ಲಿ ಸುಮಾರು 1.5 ರಿಂದ 2 ಲಕ್ಷ ಬೀದಿಬದಿ ವ್ಯಾಪಾರಿಗಳ ಭವಿಷ್ಯ ಆತಂಕದಲ್ಲಿದ್ದು, ಬೀದಿಬದಿ ವ್ಯಾಪಾರಿಗಳ (ಜೀವನೋಪಾಯ ರಕ್ಷಣೆ ಮತ್ತು ಬೀದಿಬದಿ ವ್ಯಾಪಾರ ನಿಯಂತ್ರಣ) ಕಾಯ್ದೆ-2014ರಂತೆ ವ್ಯಾಪಾರಿಗಳಿಗೆ ಪರ್ಯಾಯ ಅವಕಾಶ ಕಲ್ಪಿಸಿ ತೆರವು ಕಾರ್ಯಾಚರಣೆ ಆರಂಭಿಸಬೇಕು. ಅಲ್ಲಿಯವರೆಗೆ ತೆರವು ಕಾರ್ಯಾಚರಣೆ ನಿಲ್ಲಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘ (ಎಐಸಿಸಿಟಿಯು), ಕರುನಾಡು ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟ, ನವ ಕರ್ನಾಟಕ ರಾಜ್ಯ ಬೀದಿಬದಿ ವ್ಯಾಪಾರಿಗಳ ಸಂಘ, ಬೀದಿಬದಿ ವ್ಯಾಪಾರಿಗಳ ಸಂಘ (ಸಿಐಟಿಯು), ಕನಾಟಕ ರಾಜ್ಯ ರಸ್ತೆ ಬದಿ ವ್ಯಾಪಾರಿಗಳ ಮಹಾಮಂಡಳ, ಕರ್ನಾಟಕ ಮಹಿಳಾ ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಾಜ್ಯ ದಲಿತ ಕ್ರಿಯಾ ಸಮಿತಿ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಬೀದಿ ಬದಿ ವ್ಯಾಪಾರಿಗಳನ್ನು ಉದ್ದೇಶಿಸಿ ಮಾತನಾಡಿದ ಮುಖಂಡರು, ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಗುರುತಿನ ಚೀಟಿ ವಿತರಣೆ, ವ್ಯಾಪಾರ ವಲಯಗಳ ಗುರುತಿಸುವಿಕೆ ಹಾಗೂ ಕಾನೂನುಬದ್ಧ ಸ್ಥಳಗಳ ಹಂಚಿಕೆ ಪೂರ್ಣಗೊಳಿಸದೇ ವ್ಯಾಪಾರಿಗಳನ್ನು ತೆರವುಗೊಳಿಸುವುದು ನ್ಯಾಯ ಸಮ್ಮತವಲ್ಲ ಎಂದು ಹೇಳಿದರು.
ನಗರದಲ್ಲಿ 80 ಸಾವಿರಕ್ಕೂ ಹೆಚ್ಚು ಪಿಎಂ-ಸ್ವನಿಧಿ ಯೋಜನೆ ಫಲಾನುಭವಿಗಳ ಜೀವನೋಪಾಯಕ್ಕೂ ಇದರಿಂದ ಸಂಕಷ್ಟ ಎದುರಾಗಲಿದೆ. ಇದುವರೆಗೆ ಕೇವಲ 24 ಸಾವಿರ ವ್ಯಾಪಾರಿಗಳ ಸಮೀಕ್ಷೆ ಮಾತ್ರ ಪೂರ್ಣಗೊಂಡಿದ್ದು, ಉಳಿದವರ ಸ್ಥಿತಿ ಅನಿಶ್ಚಿತವಾಗಿದೆ ಎಂದರು.
ಈ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಜು.1ರಿಂದ ಒಕ್ಕಲೆಬ್ಬಿಸಿದ ಬೀದಿ ಬದಿವ್ಯಾಪಾರಿಗಳನ್ನು ಮತ್ತೆ ಅದೇ ಸ್ಥಳದಲ್ಲಿ ವ್ಯಾಪಾರ ಮಾಡಲು ಅನುವು ಕೊಡಬೇಕು. ಒಂದು ವೇಳೆ ಅಲ್ಲಿ ಪಾದಚಾರಿ ಮಾರ್ಗಕ್ಕೆ ಅಡ್ಡ ಇದ್ದರೆ, ಅದೇ ರಸ್ತೆ ಬದಿಯಲ್ಲಿ ತಾತ್ಕಾಲಿಕವಾಗಿ ಬೀದಿ ವ್ಯಾಪಾರಿಗಳಿಗೆ ನೀಡಬೇಕು. ಅಂತಿಮ ತೀರ್ಮಾನ ಪಟ್ಟಣ ವ್ಯಾಪಾರ ಸಮಿತಿ ತೆಗೆದುಕೊಳ್ಳಬೇಕು, ಜಫ್ತಿ ಮಾಡಿದ ಎಲ್ಲಾ ಸಾಮಗ್ರಿಗಳನ್ನು ಹಿಂತಿರುಗಿಸಬೇಕು. ಯಾವ ವ್ಯಾಪಾರಿಗಳ ಸರಕು ನಾಶ ಹಾಗೂ ಗಾಡಿಗಳಿಗೆ ಹಾನಿಯಾಗಿದೆ ಅಂತಹವರ ಪಟ್ಟಿ ಮಾಡಿ ಅವರಿಗೆ ಪರಿಹಾರ ನೀಡಬೇಕು, ಬೀದಿ ವ್ಯಾಪಾರಿಗಳ ಕಾಯ್ದೆಯನ್ನು ಸಂಪೂರ್ಣವಾಗಿ ಜಾರಿಗೆ ತರಬೇಕು. 2024ರ ಸಮೀಕ್ಷೆಯಲ್ಲಿ ಬಿಟ್ಟು ಹೋದವರನ್ನು ಒಳಗೊಂಡು ಸಮಗ್ರ ಸಮೀಕ್ಷೆ ನಡೆಸಿ ಎಲ್ಲರಿಗೂ ಗುರುತಿನ ಚೀಟಿ ಹಾಗೂ ವ್ಯಾಪಾರದ ಪ್ರಮಾಣ ಪತ್ರ ನೀಡಬೇಕು ಎಂಬುದೂ ಸೇರಿದಂತೆ ಸುಮಾರು 10 ಬೇಡಿಕೆಗಳಿರುವ ಮನವಿ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಿದರು.
ಒಂದು ವೇಳೆ ಬೇಡಿಕೆಗಳು ಈಡೇರದಿದ್ದರೆ ಮುಂದೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಮನವಿ ಪತ್ರದಲ್ಲಿ ತಿಳಿಸಿವೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಫ್ರೀಡಂ ಪಾರ್ಕ್ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.