ಪಕ್ಷ ವಿರೋಧಿ ಚಟುವಟಿಕೆಗೆ ಬಿಜೆಪಿ ‘ಶಿಕ್ಷೆ’ ಕಡೆಗೂ ಎಸ್‌ಟಿಎಸ್‌ ಹೆಬ್ಬಾರ್‌ ಉಚ್ಚಾಟನೆ

KannadaprabhaNewsNetwork |  
Published : May 28, 2025, 01:53 AM IST

ಸಾರಾಂಶ

ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಬಿಜೆಪಿಗೆ ಮಗ್ಗುಲ ಮುಳ್ಳಿನಂತೆ ಪ್ರತಿ ಹಂತದಲ್ಲೂ ಮುಜುಗರ ಉಂಟು ಮಾಡುತ್ತಿದ್ದ ಶಾಸಕರಾದ ಎಸ್‌.ಟಿ.ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ.

- 6 ವರ್ಷ ಬಿಜೆಪಿಯಿಂದ ಔಟ್‌: ಕೇಂದ್ರದ ಶಿಸ್ತು ಸಮಿತಿ ಆದೇಶ- ಇಬ್ಬರೂ ಶಾಸಕರು ನಿರಾಳ । ಬಿಜೆಪಿಗೂ ತಪ್ಪಿತು ಮುಜುಗರ

ಬಿಜೆಪಿಗೆ ಜತೆಗಿನ ಋಣ ಮುಗಿದಿದೆಬಿಜೆಪಿಗರು ಅವರ ಕೆಲಸ ಆಗುವವರೆಗೂ ಜಾಮೂನು ಕೊಡುತ್ತಾರೆ. ಬಳಿಕ ಪಾಯಿಸನ್‌ ಕೊಡುತ್ತಾರೆ. ಬಿಜೆಪಿಗೂ ನನಗೂ ಋಣಾನುಬಂಧ ಮುಗಿದಿದೆ. ಈಗ ಆ ಪಕ್ಷದ ನಾಯಕರ ವಿರುದ್ಧ ಮಾತನಾಡಲ್ಲ. ನಿರ್ಧಾರವನ್ನು ಸಂತೋಷದಿಂದ ಸ್ವಾಗತಿಸುತ್ತೇನೆ.- ಎಸ್‌.ಟಿ. ಸೋಮಶೇಖರ್‌, ಯಶವಂತಪುರ ಶಾಸಕ--ಸಂತಸವಾಗಿದೆ, ಶೀಘ್ರ ಮುಂದಿನ ನಡೆಬಿಜೆಪಿ ನಿರ್ಧಾರದಿಂದ ಸಂತಸವಾಗಿದೆ. ಮುಂದೇನು ಮಾಡಬೇಕು ಎಂಬ ಬಗ್ಗೆ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳುತ್ತೇನೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ಹಣೆಬರಹವನ್ನು ಬೆಂಗಳೂರಿನಲ್ಲಿ ನಾನು, ಶಾಸಕ ಎಸ್.ಟಿ ಸೋಮಶೇಖರ್ ಬಿಚ್ಚಿಡುತ್ತೇವೆ.- ಶಿವರಾಮ ಹೆಬ್ಬಾರ್, ಯಲ್ಲಾಪುರ ಶಾಸಕ--ಮುಜುಗರ ಆಗುವ ರೀತಿ ನಡೆದುಕೊಂಡಿದ್ದರುಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರು ಪಕ್ಷ ವಿರೋಧಿ ಚಟುವಟಿಕೆ, ಪಕ್ಷಕ್ಕೆ ಮುಜುಗರ ಆಗುವ ರೀತಿಯಲ್ಲಿ ನಡೆದುಕೊಂಡಿದ್ದರು. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಳಿದ್ದೆವು. ಉಚ್ಚಾಟನೆ ಕ್ರಮ ಸ್ವಾಗತಾರ್ಹ.- ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

--

ಕನ್ನಡಪ್ರಭ ವಾರ್ತೆ ಬೆಂಗಳೂರು

ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಬಿಜೆಪಿಗೆ ಮಗ್ಗುಲ ಮುಳ್ಳಿನಂತೆ ಪ್ರತಿ ಹಂತದಲ್ಲೂ ಮುಜುಗರ ಉಂಟು ಮಾಡುತ್ತಿದ್ದ ಶಾಸಕರಾದ ಎಸ್‌.ಟಿ.ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ.

ಪಕ್ಷದ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್ ಅವರು ಮಂಗಳವಾರ ಬೆಂಗಳೂರಿಗೆ ಆಗಮಿಸಿ ಪಕ್ಷ ಸಂಘಟನೆ ಕುರಿತು ಮೂರು ದಿನ ಸರಣಿ ಸಭೆ ಆರಂಭಿಸಿದ ಬೆನ್ನಲ್ಲೇ, ದೆಹಲಿಯಲ್ಲಿ ಕೇಂದ್ರ ಶಿಸ್ತು ಸಮಿತಿ ಈ ಇಬ್ಬರು ಶಾಸಕರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಿ ಆದೇಶ ಹೊರಡಿಸಿದೆ.

ಈ ಮೂಲಕ ಕಳೆದ ಎರಡು ತಿಂಗಳ ಅವಧಿಯಲ್ಲಿ ಬಿಜೆಪಿಯಿಂದ ಮೂವರು ಶಾಸಕರು ಉಚ್ಚಾಟನೆಗೊಂಡಂತಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ ಅಂತ್ಯದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.

ಹಾಗೆ ನೋಡಿದರೆ ಸೋಮಶೇಖರ್ ಮತ್ತು ಹೆಬ್ಬಾರ್ ಅವರು ತ್ರಿಶಂಕು ಸ್ಥಿತಿಗೆ ತಲುಪಿ ಉಚ್ಚಾಟನೆಯ ನಿರೀಕ್ಷೆಯಲ್ಲಿದ್ದರು. ರಾಜ್ಯ ಬಿಜೆಪಿ ನಾಯಕರೂ ಅವರಿಬ್ಬರನ್ನು ಪಕ್ಷದಿಂದ ಹೊರಹಾಕಿದರೆ ಸಾಕು ಎಂಬ ಹಂತಕ್ಕೆ ತಲುಪಿದ್ದರು. ಇದೀಗ ಅಧಿಕೃತವಾಗಿ ಉಚ್ಚಾಟನೆಗೊಂಡಿರುವುದರಿಂದ ಇನ್ನು ಮುಂದೆ ಉಭಯ ಶಾಸಕರಿಗೆ ಮತ್ತು ಬಿಜೆಪಿ ನಾಯಕರಿಗೆ ‘ಮುಕ್ತಿ’ ಸಿಕ್ಕಂತಾಗಿದೆ.

ಉಭಯ ಶಾಸಕರು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಹೊಸ್ತಿಲಲ್ಲಿ ನಿಂತಿದ್ದರೂ ಅಧಿಕೃತವಾಗಿ ಸೇರ್ಪಡೆ ಆಗುವಂತಿಲ್ಲ. ಆದರೆ, ಸಹ ಸದಸ್ಯರಾಗಿ ಮುಂದುವರೆಯಬಹುದು. ಕಾಂಗ್ರೆಸ್ ಪಾಳೆಯದಲ್ಲಿ ರಾಜಾರೋಷವಾಗಿ ಗುರುತಿಸಿಕೊಳ್ಳಬಹುದಾಗಿದೆ.

ಅಲ್ಲಿಗೆ ಮುಂಬರುವ 2028ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಈ ಇಬ್ಬರು ಶಾಸಕರು ಪ್ರತಿನಿಧಿಸುವ ಯಶವಂತಪುರ (ಸೋಮಶೇಖರ್) ಮತ್ತು ಯಲ್ಲಾಪುರ (ಶಿವರಾಮ ಹೆಬ್ಬಾರ್) ಕ್ಷೇತ್ರಗಳಲ್ಲಿ ಅವರ ವಿರುದ್ಧ ಬಿಜೆಪಿಯ ಅಭ್ಯರ್ಥಿಗಳಾಗುವವರು ಈಗಿನಿಂದಲೇ ತಯಾರಿ ಆರಂಭಿಸಲು ವೇದಿಕೆ ಸಜ್ಜಾದಂತಾಗಿದೆ.

6 ವರ್ಷದ ಹಿಂದೆ ಬಿಜೆಪಿಗೆ:

ಸೋಮಶೇಖರ್ ಮತ್ತು ಹೆಬ್ಬಾರ್ ಅವರು 2019ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಉಪಚುನಾವಣೆ ಎದುರಿಸಿ ಬಿ.ಎಸ್‌.ಯಡಿಯೂರಪ್ಪ ಸರ್ಕಾರದಲ್ಲಿ ಮೊದಲ ಬಾರಿಗೆ ಸಚಿವ ಹುದ್ದೆ ಅಲಂಕರಿಸಿದ್ದರು. 2023ರಲ್ಲಿ ಬಿಜೆಪಿಯಿಂದಲೇ ಸ್ಪರ್ಧಿಸಿ ಗೆಲುವು ಸಾಧಿಸಿದರೂ ಬಳಿಕ ಹಂತ ಹಂತವಾಗಿ ಪಕ್ಷದಿಂದ ಅಂತರ ಕಾಪಾಡಿಕೊಂಡರು. ಕ್ರಮೇಣ ಆಡಳಿತಾರೂಢ ಕಾಂಗ್ರೆಸ್ ಪಾಳೆಯದತ್ತ ವಾಲಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಬಹಿರಂಗವಾಗಿ ಹೊಗಳುತ್ತಲೇ ಬಿಜೆಪಿ ನಾಯಕರನ್ನು ತೆಗಳುವ ಕೆಲಸವನ್ನು ಮುಂದುವರೆಸಿದರು. ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡಿದರು.

ಒಂದು ಹಂತದಲ್ಲಿ ಬಿಜೆಪಿ ನಾಯಕರು ಮಾತುಕತೆ ಮೂಲಕ ಸೋಮಶೇಖರ್ ಮತ್ತು ಹೆಬ್ಬಾರ್ ಮನವೊಲಿಸುವ ಪ್ರಯತ್ನ ನಡೆಸಿದರು. ಉಭಯ ಶಾಸಕರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ವರಿಷ್ಠರಿಗೆ ಮನವಿ ಮಾಡಿದರು.

ಇತ್ತೀಚೆಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿದ ಬಳಿಕ ಅವರಿಗಿಂತ ಮೊದಲೇ ಪಕ್ಷ ವಿರೋಧಿ ಚಟುವಟಿಕೆ ಆರೋಪ ಹೊತ್ತಿದ್ದ ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಪಕ್ಷದ ಕಾರ್ಯಕರ್ತರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಅಂತಿಮವಾಗಿ ಯತ್ನಾಳ್ ಅವರ ವಿಚಾರದಲ್ಲಿ ತೋರಿದ ಕ್ರಮವನ್ನೇ ಸೋಮಶೇಖರ್ ಮತ್ತು ಹೆಬ್ಬಾರ್ ಅವರಿಗೂ ತೋರಿಸಲಾಗಿದೆ.ಉಚ್ಚಾಟನಾ ಆದೇಶದಲ್ಲಿ ಏನಿದೆ?

ಕಳೆದ ಮಾರ್ಚ್‌ 25ರಂದು ನೀಡಿದ ಶೋಕಾಸ್ ನೋಟಿಸ್‌ಗೆ ನೀವು ಕೊಟ್ಟ ಉತ್ತರ ಮತ್ತು ಶಿಸ್ತಿನ ಪುನರಾವರ್ತಿತ ಉಲ್ಲಂಘನೆಗಳನ್ನು ಪಕ್ಷದ ಕೇಂದ್ರ ಶಿಸ್ತು ಸಮಿತಿ ಗಂಭೀರವಾಗಿ ಪರಿಗಣಿಸಿದೆ. ಅದರಂತೆ ತಕ್ಷಣದಿಂದ ಜಾರಿಗೆ ಬರುವಂತೆ ನಿಮ್ಮನ್ನು ಆರು ವರ್ಷಗಳ ಅವಧಿಗೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲು ಹಾಗೂ ಪಕ್ಷದ ಎಲ್ಲ ಸ್ಥಾನಮಾನ ಹಿಂಪಡೆಯಲು ನಿರ್ಧರಿಸಲಾಗಿದೆ.

--

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಶಾಸಕರಿಗೆ ಡಿ.ಕೆ.ಶಿವಕುಮಾರ್‌ ಔತಣಕೂಟ; 25ಕ್ಕೂ ಹೆಚ್ಚು ಶಾಸಕರು ಭಾಗಿ
ಹಂತ ಹಂತವಾಗಿ 1.88 ಲಕ್ಷ ಸರ್ಕಾರಿ ಹುದ್ದೆ ಭರ್ತಿ : ಸಿದ್ದರಾಮಯ್ಯ