ಈ ವರ್ಷವೇ ರಾಜ್ಯದಲ್ಲಿ ವಿದ್ಯಾರ್ಥಿ ಚುನಾವಣೆ

Published : Sep 10, 2026, 04:42 AM IST
Voting

ಸಾರಾಂಶ

ವಿದ್ಯಾರ್ಥಿಗಳಲ್ಲಿ ನಾಯಕತ್ವ, ಹೊಣೆಗಾರಿಕೆ ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳನ್ನು ಬೆಳೆಸಲು ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಈ ವರ್ಷವೇ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಕರ್ನಾಟಕ ರಾಜ್ಯ ಸಚಿವ ಸಂಪುಟ ಸಭೆ ಬುಧವಾರ ನಿರ್ಧರಿಸಿದೆ.

ಬೆಂಗಳೂರು : ವಿದ್ಯಾರ್ಥಿಗಳಲ್ಲಿ ನಾಯಕತ್ವ, ಹೊಣೆಗಾರಿಕೆ ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳನ್ನು ಬೆಳೆಸಲು ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಈ ವರ್ಷವೇ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಕರ್ನಾಟಕ ರಾಜ್ಯ ಸಚಿವ ಸಂಪುಟ ಸಭೆ ಬುಧವಾರ ನಿರ್ಧರಿಸಿದೆ.

ಆದರೆ, ಚುನಾವಣೆ ಕಡ್ಡಾಯವಿಲ್ಲ. ತಮ್ಮ ಕಾಲೇಜು, ವಿವಿಗೆ ಚುನಾವಣೆ ಬೇಕೆ ಬೇಡವೇ ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಆಯಾ ವಿದ್ಯಾರ್ಥಿಗಳಿಗೇ ಬಿಡಲು ಸಂಪುಟ ತೀರ್ಮಾನಿಸಿದೆ.

ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು, ವಿದ್ಯಾರ್ಥಿ ಸಂಘಗಳ ಚುನಾವಣೆಯಲ್ಲಿ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಸ್ಥಾನ ಹೊರತುಪಡಿಸಿ ವಿವಿಧ ಪದಾಧಿಕಾರಿ ಸ್ಥಾನಗಳಿಗೆ ಮಹಿಳಾ ಮೀಸಲು ನೀಡಲು ಸಮ್ಮತಿಸಲಾಗಿದೆ. ಪ್ರತಿ ಕಾಲೇಜಿನಲ್ಲೂ ವಿದ್ಯಾರ್ಥಿ ಸಂಘಕ್ಕೆ ಒಬ್ಬ ಅಧ್ಯಕ್ಷ, ಎರಡು ಉಪಾಧ್ಯಕ್ಷ ಸ್ಥಾನ(ಒಂದು ಮಹಿಳೆ), ಒಂದು ಪ್ರಧಾನ ಕಾರ್ಯದರ್ಶಿ, ಎರಡು ಜಂಟಿ ಪ್ರಧಾನ ಕಾರ್ಯದರ್ಶಿ (ಒಂದು ಮಹಿಳಾ ಮೀಸಲು) ಹಾಗೂ ಆರು ಜನ ಕಾರ್ಯಾಕಾರಿ ಸಮಿತಿ ಸದಸ್ಯ(2 ಸ್ಥಾನ ಮಹಿಳಾ ಮೀಸಲು) ಸ್ಥಾನಗಳಿಗೆ ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಕಡ್ಡಾಯ ಅಲ್ಲ:

ಚುನಾವಣೆ ಕಡ್ಡಾಯವೇನು ಇಲ್ಲ. ಯಾವುದೇ ಕಾಲೇಜು, ವಿವಿ ವಿದ್ಯಾರ್ಥಿಗಳು ತಮಗೆ ಚುನಾವಣೆ ಬೇಡ ಎಂದು ನಿರ್ಧರಿಸುವ ಅಧಿಕಾರವೂ ಅವರಿಗೇ ಇರುತ್ತದೆ. ನಾನು ಮತ್ತು ಸಚಿವ ಶರಣ್ ಪ್ರಕಾಶ್‌ ಪಾಟೀಲ್‌ ಅವರ ಸಚಿವ ಸಂಪುಟ ಉಪ ಸಮಿತಿ ಎಲ್ಲ ಭಾಗೀದಾರರ ಸಲಹೆ, ಅಭಿಪ್ರಾಯ ಪಡೆದು ಸರ್ಕಾರಕ್ಕೆ ವರದಿ ನೀಡಿದ್ದೆವು. ಅದರ ಆಧಾರದ ಮೇಲೆ ಸಂಪುಟದಲ್ಲಿ ಈ ತೀರ್ಮಾನ ಆಗಿದೆ. ಚುನಾವಣೆ ವೇಳೆ ಯಾವುದೇ ಇತರೆ ವಿದ್ಯಾರ್ಥಿ ಸಂಘಟನೆ, ರಾಜಕೀಯ ಪಕ್ಷಗಳವರಿಗೆ ಅವಕಾಶ ಇರುವುದಿಲ್ಲ ಎಂದರು.

ಸಂಘರ್ಷ, ಗುಂಪುಗಾರಿಕೆ ತಡೆಯಲು ಈ ಹಿಂದೆ ವಿದ್ಯಾರ್ಥಿ ಸಂಘಗಳ ಚುನಾವಣೆಗಳನ್ನು ರದ್ದುಪಡಿಸಲಾಗಿತ್ತು. ಈಗ, ಬಜೆಟ್‌ ಘೋಷಣೆಯಂತೆ ಮತ್ತೆ ಎಲ್ಲ ಕಾಲೇಜು, ವಿ.ವಿ.ಗಳಲ್ಲಿ ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ.

ಭಾರತ್‌ ಜೋಡೋ ಸಂಘಕ್ಕೆ ಮಾಸಾಂತ್ಯಕ್ಕೆ ಚಾಲನೆ:

ರಾಜ್ಯಾದ್ಯಂತ ಪ್ರತಿ ಪಂಚಾಯತ್‌ ಹಾಗೂ ವಾರ್ಡ್‌ ಮಟ್ಟದಲ್ಲಿ ತಲಾ ಒಂದೊಂದು ಭಾರತ್‌ ಜೋಡೋ ಯುವ ಸಂಘಗಳನ್ನು ಸ್ಥಾಪಿಸುವ ಸಂಬಂಧ ತಾಂತ್ರಿಕ ಕಾರಣಕ್ಕೆ ಸ್ಥಗಿತಗೊಂಡಿದ್ದ ಸದಸ್ಯತ್ವ ನೋಂದಣಿಗೆ ಮತ್ತೆ ಚಾಲನೆ ನೀಡಲಾಗಿದೆ. ಎಲ್ಲ ಜಿಲ್ಲಾಧಿಕಾರಿಗಳಿಂದ ಸದಸ್ಯತ್ವ ನೋಂದಣಿ ಅರ್ಜಿಗಳು ಅಪ್‌ಲೋಡ್‌ ಆದ ಬಳಿಕ ಈ ತಿಂಗಳ ಅಂತ್ಯಕ್ಕೆ ಯೋಜನೆಗೆ ಚಾಲನೆ ನೀಡಲಾಗುವುದು. ಈಗಾಗಲೇ 7 ಲಕ್ಷಕ್ಕೂ ಹೆಚ್ಚು ಸಂಘಗಳ ನೋಂದಣಿ ಆಗಿದೆ ಎಂದು ಪರಮೇಶ್ವರ್‌ ತಿಳಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಬೈರತಿ-ಮಹದೇವಪ್ಪ ನಡುವೆ ಸರ್ಕಾರಿ ನಿವಾಸಕ್ಕಾಗಿ ಸಮರ
16745 ಕೋಟಿ ರು. ತಲುಪಿದ ಮೇಕೆದಾಟು ಯೋಜನಾ ವೆಚ್ಚ