- ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆ: ಮರಿತಿಬ್ಬೇಗೌಡ ಮನವಿ ಕನ್ನಡಪ್ರಭ ವಾರ್ತೆ ಮಂಡ್ಯ ವಿಧಾನ ಪರಿಷತ್‌ಗೆ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೂನ್‌ನಲ್ಲಿ ನಡೆಯುವ ಚುನಾವಣೆ ಸಂಬಂಧ ಈಗಾಗಲೇ ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸಿದ್ದು, ತಪ್ಪದೇ ಶಿಕ್ಷಕ ಬಂಧುಗಳು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು ಎಂದು ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಮನವಿ ಮಾಡಿದರು. ನಗರದ ಸರ್ಕಾರಿ ಮಹಿಳಾ ಕಾಲೇಜು, ಪಿಇಎಸ್ ಕಾಲೇಜು, ಐಟಿಐ ಕಾಲೇಜು, ಮಾಂಡವ್ಯ ಕಾಲೇಜಿಗೆ ಭೇಟಿ ನೀಡಿದ ಅವರು ಉಪನ್ಯಾಸಕರನ್ನು ಭೇಟಿ ಮಾಡಿ ಮಾತನಾಡಿ, ಈಗಾಗಲೇ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಕ್ರಿಯೆ ಆರಂಭವಾಗಿದೆ. ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದ್ದು, ಕ್ಷೇತ್ರ ವ್ಯಾಪ್ತಿಯ ಮತದಾರರ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದರು. ಮೊದಲ ಹಂತವಾಗಿ ಶಿಕ್ಷಕರನ್ನು ಚುನಾವಣಾ ಆಯೋಗದ ನಮೂನೆ-೧೯ರ ಫಾರಂನ್ನು ಚುನಾವಣಾ ಆಯೋಗ ಕಳುಹಿಸಿಕೊಟ್ಟಿದೆ. ಜೊತೆಗೆ ನಾವೂ ಸಹ ಕಾಲೇಜುಗಳಿಗೆ ಕಳುಹಿಸಿಕೊಟ್ಟಿದ್ದೇವೆ. ಎಲ್ಲರು ಸಹ ನಿಗದಿತ ಅವಧಿಯೊಳಗೆ ದಕ್ಷಿಣ ಶಿಕ್ಷಕರ ಕ್ಷೇತ್ರದ ನೋಂದಣಿ ಕಾರ್ಯಕ್ಕೆ ಸಹಕರಿಸಬೇಕು ಹಾಗೂ ಎಲ್ಲಾ ಸ್ನೇಹಿತರಿಗೂ ಮತದಾರ ನೋಂದಣಿ ಮಾಡಿಸುವಂತೆ ವಿನಂತಿಸಿದರು. ತಾವೆಲ್ಲರು ಮತದಾರರಾದಾಗ ಮಾತ್ರ ಹಕ್ಕು ಚಲಾಯಿಸಲು ಸಾಧ್ಯವಿದೆ. ಶಾಲಾ ಮುಖ್ಯಸ್ಥರಿಂದ ಅರ್ಜಿಗಳನ್ನು ಪಡೆದು, ಅಧಿಕೃತ ವಿಳಾಸ ಮತ್ತು ಸಂಸ್ಥೆಯ ಹೆಸರು ನಮೂದಿಸಿ, ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು. ಈ ವೇಳೆ ಜಿ.ಎನ್.ಶಿವರುದ್ರಪ್ಪ, ಎಚ್.ವಿ.ಜಯರಾಮು, ಕೃಷ್ಣೇಗೌಡ, ತೂಬಿನಕೆರೆ ಲಿಂಗರಾಜು, ಕೋಣನಹಳ್ಳಿ ಜಯರಾಮು, ಸಂತೋಷ್, ದಾನಿಗೌಡ, ಕೆಂಪಮ್ಮ, ನವೀನ್, ಲೋಕೇಶ್, ತಂಡಸನಹಳ್ಳಿ ಲಿಂಗರಾಜು, ರಾಘು ಇತರರಿದ್ದರು.