ಕನ್ನಡಪ್ರಭ ವಾರ್ತೆ ಪಾಂಡವಪುರ
ಮಂಡ್ಯ ಲೋಕಸಭೆ ಕ್ಷೇತ್ರದಿಂದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಗೆಲ್ಲುವುದು ತುಂಬಾ ಕಷ್ಟ ಎಂದು ಪಾಂಡವಪುರ ತಾಲೂಕು ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹರಳಹಳ್ಳಿ ಅಂಬಿ ಸುಬ್ಬಣ್ಣ ಹೇಳಿದ್ದಾರೆ.
ಪಟ್ಟಣದ ಅಂಬಿ ಕ್ಯಾಂಟೀನ್‌ನಲ್ಲಿ ಅಂಬರೀಶ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಹಿರಿಯ ನಟ ದಿ.ಅಂಬರೀಶ್ ಅವರ ಅನುಕಂಪ ಹಾಗೂ ಸ್ವಾಭಿಮಾನದ ಹೆಸರಿನಲ್ಲಿ ಚುನಾವಣೆ ನಡೆಯಿತು. ಮುಂಬರುವ ಚುನಾವಣೆಯಲ್ಲಿ ಸ್ವಾಭಿಮಾನ ಲಾಭ ಸುಮಲತಾ ಅವರಿಗೆ ಆಗೋದಿಲ್ಲ ಎಂದರು.
ಈಗ ರಾಜಕೀಯ ವಾತಾವರಣ ಸಂಪೂರ್ಣ ಬದಲಾಗಿದೆ. ಮಂಡ್ಯ ಕ್ಷೇತ್ರದ ಜನತೆಯ ದೃಷ್ಟಿಯಿಂದ ಪಕ್ಷೇತರವಾಗಿ ಸ್ಪರ್ಧೆ ಮಾಡುವುದು ಒಳ್ಳೆಯದಲ್ಲ. ಯಾರೋ ಕೆಲವರು ಉದ್ದೇಶ ಪೂರ್ವಕವಾಗಿ ಅಥವಾ ಮೆಚ್ಚಿಸಿಕೊಳ್ಳಲು ಹೇಳಬಹುದು. ಆದರೆ, ಸುಮಲತಾ ಅವರು ಸೋತರೆ ಅಭಿಮಾನಿಗಳಿಗೆ ತುಂಬಾ ನೋವಾಗುತ್ತದೆ ಎಂದರು.
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯಿಂದಾಗಲಿ ಅಥವಾ ಕಾಂಗ್ರೆಸ್ ಪಕ್ಷದಿಂದ ಆಗಲಿ ಸ್ಪರ್ಧೆ ಮಾಡಿದರೆ ಗೆಲುವು ಸಾಧಿಸಬಹುದು. ಇದು ವಾಸ್ತವ ರಾಜಕಾರಣ. ಕೆಲವರ ಮಾತು ಕೇಳಿದರೆ ಗೆಲುವು ಕಷ್ಟವಾಗುತ್ತದೆ ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದರು.
ಅಂಬರೀಶ್ ಜೊತೆ 30 ವರ್ಷದಿಂದ ಅಭಿಮಾನಿಯಾಗಿದ್ದೇವೆ. ಅಂಬರೀಶ್ ಮರಣದ ನಂತರ ಅಂಬರೀಶ್ ಅವರನ್ನು ಪೂಜಿಸುತ್ತೇವೆ. ನಮ್ಮ ಪಾಲಿಗೆ ದೇವರು ಇದ್ದಂತೆ. ಆದರೆ, ಸುಮಲತಾ ಅವರ ಮನಸ್ಸು ಅಂಬರೀಶ್ ರೀತಿ ಬರಲಿಲ್ಲ.
ನನ್ನ ಧರ್ಮಪತ್ನಿ ಇತ್ತೀಚೆಗೆ ಮರಣ ಹೊಂದಿದಾಗ ನಂತರದ ದಿನದಲ್ಲಿ ಅಂಬಿ ಅಭಿಮಾನಿಯಾದ ನನ್ನ ಮನೆಗೆ ಬಂದು ಸಾಂತ್ವನ ಹೇಳಲಿಲ್ಲ. ಇದು ನನಗೆ ತುಂಬಾ ನೋವುಂಟಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಸಂಸದೆ ಸುಮಲತಾ ಅಂಬರೀಶ್ ಅವರು, ಜಿಲ್ಲಾದ್ಯಂತ ಅಂಬಿ ಅಭಿಮಾನಿಗಳಿಗೆ ಸಂಪೂರ್ಣ ಕಡೆಗಣಿಸಿದ್ದಾರೆ. ಇನ್ನಾದರೂ ಅಂಬಿ ಅಭಿಮಾನಿಗಳನ್ನು ಗುರುತಿಸಿ ಗೌರವಿಸುವಂತಾಗಲಿ ಎಂದರು.