‘ಗ್ಯಾರಂಟಿ’ ಮುಂದುವರಿಸಲು ಕಾಂಗ್ರೆಸ್ ಬೆಂಬಲಿಸಿ : ಡಾ. ಎಂ.ಸಿ. ಸುಧಾಕರ್

KannadaprabhaNewsNetwork | Updated : Apr 08 2024, 04:55 AM IST

ಸಾರಾಂಶ

ವಿರೋಧ ಪಕ್ಷದವರು ಲೋಕಸಭಾ ಚುನಾವಣೆ ಮುಗಿದ ನಂತರ ಗ್ಯಾರಂಟಿಗಳನ್ನು ವಾಪಸ್ ಪಡೆಯುತ್ತಾರೆ ಸರ್ಕಾರ ಉಳಿಯುವುದಿಲ್ಲ ಎಂದು ಮಾತನಾಡುತ್ತಾರೆ. ಗ್ಯಾರಂಟಿಗಾಗಿ ಕಾಂಗ್ರೆಸ್‌ ಬೆಂಬಲಿಸಿ

 ಚಿಂತಾಮಣಿ :  ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಐದು ಗ್ಯಾರಂಟಿಗಳು 5 ವರ್ಷಗಳು ಮುಂದುವರೆಸಲು ಕಾಂಗ್ರೆಸ್ ಪಕ್ಷಕ್ಕೆ ಮತನೀಡಿ ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ನುಡಿದರು.

ತಾಲೂಕಿನ ಬೂರಗಮಾಕಲಹಳ್ಳಿ, ಕೈವಾರ, ನಲಮಾಚನಹಳ್ಳಿಯಲ್ಲಿ ಹೋಬಳಿ ಮಟ್ಟದ ಸಭೆಯಲ್ಲಿ ಅಭ್ಯರ್ಥಿ ಕೆ.ವಿ. ಗೌತಮ್ ಪರ ಮತಯಾಚಿಸಿದ ಸಚಿವರು, ವಿರೋಧ ಪಕ್ಷದವರು ಲೋಕಸಭಾ ಚುನಾವಣೆ ಮುಗಿದ ನಂತರ ಗ್ಯಾರಂಟಿಗಳನ್ನು ವಾಪಸ್ ಪಡೆಯುತ್ತಾರೆ ಸರ್ಕಾರ ಉಳಿಯುವುದಿಲ್ಲ ಎಂದು ಮಾತನಾಡುತ್ತಾರೆ. ಹಾಗಾಗಿ ಐದು ವರ್ಷಗಳು ಸರ್ಕಾರ ಪೂರೈಸಬೇಕಾದರೆ ಮತ್ತು ಗ್ಯಾರಂಟಿಗಳು ಮುಂದುವರಿಯಬೇಕಾದರೆ ಮತದಾರರು ಸಹಕರಿಸಿ ಕಾಂಗ್ರೆಸ್‌ಗೆ ಮತ ನೀಡಬೇಕೆಂದರು.

ಕೇಂದ್ರದ ಭರವಸೆ ಹುಸಿ

ಕೇಂದ್ರದ ಬಿಜೆಪಿ ಸರ್ಕಾರ ವಾರ್ಷಿಕ ೨ ಕೋಟಿ ಉದ್ಯೋಗ ಸೃಷ್ಟಿ, ಬಡತನ ನಿರ್ಮೂಲನೆ, ರೈತರ ಆದಾಯ ದುಪ್ಪಟ್ಟು, ಸಮಾನತೆ, ನದಿಗಳ ಜೋಡಣೆ, ಕಪ್ಪುಹಣ ವಾಪಸ್ಸು ತಂದು ಪ್ರತಿಯೊಬ್ಬರ ಖಾತೆಗೆ ೧೫ ಲಕ್ಷ ಜಮೆ ಇತ್ಯಾದಿ ಅಂಶಗಳನ್ನು ಮಾಡುವುದಾಗಿ ಹೇಳಿ ಯಾವುದನ್ನು ಮಾಡಲಾಗದೇ ಕೇವಲ ಸುಳ್ಳು ಭರವಸೆಯನ್ನು ನೀಡುವ ಮೂಲಕ ಮತದಾರರನ್ನು ಭ್ರಮ ನಿರಸನಗೊಳಿಸಿದೆಯೆಂದರು.

ಕಾಂಗ್ರೆಸ್‌ ಪಕ್ಷ ಆಡಳಿತಕ್ಕೆ ಬಂದ ೧೦ ತಿಂಗಳಿನಲ್ಲಿ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದು ನುಡಿದಂತೆ ನಡೆಯುವ ಸರ್ಕಾರವಾಗಿದೆ. ಚುನಾವಣಾ ನಂತರ ವಿಪಕ್ಷಗಳು ಕಾಂಗ್ರೆಸ್ ಸುಳ್ಳು ಆಶ್ವಾಸನೆ ನೀಡಿ ಅಧಿಕಾರ ಹಿಡಿದಿದೆ, ಯಾವುದೇ ಕಾರಣಕ್ಕೂ ಗ್ಯಾರಂಟಿಗಳು ಸಫಲವಾಗದೆಂದು ಟೀಕಿಸಿದ್ದವಾದರೂ ಮುಖ್ಯಮಂತ್ರಿ ಸಿದ್ಧರಾಮಯ್ಯ ೧೫ ಬಾರಿ ಬಜೆಟ್ ಮಂಡನೆ ಮಾಡಿ ಪಂಚ ಗ್ಯಾರಂಟಿಗಳನ್ನು ಪ್ರಾರಂಭದಲ್ಲೆ ಅನುಷ್ಠಾನಗೊಳಿಸುವುದರ ಮೂಲಕ ವಿಪಕ್ಷಗಳಿಗೆ ತಿರುಗೇಟು ನೀಡಿದ್ದರೆಂದರು.

ಮನೆಗೆ ನಲ್ಲಿ ರಾಜ್ಯದ ಪಾಲು ಶೇ,55

ಮನೆ ಮನೆಗೆ ಗಂಗೆ ಕಾರ್ಯಕ್ರಮವು ಕೇಂದ್ರ ಸರ್ಕಾರದ ಪಾಲು ೪೫ ಹಾಗೂ ರಾಜ್ಯ ಸರ್ಕಾರದ ಪಾಲು ೫೫ ರಾಜ್ಯ ಪಾಲು ರಾಜ್ಯದ ಜನತೆ ನೀಡಿರುವ ತೆರಿಗೆಯ ಹಣವಾಗಿದೆ ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಹೆಚ್ಚುಗಾರಿಕೆ ಏನೂ ಇಲ್ಲವೆಂದರು. ಕ್ಷೇತ್ರದ ಅಭಿವೃದ್ಧಿಗೆ ವಿವಿಧ ಕಾಮಗಾರಿಗಳನ್ನು ಈಗಾಗಲೇ ಅನುಮೋದನೆ ನೀಡಿದ್ದು, ರಸ್ತೆ, ಪಾಲಿಟೆಕ್ನಿಕ್, ಐಸ್ ಕ್ರೀಮ್ ಘಟಕ, ಕೆರೆಗಳ ಅಭಿವೃದ್ಧಿ ಭೀಕರ ಬರಗಾಲ, ಬಿಸಿಲಿನ ಬೇಗೆ, ಬಿಸಿಲನತಾಪ ಮೆಟ್ಟಿನಿಲ್ಲಬೇಕಾದ ಅನಿವಾರ್ಯ ಸಂದರ್ಭ ಎದುರಾಗಿದೆ.

ಅಡಿಪಾಯ ಹಾಕಿದ್ದು ಕಾಂಗ್ರೆಸ್‌

60 ವರ್ಷದಲ್ಲಿ ಮಾಡಲಾಗದ ಅಭಿವೃದ್ಧಿ ಮಾಡಲಾಗದವರು 10 ವರ್ಷದಲ್ಲಿ ನಾವು ಮಾಡಿದ್ದೇವೆಂದು ಬೊಬ್ಬೆ ಹೊಡೆಯುತ್ತಿರುವ ಬಿಜೆಪಿಯವರು ದೇಶದ ಅಣೆಕಟ್ಟುಗಳು, ಬೃಹತ್ ಕೈಗಾರಿಕೆಗಳು, ಸರ್ಕಾರಿಸಂಸ್ಥೆಗಳು, ಶಿಕ್ಷಣ, ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾದ ಅಡಿಪಾಯದ ಆಧಾರದ ಮೇಲೆ ದೇಶದ ಪ್ರಗತಿಗೆ ಒಂದು ಭದ್ರ ಬುನಾದಿ ಹಾಕಿಕೊಟ್ಟಿರುವುದು ಕಾಂಗ್ರೆಸ್‌ ಪಕ್ಷವೆಂದು ಪ್ರತಿಪಾದಿಸಿದರು.

ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿದ ವಾಜಪೇಯಿ ಕಾರ್ಯಕ್ರಮಗಳನ್ನು ೧೦ ವರ್ಷಗಳ ನಂತರ ಮನಮೋಹನ್ ಸಿಂಗ್ ಮುಂದುವರೆಸಿದರೆಂದರು. ಲೋಕಸಭೆಗೆ ಸಂಘಟನೆಯಿಂದ ಬಂದಿರುವ ವ್ಯಕ್ತಿಯನ್ನು ಅಭ್ಯರ್ಥಿಯನ್ನಾಗಿಸಲಾಗಿದೆ. 1952  ರಿಂದ 2022 ರ ವರೆಗೆ ಎರಡು ಬಾರಿ ಬೇರೆ ಪಕ್ಷದಲ್ಲಿ ಗೆಲುವು ಸಾಧಿಸಿದೆ.

ಜನತೆಯ ಸೇವೆಗೆ ಅ‍ಕಾಶ ಕಲ್ಪಿಸಿ

ಅಭ್ಯರ್ಥಿ ಕೆ.ವಿ.ಗೌತಮ್ ಮಾತನಾಡಿ ವಿದ್ಯಾರ್ಥಿ ಕಾಂಗ್ರೆಸ್ ಹಿನ್ನೆಲೆಯಿಂದ ಬಂದ ನನಗೆ ಎಲ್ಲಾ ರೀತಿಯ ಹುದ್ದೆಗಳನ್ನು ಜವಾಬ್ದಾರಿಯನ್ನು ನೀಡಿ ಇದೀಗ ಅಭ್ಯರ್ಥಿಯನ್ನಾಗಿಸಿರುವುದು ನನ್ನ ಸೇವೆಯನ್ನು ಗುರುತಿಸಿದಂತಾಗಿದ್ದು ತಾವುಗಳು ಪ್ರತಿಯೊಬ್ಬ ಮತದಾರರನ್ನು ಭೇಟಿ ಮಾಡಿ ಕಾಂಗ್ರೇಸ್ ಪಕ್ಷದ ಸಾಧನೆಗಳನ್ನು ಮನವರಿಕೆ ಮಾಡಿಕೊಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಮತಗಳನ್ನು ದೊರಕಿಸಿಕೊಡುವ ಮೂಲಕ ನಿಮ್ಮಗಳ ಸೇವೆ ಮಾಡುವ ಸದಾವಕಾಶ ಕಲ್ಪಿಸುವಂತೆ ಕೋರಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಡಾಬಾ ನಾಗರಾಜ್, ಗ್ರಾಮಾಂತರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಲಕ್ಷ್ಮೀನಾರಾಯಣ ರೆಡ್ಡಿ, ಟಿಎಪಿಎಂಎಸ್ ಅಧ್ಯಕ್ಷ ನಾಗೇಶ್, ಕೆಪಿಸಿಸಿ ಕುರುಟಹಳ್ಳಿ ಕೃಷ್ಣಮೂರ್ತಿ, ಸಂತೇಕಲ್ಲಹಳ್ಳಿ ಗೋವಿಂದಪ್ಪ, ಜಿ.ಪಂ. ಮಾಜಿ ಅಧ್ಯಕ್ಷ ಚಿನ್ನಪ್ಪ, ಜಿ.ಪಂ. ಮಾಜಿ ಸದಸ್ಯ ಈರುಳ್ಳಿ ಶಿವಣ್ಣ, ಜೈಭೀಮ್ ಮುರಳಿ, ಅಮರ್, ಚಂದ್ರಪ್ಪ, ಉಪಸ್ಥಿತರಿದ್ದರು.

Share this article