ಬರಪೀಡಿತ ತಾಲೂಕು ಸಮೀಕ್ಷೆ ಶುರು

Published : Jul 11, 2026, 05:47 AM IST
 Drought

ಸಾರಾಂಶ

ಮುಂಗಾರು ಅಭಾವ ಆಧರಿಸಿ ರಾಜ್ಯದಲ್ಲಿ ಬರಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸಿ ಕೇಂದ್ರ ಸರ್ಕಾರಕ್ಕೆ ಪರಿಹಾರಕ್ಕಾಗಿ ಪ್ರಸ್ತಾವನೆ ಸಲ್ಲಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.ಈ ನಿಟ್ಟಿನಲ್ಲಿ ವಾಡಿಕೆಗಿಂತ ಶೇ.60ರಷ್ಟು ಕಡಿಮೆ ಮಳೆಯಾದ ಹಾಗೂ ಸತತ ಮೂರು ವಾರ ಮಳೆಯಾಗದ ತಾಲೂಕುಗಳ ಸಮೀಕ್ಷೆ

  ಬೆಂಗಳೂರು :  ಮುಂಗಾರು ಅಭಾವ ಆಧರಿಸಿ ರಾಜ್ಯದಲ್ಲಿ ಬರಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸಿ ಕೇಂದ್ರ ಸರ್ಕಾರಕ್ಕೆ ಪರಿಹಾರಕ್ಕಾಗಿ ಪ್ರಸ್ತಾವನೆ ಸಲ್ಲಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.

ಈ ನಿಟ್ಟಿನಲ್ಲಿ ವಾಡಿಕೆಗಿಂತ ಶೇ.60ರಷ್ಟು ಕಡಿಮೆ ಮಳೆಯಾದ ಹಾಗೂ ಸತತ ಮೂರು ವಾರ ಮಳೆಯಾಗದ ತಾಲೂಕುಗಳ ಸಮೀಕ್ಷೆ ನಡೆಸಿ ವಾರದೊಳಗೆ ಪ್ರಸ್ತಾವನೆ ಸಲ್ಲಿಸಲು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ ಮತ್ತು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ನಿರ್ದೇಶಿಸಿದೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಸೂಚನೆ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಈ ಸಂಬಂಧ ಸ್ಪಷ್ಟ ಸೂಚನೆ ನೀಡಿದ್ದಾರೆ. ತಮ್ಮ ವ್ಯಾಪ್ತಿಯ ಪ್ರತಿಯೊಂದು ತಾಲೂಕುಗಳ ಕ್ಷೇತ್ರದಲ್ಲಿ ಸತ್ಯಾಂಶ ಪರಿಶೀಲಿಸಿ ಸರ್ಕಾರಿ ಮಾನದಂಡಗಳ ಪ್ರಕಾರ ಬರ ಪೀಡಿತ ಪ್ರದೇಶಗಳ ಪಟ್ಟಿ ಮಾಡಿ ವರದಿ ಸಲ್ಲಿಸಬೇಕು. ಮುಂಗಾರು ಪೂರ್ವ ಹಾಗೂ ಮುಂಗಾರು ಅವಧಿಯಲ್ಲಿ ಈವರೆಗೆ ವಾಡಿಕೆಗಿಂತ ಶೇ.60ಕ್ಕಿಂತ ಕಡಿಮೆ ಮಳೆಯಾಗಿರುವ ಮತ್ತು ಸತತ ಮೂರು ವಾರಗಳವರೆಗೆ ಮಳೆಯಾಗದ ತಾಲೂಕುಗಳನ್ನು ಗುರುತಿಸಿ ಕಂದಾಯ ಇಲಾಖೆಗೆ ವರದಿ ನೀಡಬೇಕೆಂದು ಸೂಚಿಸಲಾಗಿದೆ.

ಡಿಸಿ, ಸಿಇಒಗಳು ನೀಡಿದ ವರದಿ ಆಧರಿಸಿ ಕರ್ನಾಟಕದ ಎಷ್ಟು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು ಹಾಗೂ ಮಳೆ ಕೊರತೆಯಿಂದ ಆಗಿರುವ ಬೆಳೆನಷ್ಟ, ಕುಡಿಯುವ ನೀರಿನ ಸಮಸ್ಯೆಗಳಿಗೆ ಎಷ್ಟು ಪರಿಹಾರ ಮೊತ್ತ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಸದ್ಯಕ್ಕೆ ಆರಂಭಿಕ ಪ್ರಸ್ತಾವನೆ ಸಲ್ಲಿಸಲಾಗುವುದು. ಮುಂಗಾರು ಅವಧಿ ಪೂರ್ಣಗೊಂಡ ಬಳಿಕ ಮತ್ತೊಂದು ಸಮೀಕ್ಷೆ ನಡೆಸಿ ಅಂತಿಮ ವರದಿಯೊಂದಿಗೆ ಒಟ್ಟಾರೆ ನಷ್ಟದ ಪರಿಹಾರಕ್ಕೆ ಅಂತಿಮ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

121 ತಾಲೂಕುಗಳಲ್ಲಿ ಮಳೆ ಕೊರತೆ:

ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ದತ್ತಾಂಶದ ಪ್ರಕಾರ, 239 ತಾಲೂಕುಗಳ ಪೈಕಿ 121ರಲ್ಲಿ ಪ್ರಸ್ತುತ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಈ ಪೈಕಿ 11 ತಾಲೂಕುಗಳಲ್ಲಿ ತೀವ್ರ ಮಳೆ ಅಭಾವ ತಲೆದೋರಿದೆ.

4 ಸೂಚ್ಯಂಕಗಳ ಪರಿಗಣನೆ:

ಹವಾಮಾನ ತಜ್ಞರು ಹೇಳುವ ಪ್ರಕಾರ, ನಾಲ್ಕು ಪ್ರಮುಖ ಸೂಚ್ಯಂಕಗಳನ್ನು ಆಧರಿಸಿ ಒಂದು ಪ್ರದೇಶವನ್ನು ಬರ ಪೀಡಿತ ಎಂದು ಘೋಷಿಸಲಾಗುತ್ತದೆ. ಮೊದಲನೆಯದು ಮಳೆ ಪ್ರಮಾಣ ವಾಡಿಕೆಗಿಂತ ಶೇ.60ಕ್ಕಿಂತ ಕಡಿಮೆ ಇರುವುದು/ಸತತ ಮೂರು ವಾರ ಮಳೆಯಾಗದಿರುವುದು. ಎರಡನೆಯದು ಶೇ.75ಕ್ಕಿಂತ ಕಡಿಮೆ ಬಿತ್ತನೆ ಪ್ರದೇಶ ಮತ್ತು ಮಣ್ಣಿನ ತೇವಾಂಶ ಮಟ್ಟ ಸರಾಸರಿಗಿಂತ ಕಡಿಮೆ ಇರುವುದು. ಮೂರನೆಯದು ಜಲಾಶಯಗಳ ನೀರಿನ ಮಟ್ಟ ಮತ್ತು ಅಂತರ್ಜಲದ ಮಟ್ಟ ಕಳೆದ 10 ವರ್ಷಗಳ ಸರಾಸರಿ ಮಟ್ಟಕ್ಕಿಂತ ಕಡಿಮೆ ಇದ್ದರೆ ಅದನ್ನು ಬರದ ಸೂಚ್ಯಂಕವಾಗಿ ಪರಿಗಣಿಸಲಾಗುತ್ತದೆ. ಕೊನೆಯದು ರಾಜ್ಯದ ಭೂ ಪ್ರದೇಶದಲ್ಲಿ ಇರಬೇಕಾದ ಸಾಮಾನ್ಯ ಸಸ್ಯವರ್ಗದ ಸೂಚ್ಯಂಕದಲ್ಲಿನ ವ್ಯತ್ಯಾಸ ಹಾಗೂ ಉಪಗ್ರಹ ಆಧಾರಿತ ಬೆಳೆಯ ಗುಣಮಟ್ಟದ ಸಮೀಕ್ಷೆಯನ್ನು ಬರ ನಿರ್ಧರಿಸಲು ಬಳಸಲಾಗುತ್ತದೆ. ಈ ನಾಲ್ಕರಲ್ಲಿ ಯಾವುದಾದರೂ ಮೂರು ರೀತಿಯ ಸೂಚ್ಯಂಕಗಳು ಕಂಡುಬಂದರೆ ಅಂಥ ಪ್ರದೇಶ ಅಥವಾ ತಾಲೂಕುಗಳನ್ನು ತೀವ್ರ ಬರ ಪೀಡಿತ ಎಂದು, ಎರಡು ರೀತಿಯ ಸೂಚ್ಯಂಕಗಳು ಕಂಡುಬಂದರೆ ಅದನ್ನು ಬರ ಪ್ರದೇಶ ಎಂದು ಪರಿಗಣಿಸಲಾಗುತ್ತದೆ.

ಅಧಿಕಾರಿಗಳು ಹೇಳುವ ಪ್ರಕಾರ, ಕೇಂದ್ರದ ಬರ ನಿರ್ವಹಣೆ ಕೈಪಿಡಿ ಪ್ರಕಾರ, ಇಂಥ ಸಮೀಕ್ಷೆಯನ್ನು ಜುಲೈ ಕೊನೆಯ ವಾರ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಮಾಡಬೇಕು. ಮುಂಗಾರು ಅವಧಿಯ ಕನಿಷ್ಠ ಶೇ.50 ದಿನಗಳು ಪೂರ್ಣಗೊಂಡಿರಬೇಕು. ಇದು ಆರಂಭಿಕ ಸಿದ್ಧತೆ ಅಷ್ಟೆ. ಈಗ ಎರಡನೇ ವಾರದಲ್ಲಿ ಒಂದು ವರದಿ ಪಡೆದು ತಾತ್ಕಾಲಿಕ ವರದಿ ಸಿದ್ಧಪಡಿಸಿಕೊಳ್ಳಲಾಗುತ್ತದೆ. ನಂತರ ಮತ್ತೆ ಜುಲೈ ಕೊನೆಯ ವಾರದಲ್ಲಿ ಮತ್ತೊಂದು ವರದಿ ಪಡೆದು ವರದಿ ಅಂತಿಮಗೊಳಿಸಿ ಕೇಂದ್ರಕ್ಕೆ ಸಲ್ಲಿಸಲಾಗುತ್ತದೆ

ಬರ ಘೋಷಣೆಗೆ ಹೇಗೆ?

- ರಾಜ್ಯದಲ್ಲಿ ವಾಡಿಕೆಗಿಂತ ಶೇ.60ರಷ್ಟು ಕಡಿಮೆ ಮಳೆಯಾದ, ಸತತ 3 ವಾರ ಮಳೆಯಾಗದ ತಾಲೂಕುಗಳ ಸಮೀಕ್ಷೆಗೆ ಸೂಚನೆ

- ಈ ಸಂಬಂಧ ಒಂದು ವಾರದೊಳಗೆ ಪ್ರಸ್ತಾವನೆ ಸಲ್ಲಿಸಲು ಎಲ್ಲಾ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳಿಗೆ ಸರ್ಕಾರ ನಿರ್ದೇಶನ

- ಸತ್ಯಾಂಶ ಪರಿಶೀಲಿಸಿ ಸರ್ಕಾರಿ ಮಾನದಂಡಗಳ ಪ್ರಕಾರ ಬರಪೀಡಿತ ಪ್ರದೇಶಗಳ ಪಟ್ಟಿ ತಯಾರಿಸಿ ಸಲ್ಲಿಸಲು ಆದೇಶ

- ಬೆಳೆ ನಷ್ಟ, ನೀರಿನ ಸಮಸ್ಯೆಗಳಿಗೆ ಎಷ್ಟು ಪರಿಹಾರ ನೀಡಬೇಕೆಂದು ಕೇಂದ್ರಕ್ಕೆ ಸದ್ಯ ಆರಂಭಿಕ ಪ್ರಸ್ತಾವನೆ ಸಲ್ಲಿಸಲಿರುವ ರಾಜ್ಯ

- ಮುಂಗಾರು ಅವಧಿ ಪೂರ್ಣಗೊಂಡ ಬಳಿಕ ಮತ್ತೆ ಸಮೀಕ್ಷೆ ನಡೆಸಿ ಅಂತಿಮ ವರದಿ ಜತೆಗೆ ಒಟ್ಟಾರೆ ನಷ್ಟ ಪರಿಹಾರಕ್ಕೆ ಅಂತಿಮ ಪ್ರಸ್ತಾಪನೆ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಯುವಕರೇ ಆರೆಸ್ಸೆಸ್‌ ತಂಟೆಗೆ ಹೋಗ್ಬೇಡಿ: ಪ್ರಿಯಾಂಕ್‌ ಖರ್ಗೆ
ಸುಶ್ಮಿತಾ ಸೇರಿ ಟಿಎಂಸಿ 3 ಮಾಜಿ ಸಂಸದರು ಬಿಜೆಪಿಗೆ ಸೇರ್ಪಡೆ