ಸಿಎಂ ಸಿದ್ದರಾಮಯ್ಯಗೆ ಜಾತಿಗಣತಿ ವರದಿ ಸ್ವೀಕಾರಿಸುವಂತೆ ಸ್ವಾಮೀಜಿಗಳ ಒತ್ತಡ

KannadaprabhaNewsNetwork |  
Published : Jan 07, 2024, 01:30 AM ISTUpdated : Jan 07, 2024, 01:08 PM IST
ಹಿಂದುಳಿದ ಸಮುದಾಯಗಳ ಮಠಾಧೀಶರು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. | Kannada Prabha

ಸಾರಾಂಶ

ಜಾತಿ ಗಣತಿಯನ್ನು ಸ್ವೀಕರಿಸುವಂತೆ ಕೋರಿ ವಿವಿಧ ಮಠಗಳ ಸ್ವಾಮೀಜಿಗಳು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಇದನ್ನು ಕಾನೂನು ಸಲಹೆ ಪಡೆದು ಮುನ್ನಡೆಯುತ್ತೇನೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಕನ್ನಡಪ್ರಭ ವಾರ್ತೆ 

ಬೆಂಗಳೂರು: ಜಾತಿ ಗಣತಿ ವರದಿಯನ್ನು ತಿರಸ್ಕರಿಸಿ, ವೈಜ್ಞಾನಿಕವಾಗಿ ಮತ್ತೆ ಜಾತಿ ಗಣತಿ ನಡೆಸಬೇಕು ಎಂದು ಒಕ್ಕಲಿಗ ಹಾಗೂ ಲಿಂಗಾಯತ ಮಠಾಧೀಶರು ಸರ್ಕಾರವನ್ನು ಆಗ್ರಹಿಸಿದ ಬೆನ್ನಲ್ಲೇ ಇದೀಗ ಹಿಂದುಳಿದ ಸಮುದಾಯದ ಮಠಾಧೀಶರು ನಿಯೋಗದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಜಾತಿಗಣತಿ ವರದಿಯನ್ನು ಸರ್ಕಾರ ಸ್ವೀಕರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸ್ವಾಮೀಜಿಗಳು ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ತನ್ಮೂಲಕ ಮೇಲ್ವರ್ಗ ಹಾಗೂ ಹಿಂದುಳಿದ ವರ್ಗಗಳ ಮಠಾಧೀಶರ ತದ್ವಿರುದ್ಧ ಬೇಡಿಕೆಗಳಿಂದಾಗಿ ಸರ್ಕಾರ ಇಕ್ಕಟ್ಟಿಗೆ ಸಿಲುಕುವಂತಾಗಿದೆ.

ಶನಿವಾರ ತಮ್ಮನ್ನು ಭೇಟಿ ಮಾಡಿ ಮನವಿ ಮಾಡಿದ ಹಿಂದುಳಿದ ಮಠಾಧೀಶರ ಆಗ್ರಹಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ವರದಿ ನೀಡಲು ಎರಡು ತಿಂಗಳು ಆಯೋಗದ ಅವಧಿ ವಿಸ್ತರಿಸಲಾಗಿದೆ. ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಅವರು ಹಿಂದಿನ ಅಧ್ಯಕ್ಷರಾದ ಕಾಂತರಾಜು ಅವರ ವರದಿಯನ್ನೇ ಕೊಡಲು ಸಾಧ್ಯವಿಲ್ಲ ಎಂದಿದ್ದಾರೆ. 

ಈ ಬಗ್ಗೆ ಕಾನೂನು ಸಲಹೆ ಪಡೆದು ಮುಂದುವರೆಯಲಾಗುವುದು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಮಠಗಳಿಗೆ ಜಮೀನು ಮಂಜೂರು ಮಾಡುವ ಬಗ್ಗೆ ಸ್ವಾಮೀಜಿಗಳು ಪ್ರಸ್ತಾಪಿಸಿದರು. ತಹಸೀಲ್ದಾರ್ ಕಡೆಯಿಂದ ವರದಿ ತರಿಸಿಕೊಳ್ಳಲು ಸೂಚಿಸಲಾಗಿದ್ದು, ಶೀಘ್ರದಲ್ಲೇ ವರದಿ ನೀಡುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯೊಂದಿಗೆ ಸಿದ್ದರಾಮಯ್ಯ ಅವರು ದೂರವಾಣಿಯಲ್ಲಿ ಮಾತನಾಡಿದರು. 

ಭೋವಿ ಸಮುದಾಯ ಚಿತ್ರದುರ್ಗದ ಸಿದ್ದರಾಮೇಶ್ವರ ಸ್ವಾಮೀಜಿ, ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ, ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಶ್ರೀಗಳು ಹಾಗೂ ಹಿಂದುಳಿದ ಜಾತಿಗಳ ಮಠಗಳ ಸ್ವಾಮೀಜಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಕೆ.ಎ.ದಯಾನಂದ ಉಪಸ್ಥಿತರಿದ್ದರು.

ಗ್ಯಾರಂಟಿಗಳಿಗೆ ಮೆಚ್ಚುಗೆ: ಶ್ರಮಿಕ ವರ್ಗದವರಿಗೆ ಸರ್ಕಾರದ ಗ್ಯಾರಂಟಿ ಯೋಜನೆಗಳು ಹೆಚ್ಚು ಉಪಯುಕ್ತವಾಗಿವೆ ಎಂದು ಮುಖ್ಯಮಂತ್ರಿಗಳ ಭೇಟಿ ವೇಳೆ ಸ್ವಾಮೀಜಿಗಳು ಅಭಿಪ್ರಾಯಪಟ್ಟರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ