;Resize=(412,232))
ಬೆಂಗಳೂರು : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ವರದಿ ಸಚಿವ ಸಂಪುಟ ಸಭೆಗೆ ತರಬೇಕು, ಅಧಿವೇಶನಕ್ಕೂ ತರಲೇಬೇಕು. ಅದು ಸರ್ಕಾರದ ಜವಾಬ್ದಾರಿ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿವೇಶನದಲ್ಲಿ ಜಾತಿ ಜನಗಣತಿ ವರದಿ ಮಂಡಿಸುವ ಕುರಿತ ಬಿಜೆಪಿ ಶಾಸಕ ಸುನೀಲ್ ಕುಮಾರ್ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಅವರು, ಜನಗಣತಿ ವರದಿಯಿಂದ ಯಾರಿಗೂ ಏನೂ ತೊಂದರೆ ಇಲ್ಲವಲ್ಲ ಎಂದರು.
ಡಿ.ಕೆ.ಶಿವಕುಮಾರ್ ಅವರು ಉಪಮುಖ್ಯಮಂತ್ರಿ ಇದ್ದಾಗ ವಿರೋಧಿಸಿದ್ದರಲ್ಲ ಎಂಬ ಪ್ರಶ್ನೆಗೆ, ‘ಡಿ.ಕೆ.ಶಿವಕುಮಾರ್ ಅವರು ಗಣತಿಗೆ ವಿರೋಧ ಮಾಡಿರಲಿಲ್ಲ. ವರದಿ ಹಳೆಯದಾಗಿದೆ. ಹೀಗಾಗಿ ಹೊಸದಾಗಿ ಮಾಡಬೇಕು ಎಂದಿದ್ದರು. ಹೀಗಾಗಿ ಅದರ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ಮಾಡುತ್ತಾರೆ’ ಎಂದರು.
ಇನ್ನು ಕೇಂದ್ರ ಜಾತಿಗಣತಿ ವರದಿ ಬಗ್ಗೆ ಉತ್ತರಿಸಿ, ಕೇಂದ್ರ ಸರ್ಕಾರದ ಜಾತಿ ಜನಗಣತಿ ವರದಿ ಬಂದರೂ ಒಳ್ಳೆಯದು. ನಮ್ಮದು ಸರಿ ಇದೆಯೇ ಅಥವಾ ಅವರದ್ದು ಸರಿ ಇದೆಯೇ ಎಂದು ತಪ್ಪು-ಸರಿ ನೋಡಬಹುದು ಎಂದು ಹೇಳಿದರು.
ಸಂಪುಟ ಪುನರ್‌ರಚನೆಯಾದರೆ ಸರ್ಕಾರ ಅಲುಗಾಡುತ್ತದೆ ಎಂಬ ಬಿಜೆಪಿ ಟೀಕೆಗೆ, ‘ಸಂಪುಟ ವಿಸ್ತರಣೆಯಾದರೆ ಏನೂ ಆಗುವುದಿಲ್ಲ. ಅಲುಗಾಡಿದರೂ ಎರಡು ದಿನ ಸ್ವಲ್ಪ ಅಲುಗಾಡಬಹುದು. ಆದರೆ ಮೂರನೇ ಮುಖ್ಯಮಂತ್ರಿ ಆಗುತ್ತಾರೆ ಎನ್ನುವ ರೀತಿ ಇಲ್ಲ. ಡಿ.ಕೆ.ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ, ಅವರೇ ಗಟ್ಟಿಯಾಗಿದ್ದಾರೆ’ ಎಂದರು.
ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಅಂತರ ಕಾಯ್ದುಕೊಂಡ ಕುರಿತು ಸ್ಪಷ್ಟನೆ ನೀಡಿರುವ ಸತೀಶ್ ಜಾರಕಿಹೊಳಿ, ‘ಈ ವಿಡಿಯೋ ಮಾತ್ರವಲ್ಲ, ಹಳೆ ವಿಡಿಯೋ ನೋಡಿದರೂ ಹೀಗೆಯೇ ಇರುತ್ತದೆ. ನಮ್ಮ ನಡುವೆ ಹಿಂದೆಯೂ ಹೀಗೆಯೇ ಇತ್ತು, ಮುಂದೆಯೂ ಹೀಗೆಯೇ ಇರುತ್ತದೆ. ಹಿರಿಯರು ಬಂದರೆ ಏಳಬೇಕು ಎಂದು ದೂರ ಕುಳಿತುಕೊಂಡಿದ್ದೆ. ಹತ್ತು ವರ್ಷದಿಂದ ನಾವು ಹೀಗೆಯೇ ಇದ್ದೇವೆ. ನಮ್ಮ ನಡುವೆ ಗೊಂದಲವಿಲ್ಲ’ ಎಂದರು.