ಕೋವಿಡ್ ಹಗರಣದ ವರದಿಯನ್ನು ಸಂಸದ ಡಾ.ಕೆ.ಸುಧಾಕರ್ ರಾಜಕೀಯ ಷಡ್ಯಂತ್ರ ಎಂದು ಬಣ್ಣಿಸಿದ್ದಾರೆ. ಸಚಿವ ಎಂ.ಬಿ.ಪಾಟೀಲ್ ತಿಳಿವಳಿಕೆಯಿಂದ ಮಾತಾಡಬೇಕು ಎಂದೂ ಹೇಳಿದ್ದಾರೆ. ಕೋವಿಡ್ ನಿರ್ವಹಣೆಯಲ್ಲಿ ಇಡೀ ಸರ್ಕಾರದ ಪಾತ್ರವಿದ್ದು, ಒಬ್ಬ ವ್ಯಕ್ತಿಯನ್ನು ದೂಷಿಸುವುದು ಸರಿಯಲ್ಲ
ಚಿಕ್ಕಬಳ್ಳಾಪುರ : ಕೋವಿಡ್ ಹಗರಣದ ವರದಿ ಸಂಪೂರ್ಣ ರಾಜಕೀಯ ಷಡ್ಯಂತ್ರವಾಗಿದ್ದು, ಸಚಿವ ಎಂ.ಬಿ.ಪಾಟೀಲ್ ಸ್ವಲ್ಪ ತಿಳಿವಳಿಕೆಯಿಂದ ಮಾತಾಡಬೇಕು ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗಾಮದ ಬಳಿಯ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ದಿಶಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕೋವಿಡ್ ತನಿಖಾ ವರದಿಯಲ್ಲಿ ನನ್ನ ಹೆಸರನ್ನು ಉಲ್ಲೇಖಿಸಿದ್ದಾರೆಯೇ ಎಂದು ನೋಡಬೇಕು ಎಂದರು.
ತಿಳಿವಳಿಕೆಯಿಂದ ಮಾತನಾಡಲಿ
ಸಚಿವ ಎಂ.ಬಿ.ಪಾಟೀಲ್ ಅವರು ಸಂಸ್ಕಾರವಂತರು ಹಾಗೂ ವಿದ್ಯಾವಂತರು ಎಂದು ತಿಳಿದಿದ್ದೇನೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಹೀಗೆ ಮಾತನಾಡಿದರೆ ಏನು ಹೇಳಬೇಕು. ಕೈಗಾರಿಕಾ ಇಲಾಖೆಯಲ್ಲಿ ನಡೆದ ಎಲ್ಲ ಅಕ್ರಮಕ್ಕೆ ಎಂ.ಬಿ.ಪಾಟೀಲ್ ಹೊಣೆ ಎನ್ನಬೇಕೆ, ರೈಲ್ವೆ ಅಪಘಾತವಾದರೆ ಅದಕ್ಕೆ ಸಂಪೂರ್ಣ ರೈಲ್ವೆ ಸಚಿವರೇ ಕಾರಣವಾಗುತ್ತಾರಾ, ಸ್ವಲ್ಪ ತಿಳಿವಳಿಕೆಯಿಂದ ಮಾತಾಡಬೇಕು ಎಂದರು. ವ್ಯಕ್ತಿ ಮಾಡಿದ ನಿರ್ವಹಣೆ ಅಲ್ಲ
ಇದು ಸಂಪೂರ್ಣ ರಾಜಕೀಯ ಷಡ್ಯಂತ್ರ. ಮುಖ್ಯಮಂತ್ರಿಗಳ ಭವಿಷ್ಯ ಕೋರ್ಟ್‌ನಲ್ಲಿದ್ದು, ಅದು ಡೋಲಾಯಮಾನವಾಗಿದೆ. ನಿವೃತ್ತ ನ್ಯಾಯಾಧೀಶರ ಬಳಿ ರಾತ್ರೋರಾತ್ರಿ ತರಿಸಿಕೊಂಡ ಈ ವರದಿಯಲ್ಲಿ ಏನಿದೆ ಎಂದು ತಿಳಿಸಲಿ. ಕೋವಿಡ್ ನಿರ್ವಹಣೆಯನ್ನು ಒಬ್ಬ ಸಚಿವ ಮಾಡಿಲ್ಲ. ಅದನ್ನು ಇಡೀ ಸರ್ಕಾರ ಮಾಡಿದೆ. ಉತ್ತಮ ಕೋವಿಡ್ ನಿರ್ವಹಣೆಗಾಗಿ ಕರ್ನಾಟಕ ಸರ್ಕಾರಕ್ಕೆ ಪ್ರಶಸ್ತಿ ಕೂಡ ಬಂದಿದೆ. ತಾಂತ್ರಿಕ ಸಮಿತಿ, ತಜ್ಞರ ಸಮಿತಿ, ಅಧಿಕಾರಿಗಳ ತಂಡ ಕೂಡ ಅಲ್ಲಿತ್ತು. ಯಾವುದೇ ನಿರ್ಧಾರವನ್ನು ಒಬ್ಬ ವ್ಯಕ್ತಿ ಕೈಗೊಂಡಿಲ್ಲ. ನಾನು ಕೂಡ ಆ ತಂಡದಲ್ಲಿ ಒಬ್ಬ ಸದಸ್ಯನಾಗಿದ್ದೆ ಎಂದರು.
ದಿಶಾ ಸಭೆಯ ಕುರಿತು ಮಾತನಾಡಿ, ಕೇಂದ್ರ ಸರ್ಕಾರದ ಭೂಜಲ್, ಜಲಜೀವನ್ ಮಿಷನ್, ಆಯುಷ್ಮಾನ್ ಭಾರತ್ ಸೇರಿದಂತೆ ಹಲವು ಯೋಜನೆಗಳ ಪ್ರಗತಿ ಬಗ್ಗೆ ಮಾಹಿತಿ ಪಡೆಯಲಾಗಿದೆ. ನಾನು ಆರೋಗ್ಯ ಸಚಿವನಾಗಿದ್ದಾಗ ಆಯುಷ್ಮಾನ್ ಕಾರ್ಡ್ ವಿತರಿಸುವ ಕಾರ್ಯ ವೇಗವಾಗಿ ಸಾಗಿತ್ತು. ಆದರೆ ಕಳೆದ 15 ತಿಂಗಳಿಂದ ಇಡೀ ರಾಜ್ಯದಲ್ಲಿ ಕಾರ್ಡ್ ವಿತರಣೆ ನಿಧಾನಗತಿಯಲ್ಲಿ ಸಾಗಿದೆ ಎಂದರು.
₹5 ಲಕ್ಷ ಆರೋಗ್ಯ ವಿಮೆ
ಈ ಯೋಜನೆ ಶೇ.100 ರಷ್ಟು ಅನುಷ್ಠಾನವಾದರೆ ಎಲ್ಲರಿಗೂ 5 ಲಕ್ಷ ರು. ಆರೋಗ್ಯ ವಿಮೆ ದೊರೆಯುತ್ತದೆ. ಇಂತಹ ಯೋಜನೆ ಬೇರೆ ಯಾವುದೇ ದೇಶದಲ್ಲಿಲ್ಲ. ಇದೇ ರೀತಿ ಉಚಿತ ನಿವೇಶನ, ವಸತಿ ಯೋಜನೆಗಳ ಬಗ್ಗೆ ಚರ್ಚಿಸಿದ್ದೇನೆ. ಎಲ್ಲ ಯೋಜನೆಗಳಿಗೆ ಒತ್ತು ನೀಡಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮುಂಚೂಣಿ ಸಾಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಿದರು.