ಗಾಂಧಿ ಕುಟುಂಬ ಗೆಲ್ಲಿಸುತ್ತಿದ್ದ ಶರ್ಮಾಗೆ ಅಮೇಠಿ ಗೆಲ್ಲುವ ಹೊಣೆ

KannadaprabhaNewsNetwork | Updated : May 04 2024, 04:23 AM IST

ಸಾರಾಂಶ

ಗಾಂಧಿ ಕುಟುಂಬದ ಭದ್ರ ಕೋಟೆಗಳ ಪೈಕಿ ಒಂದಾಗಿದ್ದ ಅಮೇಠಿಯಲ್ಲಿ ಈ ಬಾರಿ ಗಾಂಧೀ ಕುಟುಂಬದ ಅತ್ಯಾಪ್ತ ಕಿಶೋರಿಲಾಲ್‌ ಶರ್ಮಾ(63)ಗೆ ಕಾಂಗ್ರೆಸ್‌ ಟಿಕೆಟ್ ನೀಡಿದೆ.

ನವದೆಹಲಿ: ಗಾಂಧಿ ಕುಟುಂಬದ ಭದ್ರ ಕೋಟೆಗಳ ಪೈಕಿ ಒಂದಾಗಿದ್ದ ಅಮೇಠಿಯಲ್ಲಿ ಈ ಬಾರಿ ಗಾಂಧೀ ಕುಟುಂಬದ ಅತ್ಯಾಪ್ತ ಕಿಶೋರಿಲಾಲ್‌ ಶರ್ಮಾ(63)ಗೆ ಕಾಂಗ್ರೆಸ್‌ ಟಿಕೆಟ್ ನೀಡಿದೆ. 

ಇದರೊಂದಿಗೆ 25 ವರ್ಷಗಳ ಬಳಿಕ ಗಾಂಧಿ ಕುಟುಂಬಕ್ಕೆ ಹೊರತಾದ ವ್ಯಕ್ತಿಯೊಬ್ಬರು ಇಲ್ಲಿ ಕಣಕ್ಕೆ ಇಳಿದಂತಾಗಿದೆ. ವಿಶೇಷವೆಂದರೆ ಇದು ಶರ್ಮಾ ಅವರ ಮೊದಲ ಚುನಾವಣಾ ಹೋರಾಟ.

ಶರ್ಮಾ ಹಿನ್ನೆಲೆ: 1981ರಲ್ಲಿ ರಾಜೀವ್‌ ಅಮೇಠಿಯಲ್ಲಿ ಸ್ಪರ್ಧೆಗೆ ಮುಂದಾದಾಗ, ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸಗಳ ಮೇಲೆ ನಿಗಾ ಇಡಲು ಹೊರ ರಾಜ್ಯದ ಯುವನಾಯಕನ ಹುಟುಕಾಟದಲ್ಲಿದ್ದರು. ಈ ವೇಳೆ ಪಂಜಾಬ್‌ನ ಲೂಧಿಯಾನ ಮೂಲದ ಶರ್ಮಾರನ್ನು ಆಯ್ಕೆ ಮಾಡಿ ಇಲ್ಲಿಗೆ ನಿಯೋಜಿಸಲಾಗಿತ್ತು. ಹೀಗೆ ಅಮೇಠಿಗೆ ಬಂದ ಶರ್ಮಾ ಮುಂದಿನ 4 ದಶಕಗಳಿಗೂ ಅಧಿಕ ಕಾಲ ಅಮೇಠಿ ಮತ್ತು ರಾಯ್‌ಬರೇಲಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವಿನ ಸಂಪೂರ್ಣ ಹೊಣೆ ವಹಿಸಿಕೊಂಡು ಅದನ್ನು ಯಶಸ್ವಿಯಾಗಿ ನಿರ್ವಹಿಸಿದ ಹಿರಿಮೆ ಹೊಂದಿದ್ಧಾರೆ.

ಮೃದುಭಾಷಿ, ಚುನಾವಣಾ ರಣತಂತ್ರಗಾರ, ಅತ್ಯುತ್ತಮ ಸಮನ್ವಯಕಾರ, ಅಮೇಠಿ ಮತ್ತು ಎಂಬ ಹಿರಿಮೆ ಹೊಂದಿರುವ ಶರ್ಮಾ, ಎರಡೂ ಕ್ಷೇತ್ರಗಳಲ್ಲಿ ದಶಕಗಳಿಂದ ಸಂಸದರು ಮತ್ತು ಮತದಾರರ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸಿದ್ದಾರೆ. 

ಮೊದಲಿಗೆ ರಾಜೀವ್‌, ಬಳಿಕ ಸೋನಿಯಾ, ನಂತರದಲ್ಲಿ ರಾಹುಲ್‌ ಪರವಾಗಿಯೂ ಚುನಾವಣಾ ರಣತಂತ್ರ ರೂಪಿಸಿ ಪಕ್ಷದ ಗೆಲುವನ್ನು ಖಚಿತಪಡಿಸಿದ್ದರು. ಆದರೆ 2014ರಲ್ಲಿ ಅಮೇಠಿಯಲ್ಲಿ ರಾಹುಲ್‌ ತಮ್ಮದೇ ಪ್ರತ್ಯೇಕ ತಂಡ ನಿಯೋಜನೆಗೆ ಮುಂದಾದಾಗ, ಶರ್ಮಾ ಅಮೇಠಿ ಬಿಟ್ಟು ಕೇವಲ ರಾಯ್‌ಬರೇಲಿಗೆ ತಮ್ಮ ಉಸ್ತುವಾರಿ ಸೀಮಿತಗೊಳಿಸಿದರು. ಶರ್ಮಾ ಅಮೇಠಿ ಉಸ್ತುವಾರಿ ಹೊಂದಿದ್ದಾಗ ಪಕ್ಷದ ಅಭ್ಯರ್ಥಿಯ ಗೆಲುವಿನ ಅಂತರ 2 ಲಕ್ಷಕ್ಕಿಂತ ಹೆಚ್ಚಿರುತ್ತಿತ್ತು. ಆದರೆ 2014ರಲ್ಲಿ ಮೊದಲ ಬಾರಿಗೆ ಅದು ಇಳಿಕೆಯಾಯಿತು. 2019ರಲ್ಲಿ ರಾಹುಲ್‌ ಕ್ಷೇತ್ರದಲ್ಲಿ ಸೋಲಬೇಕಾಗಿ ಬಂದಿತ್ತು.ಹೀಗೆ 4 ದಶಕಗಳ ಕಾಲ ಪಕ್ಷಕ್ಕಾಗಿ ಸೇವೆ ಸಲ್ಲಿಸಿದ ಶರ್ಮಾಗೆ ಇದೀಗ ಮರಳಿ ಅಮೇಠಿ ಗೆದ್ದುಬರುವ ಹೊಣೆ ನೀಡಿದೆ.

Share this article