;Resize=(412,232))
ವಿಧಾನಸಭೆ : ‘ಕಸ್ತೂರಿ ರಂಗನ್ ವರದಿ ಬಗ್ಗೆ ನಿರ್ಣಯ ಮಾಡಿ ಕೈತೊಳೆದುಕೊಳ್ಳಬೇಡಿ. ಎನ್‌ಜಿಟಿಯಿಂದ ಒಂದು ವರ್ಷ ಕಾಲಾವಕಾಶ ಪಡೆದು, ಭೌತಿಕ ಸಮೀಕ್ಷೆ ನಡೆಸಬೇಕು’ ಎಂದು ಬಿಜೆಪಿ ಸದಸ್ಯ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.
ಸೋಮವಾರ ವಿಶೇಷ ಅಧಿವೇಶನದಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ವಿಶೇಷ ಅಧಿವೇಶನ ಕರೆದು ಕೇವಲ ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯ ಅಂಗೀಕರಿಸಿ ತೊಳೆದುಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿಯಲ್ಲ. ಪಶ್ಚಿಮಘಟ್ಟ ಸಂರಕ್ಷಣೆಯ ಜೊತೆಗೆ ಕಾಡಂಚಿನ ರೈತರು, ಕುಟುಂಬಗಳು ಹಾಗೂ ಜನಜೀವನವನ್ನು ರಕ್ಷಿಸಲು ರಾಜ್ಯ ಸರ್ಕಾರವೇ ಮುಂದಾಳತ್ವ ವಹಿಸಬೇಕು ಎಂದು ಸಲಹೆ ನೀಡಿದರು.
ಪಶ್ಚಿಮಘಟ್ಟ ಉಳಿಯಬೇಕು, ನದಿಗಳು ಉಳಿಯಬೇಕು, ಪರಿಸರವೂ ಉಳಿಯಬೇಕು. ಅದೇ ರೀತಿ ಕಾಡಂಚಿನ ಜನರು, ರೈತರು ಮತ್ತು ಅವರ ಜೀವನೋಪಾಯವೂ ಉಳಿಯಬೇಕು. ಈ ಎರಡರ ನಡುವೆ ಸಮತೋಲನ ಸಾಧಿಸುವುದೇ ಸರ್ಕಾರದ ಜವಾಬ್ದಾರಿ ಎಂದರು.
ವಿಶೇಷ ಅಧಿವೇಶನವನ್ನು ಕೇವಲ ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸಲು ಬಳಸಿಕೊಳ್ಳಬಾರದು. ರಾಜ್ಯದ ಜನರ ಆತಂಕಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ವೇದಿಕೆಯನ್ನಾಗಿ ಮಾಡಬೇಕು. ನಿರ್ಣಯ ಮಾಡಿ ಕೇಂದ್ರಕ್ಕೆ ಕಳುಹಿಸಿದ ಮಾತ್ರಕ್ಕೆ ಸಮಸ್ಯೆ ಬಗೆಹರಿಯುವುದಿಲ್ಲ. ಎನ್‌ಜಿಟಿ ಮುಂದೆ ಏನಾಗುತ್ತದೆ ಎಂಬುದನ್ನು ನಾವು ಗಮನಿಸಬೇಕು. ನ್ಯಾಯಾಂಗ ಪ್ರಕ್ರಿಯೆಯನ್ನೂ ಎದುರಿಸಬೇಕಾಗಿದೆ. ಹೀಗಾಗಿ ರಾಜ್ಯ ಸರ್ಕಾರವೇ ಸಂಪೂರ್ಣ ಸಿದ್ಧತೆಯೊಂದಿಗೆ ಮುಂದುವರಿಯಬೇಕು ಎಂದು ಅಭಿಪ್ರಾಯಪಟ್ಟರು.
ಕಸ್ತೂರಿ ರಂಗನ್ ಪ್ರಸ್ತಾವನೆಗೆ ಆಧಾರವಾಗಿರುವ ಉಪಗ್ರಹ ಸಮೀಕ್ಷೆ ಹಲವು ವರ್ಷಗಳ ಹಿಂದಿನದ್ದು. ಅಂದಿನ ಭೂಬಳಕೆ ಮತ್ತು ಇಂದಿನ ವಾಸ್ತವ ಪರಿಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹೀಗಿರುವಾಗ ಹಳೆಯ ಉಪಗ್ರಹ ಮಾಹಿತಿಯನ್ನೇ ಅಂತಿಮ ಆಧಾರ ಮಾಡುವುದು ಸರಿಯಲ್ಲ. ಅಡಕೆ ತೋಟ ಯಾವುದು, ಮಾವಿನ ತೋಟ ಯಾವುದು, ಕೃಷಿ ಭೂಮಿ ಯಾವುದು, ನಿಜವಾದ ಅರಣ್ಯ ಯಾವುದು, ಜನವಸತಿ ಎಲ್ಲಿದೆ ಎಂಬುದನ್ನು ಸ್ಥಳಕ್ಕೆ ತೆರಳಿ ಪರಿಶೀಲಿಸಬೇಕು. ಭೌತಿಕ ಸಮೀಕ್ಷೆ ಇಲ್ಲದೆ ಜನರ ಬದುಕಿನ ಮೇಲೆ ನಿರ್ಧಾರ ಕೈಗೊಳ್ಳಬಾರದು ಎಂದು ತಿಳಿಸಿದರು.
ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಬರುವ 1476 ಗ್ರಾಮಗಳಲ್ಲಿ ಸರ್ವೆ ನಂಬರ್ ಮಟ್ಟದ ಇಎಸ್‌ಎ ನಕ್ಷೆ ಸಿದ್ಧಪಡಿಸಬೇಕು. ಅದನ್ನು ಕನ್ನಡದಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು. ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಹಭಾಗಿತ್ವದಲ್ಲಿ ಭೌತಿಕ ಸಮೀಕ್ಷೆ ನಡೆಸಬೇಕು. ಪ್ರತಿ ಬಾಧಿತ ಗ್ರಾಮದಲ್ಲಿ ವಿಶೇಷ ಗ್ರಾಮಸಭೆ ನಡೆಸಿ ಜನರ ಅಭಿಪ್ರಾಯ ದಾಖಲಿಸಬೇಕು. ಈ ಮಾಹಿತಿಯನ್ನು ರಾಜ್ಯದ ಆಕ್ಷೇಪಣೆಯ ಭಾಗವನ್ನಾಗಿ ಮಾಡಬೇಕು ಎಂದು ವಿಜಯೇಂದ್ರ ಸಲಹೆ ನೀಡಿದರು.
ಬರುವ ಅ.25ರ ಗಡುವಿನೊಳಗೆ ಇಷ್ಟೊಂದು ದೊಡ್ಡ ಪ್ರಮಾಣದ ಸಮೀಕ್ಷೆ ಮತ್ತು ದಾಖಲೆ ಸಿದ್ಧಪಡಿಸುವುದು ಸಾಧ್ಯವಿಲ್ಲ. ಹೀಗಾಗಿ ಎನ್‌ಜಿಟಿ ಮುಂದೆ ಸಮರ್ಥ ಕಾನೂನು ತಂಡ ನಿಯೋಜಿಸಿ ಕನಿಷ್ಠ ಒಂದು ವರ್ಷದ ಕಾಲಾವಕಾಶ ಪಡೆಯಬೇಕು ಎಂದು ರಾಜ್ಯ ಸರ್ಕಾರಕ್ಕೆ ವಿಜಯೇಂದ್ರ ಸಲಹೆ ನೀಡಿದರು.
ಕಾಲಾವಕಾಶ ಪಡೆದು ಭೌತಿಕ ಸಮೀಕ್ಷೆ ಮಾಡಿ. ಪರ್ಯಾಯ ನಕ್ಷೆ ಸಿದ್ಧಪಡಿಸಿ. ಗ್ರಾಮಸಭೆಗಳ ನಿರ್ಣಯ ಪಡೆಯಿರಿ. ಜನರ ಜೀವನೋಪಾಯ ರಕ್ಷಣೆಗೆ ಸ್ಪಷ್ಟ ಕ್ರಮ ರೂಪಿಸಿ. ನಂತರ ಎನ್‌ಜಿಟಿ ಮುಂದೆ ಸಮಗ್ರ ವರದಿ ಸಲ್ಲಿಸಬೇಕು. ಕಾಡಂಚಿನ ಜನರ ಆತಂಕ ನಿವಾರಿಸಲು ಬಗರ್‌ಹುಕುಂ ಹಾಗೂ ಸೆಕ್ಷನ್ 94ಎ ಅಡಿ ಬಾಕಿ ಇರುವ ಅರ್ಜಿಗಳನ್ನು ಪರಿಶೀಲಿಸಿ ಕಾಲಮಿತಿಯಲ್ಲಿ ವಿಲೇವಾರಿ ಮಾಡಬೇಕು. ಅರಣ್ಯ ಮತ್ತು ಕಂದಾಯ ಗಡಿ ವಿವಾದಗಳಿಗೆ ಪ್ರತ್ಯೇಕ ಟಾಸ್ಕ್‌ಫೋರ್ಸ್ ರಚಿಸಬೇಕು ಎಂದು ಆಗ್ರಹಿಸಿದರು.
ಕಾಡಂಚಿನ ಜನರಿಗೆ ಅರಣ್ಯ ಅಧಿಕಾರಿಗಳಿಂದ ಅನಗತ್ಯ ತೊಂದರೆ ಆಗುತ್ತಿದೆ ಎಂಬ ಆರೋಪಗಳನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಜನ ಕಾಡುಪ್ರಾಣಿಗಳ ಜೊತೆ ಸಂಘರ್ಷ ಎದುರಿಸುತ್ತಿದ್ದಾರೆ. ಮತ್ತೊಂದೆಡೆ ಅರಣ್ಯ ಅಧಿಕಾರಿಗಳ ಜೊತೆ ಸಂಘರ್ಷದ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಅಂತ್ಯಸಂಸ್ಕಾರಕ್ಕೆ ಕಟ್ಟಿಗೆ ತರುವುದರಿಂದ ಹಿಡಿದು ಶೌಚಾಲಯ ನಿರ್ಮಾಣದವರೆಗೆ ಜನರು ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ದೂರುಗಳಿವೆ. ಮುಖ್ಯಮಂತ್ರಿಗಳು ಅಧಿಕಾರಿಗಳ ‘ನಟ್ಟು-ಬೋಲ್ಟ್ ಟೈಟ್ ಮಾಡುತ್ತೇನೆ’ ಎಂದಿದ್ದಾರೆ. ಈಗ ಅದನ್ನು ಕಾರ್ಯರೂಪಕ್ಕೆ ತರಬೇಕು ಎಂದು ವಿಜಯೇಂದ್ರ ಹೇಳಿದರು.