ಬಿಜೆಪಿಯಲ್ಲಿನ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ: ಸದಾನಂದಗೌಡ

Published : Jun 26, 2025, 11:09 AM IST
Sadananda gowda

ಸಾರಾಂಶ

 ಯಾರನ್ನಾದರೂ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ತೊಂದರೆ ಇಲ್ಲ. ಆದರೆ ಕುತೂಹಲ ಹೆಚ್ಚಿಸುವ ಮೂಲಕ ಸಂಘಟನಾ ವೇಗಕ್ಕೆ ತಡೆ ಮಾಡುವುದು ಬೇಡ’ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಡಿ.ವಿ.ಸದಾನಂದಗೌಡ ಅವರು ಪಕ್ಷದ ವರಿಷ್ಠರಿಗೆ ಬಹಿರಂಗವಾಗಿಯೇ ಮನವಿ ಮಾಡಿದ್ದಾರೆ

 ಬೆಂಗಳೂರು :  ‘ಯಾರನ್ನಾದರೂ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ತೊಂದರೆ ಇಲ್ಲ. ಆದರೆ ಕುತೂಹಲ ಹೆಚ್ಚಿಸುವ ಮೂಲಕ ಸಂಘಟನಾ ವೇಗಕ್ಕೆ ತಡೆ ಮಾಡುವುದು ಬೇಡ’ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಡಿ.ವಿ.ಸದಾನಂದಗೌಡ ಅವರು ಪಕ್ಷದ ವರಿಷ್ಠರಿಗೆ ಬಹಿರಂಗವಾಗಿಯೇ ಮನವಿ ಮಾಡಿದ್ದಾರೆ.

‘ಹೇಳಿಕೆಗಳಲ್ಲಿ ಮಾತ್ರ ಎಲ್ಲವೂ ಸರಿಯಿದೆ. ಆದರೆ, ನಮ್ಮಲ್ಲಿ ಎಲ್ಲವೂ ಸರಿಯಿಲ್ಲ. ಆಂತರಿಕ ವ್ಯತ್ಯಾಸ ಒಳಗೊಳಗೇ ಕುದಿಯುತ್ತಿದೆ. ಬೂದಿ ಮುಚ್ಚಿದ ಕೆಂಡದಂತಿದೆ’ ಎಂದೂ ಅವರು ತೀಕ್ಷ್ಣವಾಗಿ ಹೇಳಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಾರನ್ನೇ ಮಾಡಿದರೂ ಪಕ್ಷದ ಕಾರ್ಯಕರ್ತರು ಕೆಲಸ ಮಾಡಲು ಸಿದ್ಧರಾಗಿದ್ದಾರೆ. ರಾಜ್ಯಾಧ್ಯಕ್ಷರ ನೇಮಕದ ಬಗ್ಗೆ ಒಬ್ಬೊಬ್ಬರು ಹೇಳಿಕೆ ನೀಡುತ್ತಿರುವುದರಿಂದ ಗೊಂದಲವಾಗುತ್ತಿದೆ. ಇದನ್ನು ನಿಯಂತ್ರಿಸಬೇಕಿದೆ ಎಂದರು.

ನಮ್ಮಲ್ಲಿ ಕೋರ್ ಕಮಿಟಿ ಇದ್ದರೂ ಕೇವಲ ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯದಂತೆ ಆಗಿದೆಯೇ ಹೊರತು ನಿಜವಾದ ಅರ್ಥದಲ್ಲಿ ವಿಷಯಾಧಾರಿತ ಚರ್ಚೆ ನಡೆಯುತ್ತಿಲ್ಲ. ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆ ಸಂಬಂಧ ಕೋರ್ ಕಮಿಟಿ ಸದಸ್ಯರು, ಪಕ್ಷ ಕಟ್ಟಿ ಬೆಳೆಸಿದವರ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು. ಆದರೆ, ಆ ಕೆಲಸ ಆಗುತ್ತಿಲ್ಲ ಎಂದು ಬೇಸರದಿಂದ ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗೌಡರು, ಶುದ್ಧೀಕರಣ ಆರಂಭ ಆಗಿದೆ. ಆದರೆ, ಶುದ್ಧೀಕರಣ ಕೇವಲ ಪ್ರೋಕ್ಷಣೆಯಿಂದ ಆಗಲ್ಲ. ರಾಜಕೀಯದಲ್ಲಿ ಸ್ನಾನ ಮಾಡಿದರೆ ಮಾತ್ರ ಶುದ್ಧೀಕರಣ. ಮತ್ತು ಆ ಸ್ನಾನ ಕೂಡ ಒಳ್ಳೆಯ ರೀತಿಯಿಂದ ಮಾಡಬೇಕು. ಕೇವಲ ಪ್ರೋಕ್ಷಣೆಯಿಂದ ರಾಜಕೀಯದಲ್ಲಿ ಶುದ್ಧೀಕರಣ ಆಗೋದಿಲ್ಲ. ಎಲ್ಲದಕ್ಕೂ ಸ್ವಲ್ಪ ‌ಸಮಯ ಬೇಕಾಗುತ್ತದೆ. ಈಗ ಕೆಲವರನ್ನು ಹೊರಗೆ ಹಾಕುವ ಮೂಲಕ ಶುದ್ಧೀಕರಣ ಆರಂಭವಾಗಿದೆ ಎಂದು ತಿಳಿಸಿದರು.

ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಪ್ರತಿಪಕ್ಷದ ನಾಯಕ ಅಶೋಕ್ ನಡುವೆ ಹೊಂದಾಣಿಕೆ ಕೊರತೆಯಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಬ್ಬರೂ ಬಾಹ್ಯವಾಗಿ ಚೆನ್ನಾಗಿಯೇ ಇದ್ದಾರೆ. ಆಂತರಿಕವಾಗಿ ಹೇಗಿದ್ದಾರೆ ಎನ್ನುವುದು ಗೊತ್ತಿಲ್ಲ. ಅಲ್ಲಿಂದ ಇಲ್ಲಿಂದ ಒಂದೊಂದು ಸುದ್ದಿ ಬರುತ್ತಿದೆ ಎಂದು ಮಾರ್ಮಿಕವಾಗಿ ಹೇಳಿದರು.

ಒಂದು ಪ್ರತಿಭಟನೆ ಮಾಡಿದ ಕೂಡಲೇ ಅದು ತಾರ್ಕಿಕ ಅಂತ್ಯವಲ್ಲ. ಹೋರಾಟಕ್ಕೆ ಯಾರನ್ನೋ ಒಂದಿಷ್ಟು ಜನರನ್ನು ಕರೆದುಕೊಂಡು ಬಂದರೆ ಆಗುವುದಿಲ್ಲ. ಹೋರಾಟ ಜನರ ಮನಸ್ಸಿಗೆ ನಾಟುವಂತೆ ಮಾಡಬೇಕು ಎಂದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಕ್ರಿಯವಾಗಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸದಾನಂದಗೌಡರು, ಯಡಿಯೂರಪ್ಪ ಮೊದಲಿನಿಂದಲೂ ಹಾಗೆಯೇ. ಒಮ್ಮೊಮ್ಮೆ ಸುಮ್ಮನೆ ಇರುತ್ತಾರೆ. ಮತ್ತೊಮ್ಮೆ ಏಕಾಏಕಿ ರಂಗ ಪ್ರವೇಶ ಮಾಡುತ್ತಾರೆ. ಅದನ್ನು ವಿವರಿಸಿ ಹೇಳುವುದಕ್ಕೆ ಆಗುವುದಿಲ್ಲ ಎಂದು ವ್ಯಂಗ್ಯವಾಗಿ ಹೇಳಿದರು.

PREV
Read more Articles on

Recommended Stories

ಆರೆಸ್ಸೆಸ್‌ ಭಾರತದ ತಾಲಿಬಾನ್‌: ಹರಿಪ್ರಸಾದ್ ವಿವಾದ
ಮತ್ತೆ ರಾಗಾ ವರ್ಸಸ್‌ ಆಯೋಗ : ದೂರದ ಬಿಹಾರದಲ್ಲೂ ರಾಜ್ಯದ ಮಹದೇವಪುರ ಪ್ರತಿಧ್ವನಿ