ಪ್ರಧಾನಿ ಮೋದಿಯಷ್ಟು ಸುಳ್ಳುಗಾರ ಮತ್ತೊಬ್ಬರಿಲ್ಲ: ಸಿಎಂ ಸಿದ್ದರಾಮಯ್ಯ

KannadaprabhaNewsNetwork | Updated : Feb 19 2024, 04:54 PM IST

ಸಾರಾಂಶ

‘ಅಚ್ಛೇದಿನ್ ಆಯೇಗಾ’ ಎಂದು ಹೇಳಿ ಹತ್ತು ವರ್ಷವಾಯಿತು. ಜನರ ಪಾಲಿಗೆ ಆ ದಿನಗಳು ಬರಲೇ ಇಲ್ಲ. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂದರು ಜನರ ‘ವಿಕಾಸ’ವಾಗಲೇ ಇಲ್ಲ. ಕಪ್ಪುಹಣವನ್ನು ತರಲಿಲ್ಲ. ಉದ್ಯೋಗ ಸೃಷ್ಟಿಯನ್ನೂ ಮಾಡಲಿಲ್ಲ. ಹತ್ತು ವರ್ಷಗಳಿಂದ ಸುಳ್ಳು ಹೇಳುತ್ತಲೇ ಕಾಲ ಕಳೆಯುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಸ್ವಾತಂತ್ರ್ಯಾ ನಂತರ ನರೇಂದ್ರ ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿಯನ್ನು ಕಾಣಲು ಸಾಧ್ಯವಿಲ್ಲ. ಅವರಷ್ಟು ಸುಳ್ಳುಗಾರ ಮತ್ತೊಬ್ಬರಿಲ್ಲ. ಬಿಜೆಪಿ ಪಕ್ಷದ ಮತ್ತೊಂದು ಅನ್ವರ್ಥನಾಮವೇ ಸುಳ್ಳಿನ ಪಾರ್ಟಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ಪಟ್ಟಣದ ಶಾಂತಿ ಕಾಲೇಜು ಮುಂಭಾಗದ ಮೈದಾನದಲ್ಲಿ ಭಾನುವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

‘ಅಚ್ಛೇದಿನ್ ಆಯೇಗಾ’ ಎಂದು ಹೇಳಿ ಹತ್ತು ವರ್ಷವಾಯಿತು. ಜನರ ಪಾಲಿಗೆ ಆ ದಿನಗಳು ಬರಲೇ ಇಲ್ಲ. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂದರು ಜನರ ‘ವಿಕಾಸ’ವಾಗಲೇ ಇಲ್ಲ. ಕಪ್ಪುಹಣವನ್ನು ತರಲಿಲ್ಲ. ಉದ್ಯೋಗ ಸೃಷ್ಟಿಯನ್ನೂ ಮಾಡಲಿಲ್ಲ. ಹತ್ತು ವರ್ಷಗಳಿಂದ ಸುಳ್ಳು ಹೇಳುತ್ತಲೇ ಕಾಲ ಕಳೆಯುತ್ತಿದ್ದಾರೆ ಎಂದು ಛೇಡಿಸಿದರು.

ನಾವು ಎಲ್ಲ ವರ್ಗ, ಸಮಾಜಕ್ಕೂ ಸಮವಾಗಿ ಅನುದಾನ ಕೊಟ್ಟಿದ್ದೇವೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಹಣದಲ್ಲಿ ಅನ್ಯಾಯವಾಗಿದೆ ಎಂದು ನಾವು ಹೇಳುತ್ತಿದ್ದೇವೆ. ಕರ್ನಾಟಕದವರಿಗೆ ಸರಿಯಾಗಿ ತೆರಿಗೆ ಪಾಲನ್ನು ಕೊಡುತ್ತಿಲ್ಲ ಎಂದು

ಕೇಳೋದು ತಪ್ಪಾ. ಇದು ಕನ್ನಡಿಗರಿಗೆ ಮಾಡಿದ ದ್ರೋಹವಲ್ಲವೇ. ಈ ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ತಪ್ಪಾ ಎಂದು ಪ್ರಶ್ನಿಸಿದರು.

ಕೇಂದ್ರ ಹೇಳುವ ಸುಳ್ಳನ್ನೇ ರಾಜ್ಯ ಬಿಜೆಪಿಯವರೂ ಹೇಳುತ್ತಿದ್ದಾರೆ. ಇವರ ಜೊತೆಗೆ ಜೆಡಿಎಸ್‌ನ ಎಚ್.ಡಿ .ಕುಮಾರಸ್ವಾಮಿ ಸಹ ಸೇರಿಕೊಂಡಿದ್ದಾರೆ.

ರಾಜ್ಯಕ್ಕೆ ಆಗುತ್ತಿರುವ ತೆರಿಗೆ ಅನ್ಯಾಯ ಸರಿಪಡಿಸಬೇಕು ಎಂದರೆ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಪಕ್ಷಗಳನ್ನು ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಆಶೀರ್ವದಿಸುವಂತೆ ಕೋರಿದರು. ನಮ್ಮ ಗ್ಯಾರಂಟಿಗಳನ್ನ ಜರಿಗೆ ತಂದರೆ ರಾಜ್ಯ ದಿವಾಳಿ ಆಗುತ್ತೆ ಎಂದು ಟೀಕಿಸಿದರು.

ಮೊನ್ನೆಯಷ್ಟೇ ಬಜೆಟ್ ಮಂಡಿಸಿದ್ದೇನೆ. ಆ ಬಜೆಟ್‌ನಲ್ಲಿ 52 ಸಾವಿರ ಕೋಟಿ ರು. ಅನುದಾನ ಮೀಸಲಿಟ್ಟಿದ್ದೀನಿ. ಅಶೋಕ್, ಬಸವರಾಜ ಬೊಮ್ಮಾಯಿ ಅವರೇ ಬಜೆಟ್ ಪುಸ್ತಕ ಓದಿಕೊಳ್ರಪ್ಪ. ಸುಖಾ ಸುಮ್ಮನೇ ಬಜೆಟ್‌ನ್ನು ಟೀಕೆ ಮಾಡಬೇಡಿ. 

ಚುನಾವಣೆ ಪೂರ್ವ ಘೋಷಿಸಿದ ಐದು ಗ್ಯಾರಂಟಿಗಳನ್ನು ಯಥಾವತ್ತಾಗಿ ಜರಿ ಮಾಡಿದ ಸರ್ಕಾರ ಯಾವುದಾದರೂ ಇದ್ದರೆ ಅದು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎಂದು ದಿಟ್ಟವಾಗಿ ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ವಹಿಸಿದ್ದರು. ಸಚಿವರಾದ ಎನ್.ಚಲುವರಾಯಸ್ವಾಮಿ, ಸತೀಶ್ ಜಾರಕಿಹೊಳಿ, ಬಿ.ಎಸ್.ಸುರೇಶ್, ಶಾಸಕರಾದ ಪಿ.ರವಿಕುಮಾರ್, ಕೆ.ಎಂ.ಉದಯ್, ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ.

ಉದ್ಯಮಿ ಸ್ಟಾರ್ ಚಂದ್ರು, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಓ ಶೇಖ್ ತನ್ವೀರ್ ಆಸಿಫ್ , ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಕೆ.ಎನ್.ಲೋಕೇಶ್ ಸೇರಿದಂತೆ ಇತರರಿದ್ದರು.

Share this article