ರಾಜ್ಯಾಧ್ಯಕ್ಷನಾಗಲು ಆತುರ ಇಲ್ಲ - ನಿಖಿಲ್‌ ಏನು ಅಂತ ತೋರಿಸುವ ಛಲ ಇದೆ

Published : Jul 11, 2024, 06:52 AM IST
Nikhil Kumaraswamy

ಸಾರಾಂಶ

ನಿಖಿಲ್‌ ಮುಂದಿನ ರಾಜ್ಯಾಧ್ಯಕ್ಷರಾಗುವ ಹೊಸ್ತಿಲಲ್ಲಿ ಬಂದು ನಿಂತಿದ್ದಾರೆ. ಈ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ‘ಕನ್ನಡಪ್ರಭ’ಕ್ಕೆ ‘ಮುಖಾಮುಖಿ’ಯಾದಾಗ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದು ಹೀಗೆ...

ವಿಜಯ್‌ ಮಲಗಿಹಾಳ

 ಬೆಂಗಳೂರು :  ಜೆಡಿಎಸ್‌ನ ಹಾಲಿ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಲೋಕಸಭಾ ಚುನಾವಣೆ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಹಬ್ಬುವ ಕೆಲವು ತಿಂಗಳುಗಳ ಮೊದಲೇ ಅವರ ಪುತ್ರ ಹಾಗೂ ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರಮುಖ ಸಭೆ- ಸಮಾರಂಭಗಳಲ್ಲಿ ಸಕ್ರಿಯವಾಗಿ ಕಾಣತೊಡಗಿದ್ದರು. ಪರೋಕ್ಷವಾಗಿ ಮುಂದಿನ ನಾಯಕತ್ವ ಪಟ್ಟಕ್ಕೆ ಬೇಕಾದ ಗುಣಗಳನ್ನು ಮೈಗೂಡಿಸಿಕೊಂಡು ತಯಾರಿ ನಡೆಸಿದ್ದರು. ಇದೀಗ ಲೋಕಸಭಾ ಚುನಾವಣೆ ಮುಗಿದು, ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾದ ಬಳಿಕ ನಿಖಿಲ್‌ ಮುಂದಿನ ರಾಜ್ಯಾಧ್ಯಕ್ಷರಾಗುವ ಹೊಸ್ತಿಲಲ್ಲಿ ಬಂದು ನಿಂತಿದ್ದಾರೆ. ಈ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ‘ಕನ್ನಡಪ್ರಭ’ಕ್ಕೆ ‘ಮುಖಾಮುಖಿ’ಯಾದಾಗ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದು ಹೀಗೆ...

*ತಾವು ಶೀಘ್ರ ಜೆಡಿಎಸ್‌ನಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಳ್ಳುತ್ತೀರಂತೆ?

-ಎಚ್‌.ಡಿ.ಕುಮಾರಸ್ವಾಮಿ ಅವರು ಸಚಿವರಾಗಿ ಕೇಂದ್ರಕ್ಕೆ ಹೋದ ಬಳಿಕ ರಾಜ್ಯದಲ್ಲಿ ಪಕ್ಷ ರಾಜ್ಯಾಧ್ಯಕ್ಷರು ಯಾರು ಎಂಬ ಚರ್ಚೆ ಪ್ರಾರಂಭವಾಗಿದೆ. ನಾನು ಕಳೆದ ಒಂದೂವರೆ ವರ್ಷದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಪಕ್ಷದಲ್ಲಿ ನಮ್ಮ ಕುಟುಂಬದಿಂದ ದೊಡ್ಡ ಬದಲಾವಣೆ ಪರ್ವ ಶುರುವಾಗಿರುವ ಬಗ್ಗೆ ಕಾರ್ಯಕರ್ತರಿಗೆ ಸಂದೇಶ ನೀಡಬೇಕು. ಪಕ್ಷದಲ್ಲಿ ಸಾಕಷ್ಟು ಹಿರಿಯ ನಾಯಕರು, ಮುಖಂಡರು ಇದ್ದಾರೆ. ಯಾವುದೇ ಹುದ್ದೆಯನ್ನು ಕಾರ್ಯಕರ್ತರ ಪ್ರೀತಿ-ವಿಶ್ವಾಸದಿಂದ ಗಳಿಸಬೇಕು.

*ಅಂದರೆ, ನಿಮಗೆ ಪಕ್ಷದ ರಾಜ್ಯಾಧ್ಯಕ್ಷರಾಗುವ ಆಸೆ ಇಲ್ಲವೇ ಅಥವಾ ಹಿಂಜರಿಕೆ ಇದೆಯೇ?

-ಆಸೆ ಅಥವಾ ಹಿಂಜರಿಕೆ ಅಂತ ಅಲ್ಲ. ನನಗೆ ರಾಜ್ಯಾಧ್ಯಕ್ಷನಾಗುವ ಆತುರ ಇಲ್ಲ. ಪಕ್ಷದಲ್ಲಿ ಸಾಕಷ್ಟು ಮಂದಿ ಅರ್ಹರು ಇದ್ದಾರೆ. ಎಚ್‌.ಡಿ.ದೇವೇಗೌಡರು ಹೇಳುವಂತೆ ರಾಜ್ಯಾದ್ಯಂತ ಸದಸ್ಯತ್ವ ನೋಂದಣಿ ಅಭಿಯಾನ ಮಾಡಬೇಕು. ಪಕ್ಷಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳು, ತಾಲೂಕು, ಹೋಬಳಿ, ಪಂಚಾಯಿತಿ, ಹಳ್ಳಿಗಳ ಮಟ್ಟದಲ್ಲಿ ಕಾರ್ಯಕರ್ತರು ಇದ್ದಾರೆ. ಇಷ್ಟು ದಿನ ಪಕ್ಷವನ್ನು ಕೇಡರ್‌ ಬೇಸ್‌ ಸಂಘಟನೆ ಮಾಡುವಲ್ಲಿ ವಿಫಲರಾಗಿದ್ದೆವು. ಇನ್ನು ಮುಂದೆ ಕೇಡರ್‌ ಬೇಸ್‌ನಲ್ಲಿ ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸಲು ನಿರ್ಧರಿಸಿದ್ದೇವೆ. ಪ್ರತಿ ಬೂತ್‌ ಮಟ್ಟದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ಮಾಡುತ್ತೇವೆ.

*ತಾತ ದೇವೇಗೌಡ ಮತ್ತು ತಂದೆ ಕುಮಾರಸ್ವಾಮಿ ಅವರ ಪ್ರಭಾವಳಿಯಿಂದ ಹೊರಬಂದು ನಿಮ್ಮದೇ ಆದ ನಾಯಕತ್ವ ಪ್ರದರ್ಶಿಸುವುದು ತುಸು ಕಷ್ಟ ಎನಿಸುತ್ತಿದೆಯೇ?

-ದೇವೇಗೌಡರ ಮೊಮ್ಮಗ, ಕುಮಾರಸ್ವಾಮಿ ಮಗ ಎಂಬುದರ ಹೊರತಾಗಿ ಪಕ್ಷ ಸಂಘಟಿಸುವ ಮುಖಾಂತರ ಈ ನಿಖಿಲ್‌ ಏನು, ಆತನ ವಿಷನ್‌ ಏನು ಎಂದು ತೋರಿಸುವ ಛಲವಿದೆ. ಕೇಡರ್‌ ಬೇಸ್‌ನಲ್ಲಿ ಪಕ್ಷದ ಸಂಘಟನೆ ಮಾಡಿ ಚುನಾವಣೆ ಮುಖಾಂತರ ಪಕ್ಷದ ರಾಜ್ಯಾಧ್ಯಕ್ಷ ಆಯ್ಕೆ ಆಗೇಬೇಕು ಎಂಬುದು ನನ್ನ ಭಾವನೆ. ಮುಂಬರುವ ಚುನಾವಣೆಗಳಲ್ಲಿ ಹೆಚ್ಚು ಸ್ಥಾನ ಗಳಿಸುವ ನಿಟ್ಟಿನಲ್ಲಿ ಪಕ್ಷವನ್ನು ಸಂಘಟಿಸಬೇಕು. ಮುಂದಿನ ನಾಲ್ಕು ವರ್ಷ ಪಕ್ಷ ಸಂಘಟನೆಗೆ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ