;Resize=(412,232))
ಮಂಡ್ಯ : ಯಾರೋ ಹೇಳಿದ ಮಾತಿಗೆ ಬೆಲೆ ಬರುವುದಿಲ್ಲ. ವೈಯಕ್ತಿಕವಾಗಿ ಮಾತನಾಡಿದ್ದನ್ನೆಲ್ಲಾ ಗಂಭೀರವಾಗಿ ಪರಿಗಣಿಸಲಾಗುವುದಿಲ್ಲ. ಪಕ್ಷದ ಹೈಕಮಾಂಡ್ ಹೇಳಿದರಷ್ಟೇ ಅದಕ್ಕೆ ಬೆಲೆ ಇರುತ್ತದೆ. ಅದಕ್ಕೆ ನಾವೂ ಬದ್ಧರಾಗಿರುತ್ತೇವೆ ಎಂದು ಮದ್ದೂರು ಶಾಸಕ ಕದಲೂರು ಉದಯ್ ನೇರವಾಗಿ ಹೇಳಿದರು.
ಕಾಂಗ್ರೆಸ್ ಮುಂದಿನ ನಾಯಕತ್ವ ಸತೀಶ್ ಜಾರಕಿಹೊಳಿ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಬೇಡವೆಂದು ಯಾರಾದರೂ ಹೇಳಿದ್ದಾರಾ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದು, ಅವರ ನಾಯಕತ್ವ ಬೇಡ ಎಂಬ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯನವರು ನಮಗಿಂತ ಗಟ್ಟಿಯಾಗಿದ್ದಾರೆ. ಶಕ್ತಿಯುತವಾಗಿದ್ದಾರೆ. ಅವರ ಅವಶ್ಯಕತೆ ಈ ರಾಜ್ಯಕ್ಕಿದೆ. ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯನವರು ವೈಯಕ್ತಿಕವಾಗಿ ಹೇಳಿಕೆ ಕೊಟ್ಟಿದ್ದಾರೆ ಅಷ್ಟೇ. ಅದು ಪಾರ್ಟಿ ನಿರ್ಧಾರ ಅಲ್ಲ ಎಂದು ಸ್ಪಷ್ಟಪಡಿಸಿದರು.
ಸಿಎಂ ಬದಲಾವಣೆ ವಿಚಾರ ಸಿಎಲ್‌ಪಿಯಲ್ಲಿ ತೀರ್ಮಾನವಾಗಲಿ ಎಂಬ ರಾಜೇಂದ್ರ, ರಾಜಣ್ಣ ಹೇಳಿಕೆ ಕುರಿತು, ಅದೆಲ್ಲ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಕೆಲವರು ಬಾಯಿ ತಪ್ಪಿ ಹೇಳುತ್ತಾರಷ್ಟೇ., ಪಾರ್ಟಿ, ಹೈಕಮಾಂಡ್ ನಿರ್ಧಾರವೇ ಅಂತಿಮ ನಿರ್ಧಾರ ಎಂದು ಹೇಳಿದರು.
ಬಿಜೆಪಿಯವರಿಗೆ ಕೆಲಸ ಇಲ್ಲ ಅದಕ್ಕೆ ಕ್ರಾಂತಿ ಎಂದು ಮಾತನಾಡುತ್ತಾರೆ. ಬಿಜೆಪಿಯವರಿಗೆ ಕೆಲಸ ಇಲ್ಲ. ಎಲ್ಲಾ ಅನೆಂಪ್ಲಾಯ್ಸ್‌ಗಳು. ಏನಾದ್ರೂ ಮಾತನಾಡುತ್ತಿರುತ್ತಾರೆ. ಕೆಲವರು ಟೀವಿಯಲ್ಲಿ ಬರಬೇಕು, ಪಾರ್ಟಿ ಇದೆ ಅಂತ ತೋರಿಸಿಕೊಳ್ಳೋದಕ್ಕಾಗಿ ಮಾತನಾಡುತ್ತಾರೆ. ಅದನ್ನು ಗಣನೆಗೆ ತೆಗೆದುಕೊಳ್ಳಬಾರದು ಎಂದರು.
ಡಿಕೆಶಿ ಅವರು ರಾಜ್ಯದ ಮುಖ್ಯಮಂತ್ರಿ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ನವೆಂಬರ್‌ನದು ಹೈಕಮಾಂಡ್ ನಿರ್ಧಾರ. ಸದ್ಯಕ್ಕೆ ಅಂತಹ ಪರಿಸ್ಥಿತಿ ಇಲ್ಲ ಎಂದ ಉದಯ್ ಅವರು, ಯತೀಂದ್ರ ಹೇಳಿಕೆ ವಿಚಾರವಾಗಿ ನೋಟಿಸ್ ಕೊಡಲಿ ಎಂಬ ಶಾಸಕ ಇಕ್ಬಾಲ್ ಹೇಳಿಕೆ ವಿಚಾರವಾಗಿ ಹೇಳಿಕೆ ಆಧರಿಸಿ ನೋಟೀಸ್ ಕೊಡುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಬೇಕಾದಷ್ಟು ಜನ ಬರುತ್ತಾರೆ, ಹೋಗುತ್ತಾರೆ. ಕೆಲವರು ಅಭಿಮಾನ ವ್ಯಕ್ತಪಡಿಸುತ್ತಾರೆ ಅಷ್ಟೇ. ಅದು ತಪ್ಪಲ್ಲ. ನಮ್ಮ ಅಭಿಮಾನ ಪಕ್ಷದ ಮೇಲಿದೆ. ಕಾಂಗ್ರೆಸ್ ಪಕ್ಷದಲ್ಲಿ ಇದ್ದೇವೆ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕೆಲಸ ಮಾಡುತ್ತಿದ್ದೇವೆ. ನನ್ನದು ಪಕ್ಷದ ಮೇಲಿನ ಅಭಿಮಾನ ಎಂದು ನುಡಿದರು.
ನಾಗಮಂಗಲ: ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ನೀಡಿರುವ ಹೇಳಿಕೆಗೆ ನನ್ನಿಂದ ಉತ್ತರ ಹೇಳಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರು ಎಲ್ಲಿಯೂ ಸಹ ಇದು ನನ್ನ ಕೊನೆಗಾಲ ಎಂದು ಹೇಳಿಲ್ಲ. ಕಾಂಗ್ರೆಸ್ ಪಕ್ಷವೂ ಕೂಡ ಕೊನೆಗಾಲದ ತೀರ್ಮಾನ ಮಾಡುತ್ತೇವೆಂದು ಹೇಳಿಲ್ಲ ಎಂದರು.
ರಾಜ್ಯದಲ್ಲಿ 5 ವರ್ಷ ಸುಭದ್ರವಾಗಿ ಆಡಳಿತ ನಡೆಸುವ ಕಾಂಗ್ರೆಸ್ ಸರ್ಕಾರವಿದೆ. ಸಚಿವ ಸಂಪುಟ, ಸಿಎಂ ಅಥವಾ ಸಚಿವರ ಖಾತೆ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಾಗೂ ಪಕ್ಷದ ಹೈಕಮಾಂಡ್ ಒಟ್ಟಿಗೆ ಕುಳಿತು ಚರ್ಚಿಸಿ ತೀರ್ಮಾನಿಸುವುದು. ಕಾಂಗ್ರೆಸ್ ಪಕ್ಷದ ಸಿದ್ಧಾಂತ. ಹಾಗಾಗಿ ಯತೀಂದ್ರ ಅವರು ಯಾವ ಉದ್ದೇಶದಿಂದ ಈ ರೀತಿ ಹೇಳಿಕೆ ಕೊಟ್ಟಿದ್ದಾರೋ ನನಗೆ ಗೊತ್ತಿಲ್ಲ ಎಂದರು.