ಮದ್ದೂರಿನಿಂದ ಮೂವರು ವಿಧಾನ ಪರಿಷತ್ ಸದಸ್ಯರು..!

KannadaprabhaNewsNetwork | Updated : Jun 07 2024, 06:07 AM IST

ಸಾರಾಂಶ

ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಕೆ.ವಿವೇಕಾನಂದ ಗೆಲುವು ಸಾಧಿಸುವುದರೊಂದಿಗೆ ಮದ್ದೂರು ತಾಲೂಕಿನಿಂದ ವಿಧಾನ ಪರಿಷತ್ತಿಗೆ ಮೂವರು ಸದಸ್ಯರು ಆಯ್ಕೆಯಾದಂತಾಗಿದೆ. ದಿನೇಶ್‌ ಗೂಳಿಗೌಡ, ಮಧು ಜಿ.ಮಾದೇಗೌಡ, ಕೆ.ವಿವೇಕಾನಂದ ಎಲ್ಲರೂ ಮದ್ದೂರಿನವರೇ ಆಗಿರುವುದು ವಿಶೇಷವಾಗಿದೆ.

ಮಂಡ್ಯ ಮಂಜುನಾಥ

 ಮಂಡ್ಯ :  ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಕೆ.ವಿವೇಕಾನಂದ ಗೆಲುವು ಸಾಧಿಸುವುದರೊಂದಿಗೆ ಮದ್ದೂರು ತಾಲೂಕಿನಿಂದ ವಿಧಾನ ಪರಿಷತ್ತಿಗೆ ಮೂವರು ಸದಸ್ಯರು ಆಯ್ಕೆಯಾದಂತಾಗಿದೆ. ದಿನೇಶ್‌ ಗೂಳಿಗೌಡ, ಮಧು ಜಿ.ಮಾದೇಗೌಡ, ಕೆ.ವಿವೇಕಾನಂದ ಎಲ್ಲರೂ ಮದ್ದೂರಿನವರೇ ಆಗಿರುವುದು ವಿಶೇಷವಾಗಿದೆ.

ಮದ್ದೂರು ತಾಲೂಕು ಮಾರಸಿಂಗನಹಳ್ಳಿಯ ದಿನೇಶ್ ಗೂಳಿಗೌಡ ಅವರು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದರೆ, ಮದ್ದೂರು ತಾಲೂಕು ಗುರುದೇವರಹಳ್ಳಿಯ ಮಧು ಜಿ.ಮಾದೇಗೌಡ ದಕ್ಷಿಣ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಪ್ರವೇಶಿಸಿದ್ದರು. ಇದೀಗ ನಡೆದ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮದ್ದೂರು ತಾಲೂಕು ಅವ್ವೇರಹಳ್ಳಿಯ ಕೆ.ವಿವೇಕಾನಂದ ಗೆಲುವು ಸಾಧಿಸುವ ಮೂಲಕ ವಿಧಾನ ಪರಿಷತ್‌ಗೆ ಪ್ರವೇಶ ಪಡೆದಿದ್ದಾರೆ.

ಪ್ರಸ್ತುತ ಮದ್ದೂರು ಕ್ಷೇತ್ರದ ಮೂವರು ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ದಿನೇಶ್ ಗೂಳಿಗೌಡ ಅವರು ಸ್ಥಳೀಯ ಸಂಸ್ಥೆ ಪ್ರತಿನಿಧಿಗಳ ಸಮಸ್ಯೆಗಳು ಹಾಗೂ ಸಾಮಾಜಿಕ ಸಮಸ್ಯೆಗಳ ವಿರುದ್ಧವಾಗಿ ಸಮರ್ಥವಾಗಿ ವಿಧಾನ ಪರಿಷತ್ತಿನಲ್ಲಿ ಧ್ವನಿ ಎತ್ತುತ್ತಿದ್ದರೆ, ಮಧು ಜಿ.ಮಾದೇಗೌಡ ಪದವೀಧರರ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ರೈತರು ಹಾಗೂ ಸಾರ್ವಜನಿಕ ಸಮಸ್ಯೆಗಳ ಕುರಿತಾಗಿಯೂ ಸದನದ ಗಮನಸೆಳೆಯುತ್ತಿದ್ದಾರೆ. ಶಿಕ್ಷಕರು, ಉಪನ್ಯಾಸಕರು, ಪ್ರಾಂಶುಪಾಲರ ಸಮಸ್ಯೆಗಳ ಪರಿಹಾರಕ್ಕೆ ಧ್ವನಿ ಎತ್ತಲು ಶಿಕ್ಷಕರು ಕೆ.ವಿವೇಕಾನಂದ ಅವರಿಗೆ ಈಗ ಅವಕಾಶ ಮಾಡಿಕೊಟ್ಟಿದ್ದಾರೆ. ಅದನ್ನು ಯಾವ ರೀತಿ ನಿಭಾಯಿಸುತ್ತಾರೆ ಎನ್ನುವುದು ಈಗ ಕುತೂಹಲ ಕೆರಳಿಸುವಂತೆ ಮಾಡಿದೆ.

ಈ ಹಿಂದೆ ದಕ್ಷಿಣ ಪದವೀಧರ ಕ್ಷೇತ್ರದಿಂದ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದ ಕೆ.ಟಿ.ಶ್ರೀಕಂಠೇಗೌಡರು ಎರಡು ಬಾರಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದರು. ತಮ್ಮ ವಾಕ್ಚಾತುರ್ಯದಿಂದಲೇ ಉತ್ತಮ ಶಾಸಕ ಎಂಬ ಬಿರುದನ್ನೂ ಪಡೆದುಕೊಂಡಿದ್ದರು. ಕೆಲವು ವರ್ಷಗಳ ಹಿಂದೆ ಮದ್ದೂರು ತಾಲೂಕು ಕೊಪ್ಪ ಗ್ರಾಮದ ಬಿ.ರಾಮಕೃಷ್ಣ, ಅದಕ್ಕೂ ಹಿಂದೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಸಹೋದರ ಎಸ್.ಎಂ.ಶಂಕರ್ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದನ್ನು ಸ್ಮರಿಸಬಹುದು. ಮದ್ದೂರು ಕ್ಷೇತ್ರಕ್ಕೆ ಸಿಕ್ಕಷ್ಟು ವಿಧಾನ ಪರಿಷತ್ ಸದಸ್ಯ ಸ್ಥಾನಗಳು ಬೇರಾವುದೇ ಜಿಲ್ಲೆಯ ಬೇರಾವುದೇ ಕ್ಷೇತ್ರಕ್ಕೂ ಸಿಕ್ಕಿಲ್ಲ.

ಕೆ.ವಿವೇಕಾನಂದಗೆ ಜಯ: ಅಭಿನಂದನೆ

ಕನ್ನಡಪ್ರಭ ವಾರ್ತೆ ಮಂಡ್ಯದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಜೆಡಿಎಸ್‌-ಬಿಜೆಪಿ ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ ಅವರನ್ನು ಹಲಗೂರು ಜೆಡಿಎಸ್‌ ಮುಖಂಡರು ಹಾಗೂ ಗ್ರಾಪಂ ಸದಸ್ಯರಾದ ಸುರೇಂದ್ರ ಹಾಗೂ ರಾಜೀವ್‌ ಅಭಿನಂದಿಸಿದರು.

ಲೋಕಸಭೆ ಚುನಾವಣೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಗೆಲುವು ಜಿಲ್ಲೆಯಲ್ಲಿ ಜೆಡಿಎಸ್‌ಗೆ ದೊಡ್ಡ ಶಕ್ತಿಯನ್ನು ತಂದುಕೊಟ್ಟಿದ್ದರೆ, ಅದರ ಬೆನ್ನಹಿಂದೆಯೇ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆ.ವಿವೇಕಾನಂದ ಗೆಲುವು ಪಕ್ಷದೊಳಗೆ ಇನ್ನಷ್ಟು ಉತ್ಸಾಹ-ಹುಮ್ಮಸ್ಸು ಹೆಚ್ಚುವಂತೆ ಮಾಡಿದೆ ಎಂದರು.ಕೆ.ವಿವೇಕಾನಂದ ಅವರು ಉದ್ಯಮಿಯಾಗಿದ್ದರೂ ಶಿಕ್ಷಕರೊಂದಿಗೆ ನಿರಂತರ ಸಂಪರ್ಕವನ್ನಿಟ್ಟುಕೊಂಡಿದ್ದರು. ಶಿಕ್ಷಕರು, ಉಪನ್ಯಾಸಕರು, ಪ್ರಾಂಶುಪಾಲರ ಸಮಸ್ಯೆಗಳ ಕುರಿತು ಸರ್ಕಾರದ ಗಮನಸೆಳೆದು ಪರಿಹರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರ ಸೇವೆ ಮಾಡುವುದಕ್ಕೆ ಶಿಕ್ಷಕರು ಸದಾವಕಾಶ ದೊರಕಿಸಿರುವುದು ಹರ್ಷವನ್ನು ತಂದುಕೊಟ್ಟಿದೆ ಎಂದರು.

ಪಕ್ಷಾಂತರ ಮಾಡುವುದನ್ನು ರೂಢಿ ಮಾಡಿಕೊಂಡಿದ್ದ ಅವಕಾಶವಾದಿ ರಾಜಕಾರಣಿ ಮರಿತಿಬ್ಬೇಗೌಡರಿಗೆ ಶಿಕ್ಷಕರು ಸರಿಯಾದ ಪಾಠ ಕಲಿಸಿದ್ದಾರೆ. ನಾಲ್ಕು ಅವಧಿಯಿಂದ ಸತತ ಆಯ್ಕೆಯಾಗಿದ್ದರೂ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಫಲರಾಗಿಲ್ಲ. ವೈಯಕ್ತಿಕ ಹಿತಾಸಕ್ತಿಯಿಂದ ಅಧಿಕಾರದಲ್ಲಿದ್ದರೇ ವಿನಃ ಅವರು ಗಮನಸೆಳೆಯುವಂತಹ ಸಾಧನೆಯನ್ನೇನೂ ಮಾಡಿಲ್ಲ ಎಂದರು.

Share this article