ಕೆಜಿಎಫ್ ಚಿನ್ನದ ಗಣಿಯಲ್ಲಿ ನಡೆದ ಚಿನ್ನ ಕಳ್ಳತನ: ಸಂಸದರ 'ಈಡಿಯಟ್' ಹೇಳಿಕೆಗೆ ಆಕ್ರೋಶ

KannadaprabhaNewsNetwork | Updated : Oct 08 2024, 03:50 AM IST

ಸಾರಾಂಶ

ಕೆಜಿಎಫ್ ಚಿನ್ನದ ಗಣಿಯಲ್ಲಿ ನಡೆದ ಚಿನ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಮಲ್ಲೇಶಬಾಬು ಅವರ 'ಈಡಿಯಟ್' ಹೇಳಿಕೆಯನ್ನು ಶಾಸಕ ಎಸ್.ಎನ್.ನಾರಾಯಣಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ.  

 ಕೆಜಿಎಫ್ :  ಚಿನ್ನದ ಗಣಿಯಲ್ಲಿ ನಡೆದಿರುವ ಚಿನ್ನ ಕಳವು ವಿಚಾರ ಮಾತನಾಡುವಾಗ ಕೋಲಾರ ಸಂಸದ ಮಲ್ಲೇಶಬಾಬು ಬಳಸಿದ ಈಡಿಯಟ್‌ ಪದಬಳಕೆಯನ್ನು ಚಾವು ಖಂಡಿಸುವುದಾಗಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಪದ ಬಳಸುವಾಗ ಯೋಚಿಸಿ ಬಳಸಬೇಕು. ಈಡಿಯಟ್ ಎಂದು ಬಿಜಿಎಂಎಲ್ ಕಾರ್ಮಿಕರಿಗೆ ಹೇಳಿದ್ದಾರಾ ಅಥವಾ ಸಂಘ ಸಂಸ್ಥೆಗಳ ಮುಖಂಡರಿಗೆ ಹೇಳಿದ್ದಾರಾ ಅಥವಾ ಕೆಜಿಎಪ್ ಜನರಿಗೆ ಹೇಳಿದ್ದಾರಾ ಎಂದು ಶಾಸಕರು ಪ್ರಶ್ನಿಸಿದರು.

ಚಿನ್ನದ ನೀರು ಹರಿಯುವ ಪೈಪ್‌ ಕಳವು

ಕಳೆದ ಒಂದು ವಾರದಿಂದ ಬಿಜಿಎಂಎಲ್ ಎಂಎಂ ಮಿಲ್‌ನಲ್ಲಿ ಸಂಸ್ಕರಣೆ ಮಾಡಿದ ಚಿನ್ನದ ನೀರು ಹರಿದು ಹೋಗುವ ಪೈಪ್‌ಗಳನ್ನೇ ಪ್ಲಾನ್ ಮಾಡಿ ಕಳುವು ಮಾಡಲಾಗಿತ್ತು, ಇದರ ಬಗ್ಗೆ 13 ಮಂದಿ ಭದ್ರತಾ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ, ಆದರೆ ಚಿನ್ನದ ಅದಿರು ಲೂಟಿಯಲ್ಲಿ ಕೇವಲ ಭದ್ರತಾ ಸಿಬ್ಬಂದಿಯನ್ನು ಕೆಲಸದಿಂದ ವಜಗೊಳಿಸಿರುವುದು ತಪ್ಪು. ಇದರ ಹಿಂದೆ ಇರುವ ದೊಡ್ಡ ದೊಡ್ಡ ಅಧಿಕಾರಿಗಳನ್ನು ಅಮಾನತುಗಳಿಸುವ ನಿಟ್ಟಿನಲ್ಲಿ ದೆಹಲಿ ಮಟ್ಟದ ಹಿರಿಯ ಅಧಿಕಾರಿಗಳ ತನಿಖಾ ತಂಡ ರಚಿಸಬೇಕೆಂದು ಆಗ್ರಹಿಸಿದರು.

ಚಿನ್ನದ ಆದಿರು ಕಳ್ಳತನ ಮಾಡಿರುವ ಸುದ್ದಿ ಸಾಮಾಜಿಕ ಜಾಲ ತಾಣಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ಇದರ ಬಗ್ಗೆ ಮಾಧ್ಯಮದವರು ಕೋಲಾರ ಸಂಸದ ಮಲ್ಲೇಶಬಾಬುರನ್ನು ಸ್ಪಷ್ಟೀಕರಣ ಬಯಸಿದ ಸಂದರ್ಭದಲ್ಲಿ, ಈಡಿಯಟ್‌ಗಳು ದೂರು ನೀಡಿದ್ದಾರೆ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ. ಅವರು ಮೋದಲು ಬಿಜಿಎಂಎಲ್ ಚಿನ್ನದ ಗಣಿ ಬಗ್ಗೆ ತಿಳಿದುಕೊಂಡು ನಂತರ ಮಾತನಾಡಬೇಕು ಎಂದರು.

ಉನ್ನತ ಮಟ್ಟದ ತನಿಖೆಯಾಗಲಿ

ಅಮಾಯಕ ಭದ್ರತಾ ಸಿಬ್ಬಂದಿಗಳ ಪರವಾಗಿ ನಿಲ್ಲದೆ ಅಧಿಕಾರಿಗಳ ಪರ ಬ್ಯಾಟಿಂಗ್ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿ ಕೋಟ್ಯಂತರ ಮೌಲ್ಯದ ಚಿನ್ನದ ಆದಿರು ಕಳವು ಆಗಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮಾತನಾಡುತ್ತಿರುವುದರಿಂದ ಉನ್ನತ ಮಟ್ಟದ ತನಿಖೆ ಅಗತ್ಯವಿದೆ, ಅಮಾಯಕ ೧೩ ಭದ್ರತಾ ಸಿಬ್ಬಂದಿಗಳಿಗೆ ಮರಳಿ ಕೆಲಸ ನೀಡಬೇಕು ಎಂದು ಆಗ್ರಹಿಸಿದರು.

Share this article