ಕನ್ನಡಪ್ರಭ ವಾರ್ತೆ ಮಂಡ್ಯ
ಚುನಾವಣೆ ವಿಚಾರವಾಗಿ ನನ್ನ ನಿರ್ಧಾರವನ್ನು ಸ್ಪಷ್ಟವಾಗಿ ಹೇಳಿದ್ದೇನೆ. ನನ್ನ ಸ್ಪರ್ಧೆ ಕುರಿತು ಪಕ್ಷ ತೀರ್ಮಾನ ಮಾಡಬೇಕು. ನನ್ನ ಬೆಂಬಲಿಗರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಪ್ರತಿ ತಾಲೂಕಿಗೆ ತೆರಳಿ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡುತ್ತೇನೆ. ಚುನಾವಣೆ ಸಂಬಂಧವೇ ಈ ಸಭೆ ಮಾಡುತ್ತಿದ್ದೇನೆ. ಇದರ ಬಗ್ಗೆ ಈಗಾಗಲೇ ರೂಪುರೇಷೆಗಳು ನಡೆಯುತ್ತಿವೆ. ನನ್ನ ಬೆಂಬಲಿಗರಿಗೆ ಯಾವುದೇ ಗೊಂದಲವಾಗಬಾರದು. ಅವರಲ್ಲಿ ವಿಶ್ವಾಸ ತುಂಬುವ ಸಲುವಾಗಿ ಸಭೆ ಮಾಡುತ್ತಿದ್ದೇನೆ ಎಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಪಕ್ಷದ ಸೂಚನೆಯಂತೆ ಕೆಲಸ:ಹಿಂದೆ ಸ್ವತಂತ್ರ ಅಭ್ಯರ್ಥಿಯಾಗಿದ್ದೆ. ಈಗ ಬೇರೆ ರೀತಿಯಲ್ಲಿ ಭೇಟಿ ಮಾಡುತ್ತೇನೆ. ಎಲ್ಲಾ ತಾಲೂಕಿನ ಬೆಂಬಲಿಗರ ಜೊತೆ ಸಭೆ ನಡೆಸಿ ಚರ್ಚಿಸುತ್ತೇನೆ. ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ತಾಲೂಕು ಪ್ರವಾಸ ಮಾಡುತ್ತೇನೆ. ಆದಿ ಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆದು ಪ್ರಚಾರ ಆರಂಭಿಸುತ್ತೇನೆ. ಐದು ವರ್ಷಗಳ ಕಾಲ ನಾನು ಪಕ್ಷೇತರ ಸಂಸದೆಯಾಗಿ ಕಾರ್ಯನಿರ್ವಹಿಸಿದ್ದೇನೆ. ಈಗ ಹಾಗಿಲ್ಲ. ಪಕ್ಷದಿಂದ ಬರುವ ಸೂಚನೆಯ ಮೇಲೆ ಕೆಲಸ ಮಾಡಬೇಕಿದೆ. ಮಂಡ್ಯ ಎಲೆಕ್ಷನ್ ಸಾಧಾರಣವಾಗಿ ನಡೆಯೋಲ್ಲ. ವಿಶೇಷವಾಗಿ ನಡೆಯುತ್ತೆ. ಕಳೆದ ಚುನಾವಣೆ ವೇಳೆ ಎದುರಾದ ಹಲವಾರು ಸವಾಲುಗಳನ್ನು ಎದುರಿಸಿ ಗೆದ್ದಿದ್ದೇನೆ. ಪಕ್ಷದಲ್ಲಿ ಹಿರಿಯರು ಇದ್ದಾರೆ. ಈಗ ಅವರು ನನಗೆ ರಾಜಕೀಯ ಮಾರ್ಗದರ್ಶನ ಮಾಡುತ್ತಾರೆಂಬ ನಂಬಿಕೆ ಇದೆ ಎಂದು ವಿಶ್ವಾಸದಿಂದ ನುಡಿದರು.
ಕುಮಾರಸ್ವಾಮಿ ಬಗ್ಗೆ ಸಂಸದೆ ಸುಮಲತಾ ಮೃದುಧೋರಣೆ ತಳೆದಿರುವ ಬಗ್ಗೆ ಕೇಳಿದಾಗ, ನಾನು ಯಾವತ್ತೂ ಯಾರನ್ನೂ ದ್ವೇಷ ಮಾಡಿಲ್ಲ. ಉದ್ದೇಶ ಪೂರ್ವಕವಾಗಿ ಟಾರ್ಗೇಟ್ ಮಾಡಿಕೊಂಡು ಟೀಕಿಸಿಲ್ಲ. ದ್ವೇಷದ ರಾಜಕಾರಣ ನನಗೆ ಗೊತ್ತಿಲ್ಲ. ನನ್ನ ರೆಕಾರ್ಡ್ ತೆಗೆದು ನೋಡಿ. ನಾನು ಎಲ್ಲು ತಪ್ಪು ಮಾತನಾಡಿಲ್ಲ. ಮೊದಲಿಂದಲೂ ನಾನು ಸಾಫ್ಟ್ ಎಂದು ಸಮಜಾಯಿಷಿ ನೀಡಿದರು.