ಕೈ ತುಷ್ಟೀಕರಣದಿಂದ ಗಂಡಾಂತರ: ಬಿಜೆಪಿ

KannadaprabhaNewsNetwork |  
Published : Mar 02, 2024, 01:48 AM ISTUpdated : Mar 02, 2024, 08:20 AM IST
Vijayendra vs Siddaramaiah

ಸಾರಾಂಶ

ಕಾಂಗ್ರೆಸ್ ಪಕ್ಷದ ತುಷ್ಟೀಕರಣದ ರಾಜನೀತಿ ಮತ್ತು ಅಲ್ಪಸಂಖ್ಯಾತರ ಓಲೈಕೆಯ ನೀತಿಯಿಂದ ರಾಜ್ಯದ ಸುರಕ್ಷತೆಗೆ ಗಂಡಾಂತರ ಬಂದಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಪಾದಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು 

ಕಾಂಗ್ರೆಸ್ ಪಕ್ಷದ ತುಷ್ಟೀಕರಣದ ರಾಜನೀತಿ ಮತ್ತು ಅಲ್ಪಸಂಖ್ಯಾತರ ಓಲೈಕೆಯ ನೀತಿಯಿಂದ ರಾಜ್ಯದ ಸುರಕ್ಷತೆಗೆ ಗಂಡಾಂತರ ಬಂದಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಪಾದಿಸಿದ್ದಾರೆ.

ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟದ ಘಟನೆ ಕುರಿತು ಶುಕ್ರವಾರ ಪಕ್ಷದ ಕಚೇರಿಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಅವರು, ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ತನಿಖೆಗೆ ಒಪ್ಪಿಸಬೇಕು. 

ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.ವಿಧಾನಸೌಧದ ಘಟನೆ ಸಂಬಂಧ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದು ಸತ್ಯ ಎಂದು ಎಫ್ಎಸ್ಎಲ್ ವರದಿ ಹೇಳಿದೆ. 

ಅದನ್ನು ಮುಚ್ಚಿಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಎಫ್ಎಸ್ಎಲ್ ವರದಿ ತಿದ್ದುಪಡಿ ಮಾಡಿ ಮತ್ತೊಂದು ಬೋಗಸ್ ಎಫ್ಎಸ್ಎಲ್ ವರದಿ ಸಿದ್ಧಪಡಿಸಲಾಗುತ್ತಿದೆ ಎಂಬ ಅನುಮಾನ ನಮ್ಮೆಲ್ಲರನ್ನು ಕಾಡುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಒಂದಿಲ್ಲೊಂದು ಘಟನೆಗಳು ನಡೆಯುತ್ತಿವೆ. ಸರಣಿ ಘಟನೆಗಳು ಒಂದಾದ ಮೇಲೆ ಒಂದರಂತೆ ರಾಜ್ಯದಲ್ಲಿ ಜರುಗುತ್ತಿವೆ. 

ರಾಜ್ಯದ ಕಾಂಗ್ರೆಸ್ ಸರ್ಕಾರವು ದೇಶದ್ರೋಹಿಗಳನ್ನು, ಸಮಾಜವಿರೋಧಿ ದುಷ್ಕೃತ್ಯ ಎಸಗುವವರನ್ನು ರಕ್ಷಿಸುವ ಧೋರಣೆಯನ್ನು ತೆಗೆದುಕೊಂಡಿದೆ. 

ಕಾಂಗ್ರೆಸ್ ಸರ್ಕಾರವು ಅಲ್ಪಸಂಖ್ಯಾತರ ಓಲೈಕೆ ನೀತಿಯನ್ನು ತನ್ನದಾಗಿಸಿಕೊಂಡಿದೆ. ಇದರ ಪರಿಣಾಮವನ್ನು ರಾಜ್ಯದ ಜನರು ಎದುರಿಸಬೇಕಿದೆ ಎಂದು ಕಿಡಿಕಾರಿದರು.

ರಾಮೇಶ್ವರಂ ಕೆಫೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಎನ್ಐಎಗೆ ತನಿಖೆಯನ್ನು ಒಪ್ಪಿಸಬೇಕು. ರಾಜ್ಯದ ಜನರ ಹಿತದೃಷ್ಟಿ, ರಕ್ಷಣೆಯ ದೃಷ್ಟಿಯಿಂದ ವಿಳಂಬವಿಲ್ಲದೇ ತನಿಖೆಯನ್ನು ಎನ್ಐಎಗೆ ಒಪ್ಪಿಸಬೇಕು. 

ಬಿಜೆಪಿ ಈ ವಿಷಯದಲ್ಲಿ ರಾಜಕಾರಣ ಮಾಡುವುದಿಲ್ಲ ಎಂದ ಅವರು, ಕಲಬುರಗಿ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಎರಡು ಹತ್ಯೆಗಳಾಗಿವೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೊಲೆ ಪ್ರಕರಣಗಳು ಹೆಚ್ಚಾಗಿವೆ. ಕಾಂಗ್ರೆಸ್ ಸರ್ಕಾರದ ಮೃದು ಧೋರಣೆಯಿಂದ ರಾಜ್ಯದ ಸುರಕ್ಷತೆಗೆ ಗಂಡಾಂತರ ಉಂಟಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್‌, ವಿಧಾನಪರಿಷತ್ ಮುಖ್ಯಸಚೇತಕ ಎನ್.ರವಿಕುಮಾರ್, ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಇತರರು ಉಪಸ್ಥಿತರಿದ್ದರು.

ಬಾಂಬರ್ ಅನ್ನು ಡಿಕೆಶಿ ಈಗ ಅಂಕಲ್‌ ಅಂತಾರಾ?
ಬ್ರ್ಯಾಂಡ್ ಬೆಂಗಳೂರು ರೂಪಿಸದೇ ಇದ್ದರೂ ಪರವಾಗಿಲ್ಲ, ಬಾಂಬ್ ಬೆಂಗಳೂರು ಸೃಷ್ಟಿಸಬೇಡಿ. ಕುಕ್ಕರ್ ಬಾಂಬ್ ಸ್ಫೋಟಿಸಿದವರನ್ನು ಬ್ರದರ್ ಎನ್ನುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ರಾಮೇಶ್ವರ ಕೆಫೆಯಲ್ಲಿ ಸ್ಫೋಟ ಮಾಡಿದವರನ್ನು ಅಂಕಲ್ ಎನ್ನಬಹುದು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದಾಗಲೆಲ್ಲ ಪುಂಡು ಪೋಕರಿಗಳಿಗೆ ರೆಕ್ಕೆ ಬರುತ್ತದೆ. ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣದಿಂದಲೇ ಬಾಂಬ್ ಸ್ಫೋಟ ನಡೆದಿದೆ.- ಆರ್‌. ಅಶೋಕ್‌ ವಿಪಕ್ಷ ನಾಯಕ

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ