ಕನ್ನಡಪ್ರಭ ವಾರ್ತೆ ಬೆಂಗಳೂರು
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸಿದ ಮುಷ್ಕರ ಬೆಂಗಳೂರಿನಲ್ಲಿ ಬಹುತೇಕ ವಿಫಲವಾಗಿದೆ. ಆದರೆ, ಮುಷ್ಕರದ ಮಾಹಿತಿಯಿಂದಾಗಿ ಸಾರ್ವಜನಿಕರು ಸ್ವಂತ ವಾಹನಗಳ ಮೂಲಕ ಸಂಚರಿಸಿದ್ದರಿಂದಾಗಿ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚುವಂತಾಗಿತ್ತು.ಹಲವು ಗೊಂದಲಗಳ ನಡುವೆಯೇ ಮಂಗಳವಾರ ಬೆಳಗ್ಗೆ 6 ಗಂಟೆಗೆ ಸಾರಿಗೆ ನೌಕರರ ಮುಷ್ಕರ ಆರಂಭಿಸಲಾಯಿತು. ಆದರೆ, ಹೈಕೋರ್ಟ್ ಸೂಚನೆ ಮತ್ತು ಈ ಹಿಂದಿನ ಮುಷ್ಕರಗಳ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ಬಿಎಂಟಿಸಿಯ ಬಹುತೇಕ ಎಲ್ಲ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೂ, ಬೆಳಗ್ಗೆ 9 ಗಂಟೆಯವರೆಗೆ ನೌಕರರ ಪ್ರಮಾಣ ಕಡಿಮೆಯಿದ್ದ ಕಾರಣಕ್ಕಾಗಿ ಕೊಂಚ ಮಟ್ಟಿಗೆ ಬಸ್ ಸೇವೆಯಲ್ಲಿ ವ್ಯತ್ಯಯವಾಯಿತು.
ಆನಂತರ ನೌಕರರು ಕರ್ತವ್ಯಕ್ಕೆ ಹಾಜರಾದ ಕಾರಣ ಬಿಎಂಟಿಸಿ ಬಸ್ ಸೇವೆ ಯಥಾಸ್ಥಿತಿಗೆ ಮರಳಿತು. ರಾತ್ರಿ 8 ಗಂಟೆಯವರೆಗೆ ಬಿಎಂಟಿಸಿಯಿಂದ 6,199 ಟ್ರಿಪ್‌ಗಳನ್ನು ನಿಗದಿ ಮಾಡಲಾಗಿತ್ತು, ಅದರಲ್ಲಿ 6,198 ಟ್ರಿಪ್‌ಗಳಲ್ಲಿ ಬಸ್ ಸೇವೆ ನೀಡಲಾಗಿದೆ. ಅದರಂತೆ ಬಿಎಂಟಿಸಿಯಿಂದ ಶೇ.100ರಷ್ಟು ಬಸ್ ಸೇವೆ ನೀಡಲಾಗಿದೆ. ಆ ಮೂಲಕ ನಗರದಲ್ಲಿ ಮುಷ್ಕರದ ಪರಿಣಾಮ ಬೀರಲಿಲ್ಲ.ಸ್ವಂತ ವಾಹನಗಳಲ್ಲಿ ಜನ ಸಂಚಾರ:
ಸಾರಿಗೆ ನೌಕರರ ಮುಷ್ಕರದಿಂದ ಬಿಎಂಟಿಸಿ ಬಸ್‌ಗಳು ರಸ್ತೆಗಿಳಿಯುವುದಿಲ್ಲ ಎಂದು ತಿಳಿದ ಜನರು ಸ್ವಂತ ವಾಹನಗಳ ಮೂಲಕ ತೆರಳಿದರು. ಇದರಿಂದ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚುವಂತಾಗಿತ್ತು. ಅದರಲ್ಲೂ ಮೆಜೆಸ್ಟಿಕ್, ತುಮಕೂರು ರಸ್ತೆ, ಮೈಸೂರು ರಸ್ತೆ ಸೇರಿದಂತೆ ಮತ್ತಿತರ ಪ್ರಮುಖ ರಸ್ತೆಗಳಲ್ಲಿ ಬೆಳಗಿನ ಹೊತ್ತು ವಾಹನ ಸಂಚಾರ ಹೆಚ್ಚಾಗಿ ಸವಾರರು ಪರದಾಡುವಂತಾಗಿತ್ತು. ಅದರ ಜತೆಗೆ ಬಸ್‌ಗಳ ಸಂಖ್ಯೆ ಹೆಚ್ಚಿದ್ದರೂ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುವಂತಾಗಿತ್ತು.ಹೊರ ಜಿಲ್ಲೆಗಳಿಗೆ ತೆರಳಲು ಪರದಾಟ:
ನಗರದೊಳಗೆ ಸಂಚರಿಸುವವರಿಗೆ ಸಾರಿಗೆ ಸೇವೆಯಲ್ಲಿ ಯಾವುದೇ ಸಮಸ್ಯೆಯಾಗಲಿಲ್ಲ. ಆದರೆ, ನಗರದಿಂದ ಹೊರ ಜಿಲ್ಲೆ, ರಾಜ್ಯಗಳಿಗೆ ತೆರಳುವವರು ಸಮಸ್ಯೆ ಎದುರಿಸುವಂತಾಯಿತು. ದುಬೈನಿಂದ ಬೆಂಗಳೂರಿಗೆ ವಿಮಾನದ ಮೂಲಕ ಬಂದ ವ್ಯಕ್ತಿಯೊಬ್ಬರಿಗೆ ಮಂಗಳೂರಿಗೆ ತೆರಳಲು ಕೆಎಸ್ಸಾರ್ಟಿಸಿ ಬಸ್ ಸಿಗದ ಕಾರಣ ಖಾಸಗಿ ವಾಹನದ ಮೂಲಕ ದುಬಾರಿ ಪ್ರಯಾಣ ದರ ಪಾವತಿಸಿ ತೆರಳಿದರು. ಹೀಗೆ ರೈಲು, ವಿಮಾನಗಳ ಮೂಲಕ ನಗರಕ್ಕಾಗಮಿಸಿದವರು ತಮ್ಮ ಊರುಗಳಿಗೆ ತೆರಳಲು ಪರದಾಡುವಂತಾಗಿತ್ತು.ಪರಿಸ್ಥಿತಿಯ ಲಾಭ ಪಡೆಯಲು ಮುಂದಾದ ಕೆಲ ಖಾಸಗಿ ಬಸ್‌ಗಳಿಗೆ ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದರು. ನಿಗದಿತ ಪ್ರಯಾಣ ದರಕ್ಕಿಂತ ಹೆಚ್ಚಿನ ಪ್ರಯಾಣ ದರ ವಸೂಲಿಗಿಳಿದ ಪರಿಣಾಮ ಮೆಜೆಸ್ಟಿಕ್ ಸೇರಿದಂತೆ ಮತ್ತಿತರ ಬಸ್ ನಿಲ್ದಾಣಗಳಲ್ಲಿ ಖಾಸಗಿ ಬಸ್‌ಗಳ ಪ್ರಯಾಣ ದರ ಪರಿಶೀಲಿಸಲಾಯಿತು.
ಖಾಸಗಿ ಬಸ್‌ಗಳಿಂದ ಸೇವೆ:ಮೆಜೆಸ್ಟಿಕ್‌ನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಕೆಎಸ್ಸಾರ್ಟಿಸಿ ಬಸ್ ಸಂಚಾರ ವಿರಳವಿದ್ದ ಕಾರಣದಿಂದಾಗಿ ಖಾಸಗಿ ಬಸ್‌ಗಳ ಮೂಲಕ ರಾಜ್ಯದ ವಿವಿಧ ನಗರಗಳಿಗೆ ಸೇವೆ ನೀಡಲಾಯಿತು. ಅದಕ್ಕಾಗಿ ಮೆಜೆಸ್ಟಿಕ್, ಮೈಸೂರು ರಸ್ತೆ ಸೇರಿದಂತೆ ಮತ್ತಿತರ ಕಡೆಗಳಲ್ಲಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಗಳಲ್ಲಿ ಖಾಸಗಿ ಬಸ್‌ಗಳ ಓಡಾಟಕ್ಕೆ ಅವಕಾಶ ನೀಡಲಾಗಿತ್ತು. ಅಲ್ಲದೆ, ಬಿಎಂಟಿಸಿ ಮತ್ತು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಗಳಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ಆನೇಕಲ್: ನಿತ್ಯದಂತೆ ಕೆಎಸ್ಸಾರ್ಟಿಸಿ ಸಂಚಾರಆನೇಕಲ್: ಸಾರಿಗೆ ಮುಷ್ಕರವಿದ್ದರೂ ಆನೇಕಲ್ ನಗರದಲ್ಲಿ ಮಂಗಳವಾರ ಬೆಳಗ್ಗೆ 10 ಗಂಟೆ ನಂತರ ನಿಧಾನವಾಗಿ ಬಸ್ಸುಗಳು ರಸ್ತೆಗಿಳಿದವು. ಎಂದಿನಂತೆ ಕೆಎಸ್ಆರ್‌ಟಿಸಿ ಬಸ್ ಸಂಚಾರ ಪ್ರಾರಂಭವಾಯಿತು. ಆನೇಕಲ್‌ನಿಂದ ಮೆಜೆಸ್ಟಿಕ್, ಸಿಟಿ ಮಾರ್ಕೆಟ್, ತಮಿಳುನಾಡಿನ ಹೊಸೂರು, ಡೆಂಕನಿಕೋಟೆ ಹಾಗೂ ಕನಕಪುರ ಕಡೆಗೆ ಸಂಚಾರ ಮಾಡಿದವು. ಬೆಳಗ್ಗೆ ಕಾಲೇಜು ಮತ್ತು ಕೈಗಾರಿಕೆಗಳಿಗೆ ತೆರಳುವವರಿಗೆ ಸ್ವಲ್ಪ ತೊಂದೆರೆ ಉಂಟಾಯಿತಾದರೂ ನಂತರ ಸರಿಹೋಯಿತು. ಭದ್ರತೆಗಾಗಿ ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜನೆ ಮಾಡಲಾಗಿತ್ತು.