ಖರ್ಚು ಆಗದೇ ಉಳಿದಿದೆ ಶಾಸಕರಿಗೆ ನೀಡಿದ ನಿಧಿ!

Published : Jun 24, 2025, 06:28 AM IST
money

ಸಾರಾಂಶ

ಕ್ಷೇತ್ರಗಳಲ್ಲಿ ಸ್ಥಳೀಯ ಮಟ್ಟದ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರದಿಂದ ಸಮರ್ಪಕ ಅನುದಾನ ಬರುತ್ತಿಲ್ಲ ಎಂಬ ಆರೋಪ ಶಾಸಕರಿಂದ ಪದೇಪದೆ ಕೇಳಿ ಬರುತ್ತಿದೆ.

ಗಿರೀಶ್‌ ಗರಗ

ಬೆಂಗಳೂರು : ಕ್ಷೇತ್ರಗಳಲ್ಲಿ ಸ್ಥಳೀಯ ಮಟ್ಟದ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರದಿಂದ ಸಮರ್ಪಕ ಅನುದಾನ ಬರುತ್ತಿಲ್ಲ ಎಂಬ ಆರೋಪ ಶಾಸಕರಿಂದ ಪದೇಪದೆ ಕೇಳಿ ಬರುತ್ತಿದೆ. ಆದರೆ, ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (ಕೆಲ್ಯಾಡ್ಸ್‌) ಅಡಿ ನೀಡಲಾಗಿದ್ದ ಅನುದಾನದ ಪೈಕಿ 2024-25ನೇ ಸಾಲಿನಲ್ಲಿ ಶೇ.32ರಷ್ಟು ಮಾತ್ರ ವ್ಯಯಿಸಲಾಗಿರುವುದು ಇದೀಗ ಬೆಳಕಿಗೆ ಬಂದಿದೆ. ಸುಮಾರು 1000 ಕೋಟಿ ರು. ಬಳಕೆ ಆಗದೇ ಹಾಗೇ ಉಳಿದಿದೆ.

ಸರ್ಕಾರ ಸಮರ್ಪಕವಾಗಿ ಅನುದಾನ ನೀಡುತ್ತಿಲ್ಲ, ಅನುದಾನಕ್ಕೆ ತಕ್ಕಂತೆ ರೂಪಿಸಲಾದ ಕ್ರಿಯಾಯೋಜನೆಯಂತೆ ಕಾಮಗಾರಿ ಕೈಗೊಳ್ಳಲು ಲಂಚ ನೀಡಬೇಕು ಎಂಬ ಆರೋಪಗಳು ಶಾಸಕರಿಂದಲೇ ಕೇಳಿಬರುತ್ತಿದೆ. ಅದರಲ್ಲೂ, ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ನಿರತರಾಗಿರುವ ಸರ್ಕಾರ ಕ್ಷೇತ್ರವಾರು ಕಾಮಗಾರಿಗಳಿಗೆ ಒತ್ತು ನೀಡುತ್ತಿಲ್ಲ ಹಾಗೂ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂಬ ಆರೋಪಗಳಿವೆ. ಅದಕ್ಕೆ ವ್ಯತಿರಿಕ್ತವಾಗಿ ಇದೀಗ ಕೆಲ್ಯಾಡ್ಸ್ ಅನುದಾನ ಬಳಕೆಯಲ್ಲಿ ಬಹುತೇಕ ಎಲ್ಲ ಶಾಸಕರು ಹಿಂದೆ ಬಿದ್ದಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ.

2024-25ನೇ ಸಾಲಿನ ಅಂತ್ಯಕ್ಕೆ ಕೆಲ್ಯಾಡ್ಸ್‌ಗೆ ಒಟ್ಟಾರೆ 1,479.85 ಕೋಟಿ ರು. ಅನುದಾನ ನಿಗದಿ ಮಾಡಲಾಗಿತ್ತು. ಆದರೆ, ಅದರಲ್ಲಿ ವೆಚ್ಚವಾಗಿದ್ದು ಮಾತ್ರ 460.78 ಕೋಟಿ ರು. ಮಾತ್ರ.

2024-25ನೇ ಸಾಲಿನಲ್ಲಿ 595 ಕೋಟಿ ರು.:

ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ದಾಖಲೆಯಂತೆ 2024-25ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಕೆಲ್ಯಾಡ್ಸ್‌ಗಾಗಿ 595 ಕೋಟಿ ರು. ಅನುದಾನ ನೀಡಿದೆ. ಅದರ ಜತೆಗೆ 2024-25ನೇ ಸಾಲಿನ ಆರಂಭಕ್ಕೂ ಮುನ್ನ ಕೆಲ್ಯಾಡ್ಸ್‌ನಲ್ಲಿ ವೆಚ್ಚವಾಗದ 884.85 ಕೋಟಿ ರು. ಗಳಿತ್ತು. ಒಟ್ಟಾರೆ ಶಾಸಕರು ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಕೆಲ್ಯಾಡ್ಸ್‌ನಲ್ಲಿ 1,479.85 ಕೋಟಿ ರು. ಮೀಸಲಿಡಲಾಗಿತ್ತು.

ಅದರಲ್ಲಿ ಕಾಮಗಾರಿ ಅನುಷ್ಠಾನ ವಿಳಂಬ ಸೇರಿ ವಿವಿಧ ಕಾರಣಕ್ಕಾಗಿ 19.58 ರು. ಸರ್ಕಾರಕ್ಕೆ ವಾಪಸ್‌ ಬಂದಿದೆ. ಹಾಗೆಯೇ, 11.32 ಕೋಟಿ ರು. ಮೊತ್ತ ಬೇರೆ ಜಿಲ್ಲೆಗಳ ಕಾಮಗಾರಿಗೆ ವರ್ಗಾಯಿಸಲಾಗಿದೆ. ಒಟ್ಟಾರೆ 2024-25ನೇ ಸಾಲಿನಲ್ಲಿ ಕೆಲ್ಯಾಡ್ಸ್‌ ಅಡಿ 460.78 ಕೋಟಿ ರು. ಮಾತ್ರ ವ್ಯಯಿಸಲಾಗಿದೆ. ಹೀಗಾಗಿ 2025-26ನೇ ಸಾಲಿನ ಕೆಲ್ಯಾಡ್ಸ್‌ನ ಆರಂಭಿಕ ಶಿಲ್ಕು 988.17 ಕೋಟಿ ರು.ಗಳಾಗಿವೆ. ಒಟ್ಟಾರೆ ಲಭ್ಯವಿದ್ದ ಕೆಲ್ಯಾಡ್ಸ್‌ ಅನುದಾನದ ಪೈಕಿ 2024-25ರಲ್ಲಿ ಕೇವಲ ಶೇ.32ರಷ್ಟು ಮಾತ್ರ ವ್ಯಯಿಸಲಾಗಿದೆ.

ಕೆಲ್ಯಾಡ್ಸ್‌ ವೆಚ್ಚಕ್ಕೆ 11 ತಿಂಗಳ ಗುರಿ:

2025-26ನೇ ಸಾಲಿನ ಆರಂಭದಲ್ಲಿ ಕೆಲ್ಯಾಡ್ಸ್‌ನಲ್ಲಿ ಉಳಿದಿರುವ 988.17 ಕೋಟಿ ರು.ಗೆ ಸಂಬಂಧಿಸಿ ಈಗಾಗಲೇ ರೂಪಿಸಲಾಗಿರುವ ಕ್ರಿಯಾಯೋಜನೆ ಅನುಷ್ಠಾನಕ್ಕೆ ಯೋಜನಾ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ 11 ತಿಂಗಳ ಗುರಿ ನಿಗದಿ ಮಾಡಿದೆ. ಅದರಂತೆ 2024-25ನೇ ಸಾಲಿನಲ್ಲಿ ಆರಂಭವಾಗದೇ ಇರುವ ಎಲ್ಲ ಕಾಮಗಾರಿಗಳ ಅನುಷ್ಠಾನದ ಹೊಣೆ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳಿಗೆ ನೀಡಲಾಗಿದೆ. ಅಲ್ಲದೆ, 11 ತಿಂಗಳೊಳಗಾಗಿ ಆ ಕಾಮಗಾರಿಗಳ ಅನುಷ್ಠಾನಕ್ಕೆ ಸೂಚಿಸಲಾಗಿದೆ.

ಅದರೊಂದಿಗೆ ಕೆಲ್ಯಾಡ್ಸ್ ಅನುದಾನ ಬಳಕೆ ಹೆಚ್ಚಿಸಲು ತುರ್ತು ಅಥವಾ ತ್ವರಿತವಾಗಿ ಅನುಷ್ಠಾನಗೊಳ್ಳಬೇಕಿರುವ 5 ಲಕ್ಷ ರು.ವರೆಗಿನ ಪ್ರಸ್ತಾಪಿತ ಕಾಮಗಾರಿಗಳಿಗೆ ಆಡಳಿತಾತ್ಮಕ ಹಾಗೂ ತಾಂತ್ರಿಕ ಅನುಮೋದನೆ ನೀಡುವ ಜವಾಬ್ದಾರಿ ನಿಗದಿತ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ಪ್ರತ್ಯಾಯೋಜಿಸಲಾಗಿದೆ. ಅದರೊಂದಿಗೆ ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳು ಜೂನ್‌ ಅಂತ್ಯದೊಳಗೆ ಎಲ್ಲ ಶಾಸಕರುಗಳಿಂದ 2 ಕೋಟಿ ರು. ಕಾಮಗಾರಿಗಳ ವಿವರ ಪಡೆದು ಅನುಮೋದನೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಹಾಗೆಯೇ, ಪ್ರತಿ ತಿಂಗಳು ಜಿಲ್ಲಾ ಉಸ್ತುವಾರಿ ಸಚಿವ ನೇತೃತ್ವದಲ್ಲಿ ನಡೆಯುವ ಪ್ರಗತಿ ಪರಿಶೀಲನಾ ಸಭೆಯಲ್ಲಿಯೂ ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.

2024-25ನೇ ಸಾಲಿನ ಅಂತ್ಯಕ್ಕೆ ಕೆಲ್ಯಾಡ್ಸ್ ಆರ್ಥಿಕ ಪ್ರಗತಿ ವಿವರ: (ಕೋಟಿ ರು.ಗಳಲ್ಲಿ)

ಜಿಲ್ಲೆ ಹಿಂದಿನ ಅನುದಾನ 2024-25ರ ಅನುದಾನ ವೆಚ್ಚ ಪಿಡಿ ಖಾತೆಯಲ್ಲಿ ಉಳಿದಿರುವ ಅನುದಾನ

ರಾಯಚೂರು 28.24 22 7.86 41.78

ಕಲಬುರಗಿ 61.53 28 14.43 72.58

ಬೀದರ್‌ 24.50 18 7.40 34.86

ಬೆಳಗಾವಿ 79.65 47 26.08 101.31

ಬಳ್ಳಾರಿ 20.29 12 7.01 24.28

ಬೆಂಗಳೂರು ದಕ್ಷಿಣ 23.14 11 8.53 29.23

ಚಾಮರಾಜನಗರ 7.55 8 3.64 11.91

ಕೋಲಾರ 28.68 18.50 11.20 35.31

ಯಾದಗಿರಿ 21.58 10 8.21 23.79

ಕೊಡಗು 10.85 6 4.31 12.33

ಶಿವಮೊಗ್ಗ 34.91 22 15.16 39.75

ಕೊಪ್ಪಳ 17.64 12 8.80 21.14

ಚಿತ್ರದುರ್ಗ 27.56 16 13.25 30.03

ಬಾಗಲಕೋಟೆ 26.40 20 14.07 30.52

ಮೈಸೂರು 48.19 32 26.48 53.43

ಉಡುಪಿ 18.07 10 9.47 18.48

ತುಮಕೂರು 32.15 28 20.88 40.08

ಧಾರವಾಡ 38.10 20 19.70 37.53

ಚಿಕ್ಕಬಳ್ಳಾಪುರ 10.14 10 7.25 13.52

ಮಂಡ್ಯ 27 18 15.98 29.64

ದಕ್ಷಿಣ ಕನ್ನಡ 28.44 23 17.31 30.95

ಬೆಂಗಳೂರು ನಗರ 106.82 75 62.58 97.82

ಬೆಂಗಳೂರು ಗ್ರಾಮಾಂತರ 12.23 12 9.33 14.38

ದಾವಣಗೆರೆ 20.89 16 14.73 20.94

ಉತ್ತರ ಕನ್ನಡ 23.22 16 16.75 22.89

ಚಿಕ್ಕಮಗಳೂರು 17.43 16 14.31 17.80

ಹಾವೇರಿ 19.82 14 15.37 17.80

ಹಾಸನ 19.94 16 17.46 17.47

ವಿಜಯನಗರ 17.11 10 14.01 14.46

ಗದಗ 9.67 8 10.26 9.81

ವಿಜಯಪುರ 20.10 20 18.96 17.95

ಒಟ್ಟು 884.85 595 460.78 988.17

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಜಿ ರಾಮ್‌ ಜಿ ವಿರುದ್ಧ ಕೈ ಹೋರಾಟ ಶುರು
ಒಂದಲ್ಲಾ ಒಂದು ದಿನ ಹಿಜಾಬ್‌ ಧರಿಸಿದಾಕೆ ಪ್ರಧಾನಿ ಆಗ್ತಾಳೆ : ಒವೈಸಿ