ಹಲಾಲ್‌ ಸರ್ಟಿಫಿಕೇಟ್‌ ಉತ್ಪನ್ನ ಮಾರಾಟಕ್ಕೆ ಉ.ಪ್ರ. ನಿಷೇಧ?

KannadaprabhaNewsNetwork | Published : Nov 19, 2023 1:30 AM

ಸಾರಾಂಶ

ಲಖನೌ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರವು ಹಲಾಲ್ ಪ್ರಮಾಣಪತ್ರಗಳೊಂದಿಗೆ ಮಾರಾಟವಾಗುವ ಉತ್ಪನ್ನಗಳ ಮೇಲೆ ರಾಜ್ಯವ್ಯಾಪಿ ನಿಷೇಧ ಹೇರಲು ಚಿಂತಿಸುತ್ತಿದೆ ಎಂದು ಸರ್ಕಾರದ ವಕ್ತಾರರೊಬ್ಬರು ಶನಿವಾರ ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆದಿದೆ: ಯೋಗಿ ಆಪ್ತರ ಹೇಳಿಕೆ

ನಕಲಿ ಪ್ರಮಾಣಪತ್ರ ವಿತರಣೆ: ಕಂಪನಿ, ಕೆಲ ಇಸ್ಲಾಮಿಕ್‌ ಸಂಸ್ಥೆ ಮೇಲೆ ಕೇಸ್‌

ಹಣ ಪಡೆದು ನಕಲಿ ಹಲಾಲ್‌ ಪ್ರಮಾಣಪತ್ರ ವಿತರಣೆ

ಈ ಹಣ ಉಗ್ರ ಚಟುವಟಿಕೆಗೆ ಬಳಕೆ?

ಲಖನೌ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರವು ಹಲಾಲ್ ಪ್ರಮಾಣಪತ್ರಗಳೊಂದಿಗೆ ಮಾರಾಟವಾಗುವ ಉತ್ಪನ್ನಗಳ ಮೇಲೆ ರಾಜ್ಯವ್ಯಾಪಿ ನಿಷೇಧ ಹೇರಲು ಚಿಂತಿಸುತ್ತಿದೆ ಎಂದು ಸರ್ಕಾರದ ವಕ್ತಾರರೊಬ್ಬರು ಶನಿವಾರ ಹೇಳಿದ್ದಾರೆ.

‘ನಿರ್ದಿಷ್ಟ ಸಮುದಾಯವೊಂದು ಹೆಚ್ಚು ಉತ್ಪನ್ನಗಳನ್ನು ಖರೀದಿ ಮಾಡುವಂತೆ ಪ್ರೇರೇಪಿಸಲು, ಕೆಲವು ಉತ್ಪನ್ನಗಳಿಗೆ ನಕಲಿ ಹಲಾಲ್‌ ಪ್ರಮಾಣಪತ್ರಗಳನ್ನು ಅಂಟಿಸಲಾಗುತ್ತಿದೆ. ಆದರೆ ಇಂಥ ಪ್ರಮಾಣಪತ್ರ ವಿತರಣೆಯು ಇತರ ಸಮುದಾಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಆ ಸಮುದಾಯವು ಅಂಥ ಉತ್ಪನ್ನ ಖರೀದಿಸುವ ಗೋಜಿಗೆ ಹೋಗುವುದಿಲ್ಲ. ಹಣ ಪಡೆದು ನಕಲಿ ಪ್ರಮಾಣಪತ್ರ ವಿತರಣೆ ನಡೆದಿದೆ. ಇದರ ಹಿಂದೆ ಹಣ ಮಾಡುವ ತಂತ್ರ ಅಡಗಿದೆ’ ಎಂಬ ದೂರು ರಾಜ್ಯದಲ್ಲಿ ದಾಖಲಾಗಿತ್ತು. ಈ ದೂರಿನ ಮೇರೆಗೆ ಶನಿವಾರ ಲಖನೌನಲ್ಲಿ ಒಂದು ಕಂಪನಿ ಹಾಗೂ ಕೆಲವು ಇಸ್ಲಾಮಿಕ್‌ ಸಂಘಟನೆಗಳ ವಿರುದ್ಧ ಶನಿವಾರ ಲಖನೌನ ಹಜರತ್‌ಗಂಜ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

‘ಈ ಸಂಘಟನೆಗಳಿಗೆ ಹಲಾಲ್‌ ಪ್ರಮಾಣಪತ್ರ ಕೊಡುವ ಅಧಿಕಾರವಿಲ್ಲ. ಆದರೂ ಹಣ ಪಡೆದು ನಕಲಿ ಪ್ರಮಾಣಪತ್ರ ವಿತರಿಸಿವೆ’ ಎಂದೂ ದೂರಲಾಗಿದೆ. ಇದೇ ವೇಳೆ, ಈ ರೀತಿ ಸಂಗ್ರಹಿಸದ ಹಣ ಉಗ್ರ ಚಟುವಟಿಕೆಗೆ ಬಳಕೆ ಆಗುತ್ತಿದೆ ಎಂಬ ಗಿಮಾನಿಯೂ ಇದೆ.

ಇದರ ಬೆನ್ನಲ್ಲೇ ಸರ್ಕಾರದ ವಕ್ತಾರರು, ‘ಹಲಾಲ್‌ ಪ್ರಮಾಣಪತ್ರದ ಉತ್ಪನ್ನಗಳ ಮಾರಾಟಕ್ಕೆ ನಿಷೇಧ ಹೇರುವ ಚಿಂತನೆ ನಡೆದಿದೆ. ಹಲಾಲ್‌ ಜಾಲಗಳ ವಿರುದ್ಧ ಕಠಿಣ ಕ್ರಮಕ್ಕೆ ಯೋಗಿ ಸೂಚಿಸಿದ್ದಾರೆ’ ಎಂದು ಹೇಳಿದ್ದಾರೆ.

ಏನಿದು ಹಲಾಲ್‌ ಪ್ರಮಾಣಪತ್ರ?:

‘ಆಹಾರವನ್ನು ಇಸ್ಲಾಮಿಕ್ ಕಾನೂನಿಗೆ ಅನುಸಾರವಾಗಿ ಹಾಗೂ ಕಲಬೆರಕೆ ಇಲ್ಲದೆ ತಯಾರಿಸಲಾಗಿದೆ’ ಎಂಬ ಪ್ರಮಾಣಪತ್ರವನ್ನು ಆಹಾರೋತ್ಪನ್ನ ಕಂಪನಿಗಳಿಗೆ ನೀಡಲಾಗುತ್ತದೆ. ಇದಕ್ಕೆ ಹಲಾಲ್ ಸರ್ಟಿಫಿಕೇಶನ್‌ ಎನ್ನುತ್ತಾರೆ.

Share this article