ರಾಜ್ಯಸಭೇಲಿ ಕಾಂಗ್ರೆಸ್ ಅಧ್ಯಕ್ಷ ಹೇಳಿಕೆ. ಡಿಸಿಎಂ ಡಿಕೆಶಿ ವಿರುದ್ಧ ಪರೋಕ್ಷ ಅತೃಪ್ತಿ? ನಮ್ಮ ಡಿಸಿಎಂ ವಿರೋಧ ಮಾಡಿದ್ದಾರೆ. ಬಿಜೆಪಿಯವರೂ ವಿರೋಧ ಮಾಡುತ್ತಿದ್ದೀರಿ.
ನವದೆಹಲಿ: ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಲು ಎಲ್ಲಾ ಮೇಲ್ವರ್ಗದವರು ಒಟ್ಟಾಗಿ ವಿರೋಧ ಮಾಡುತ್ತಿದ್ದಾರೆ ಎಂದು ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜನ ಖರ್ಗೆ ಕಿಡಿಕಾರಿದ್ದಾರೆ. ವಿಶೇಷವೆಂದರೆ ಇತ್ತೀಚೆಗೆ ಕರ್ನಾಟಕ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಜಾತಿ ಗಣತಿ ಸ್ವೀಕಾರ ಕುರಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಲುವನ್ನು ವಿರೋಧಿಸಿದ್ದರು.
ರಾಜ್ಯಸಭೆಯಲ್ಲಿ ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದ ಮಸೂದೆ ಮೇಲಿನ ಚರ್ಚೆಯ ಸಮಯದಲ್ಲಿ, ‘ಮೇಲ್ವರ್ಗದವರೆಲ್ಲಾ ಒಟ್ಟಾಗಿ ಜಾತಿ ಸಮೀಕ್ಷೆ ವರದಿಯನ್ನು ತಡೆಯುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪ ಮಾಡಿದರು. ಇದು ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯ್ತು. ಈ ವೇಳೆ ಎದ್ದು ನಿಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ ‘ಕರ್ನಾಟಕದ ಉಪಮುಖ್ಯಮಂತ್ರಿಯಾಗಿರುವ ಡಿ.ಕೆ. ಶಿವಕುಮಾರ್ ಅವರು ಸಹ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಬಾರದು ಎಂಬ ನಿವೇದನಾ ಪತ್ರಕ್ಕೆ ಈ ಹಿಂದೆ ಸಹಿ ಹಾಕಿದ್ದರು. ಜೊತೆಗೆ ಜಾತಿ ಗಣತಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿದರೆ ನಾವು ವಿರೋಧಿಸುತ್ತೇವೆ ಎಂದು ಎಚ್ಚರಿಕೆ ಕೂಡಾ ನೀಡಿದ್ದರು’ ಎಂದು ತಿರುಗೇಟು ನೀಡಿದರು.ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಖರ್ಗೆ, ‘ನಮ್ಮ ಉಪಮುಖ್ಯಮಂತ್ರಿಯೂ ಇದನ್ನು ವಿರೋಧಿಸಿದ್ದಾರೆ. ನೀವು (ಬಿಜೆಪಿ) ಇದನ್ನು ವಿರೋಧಿಸುತ್ತಲೇ ಇದ್ದೀರಿ. ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ಮೇಲ್ವರ್ಗದ ಜನರು ಆಂತರಿಕವಾಗಿ ಒಂದಾಗಿದ್ದೀರಿ. ಅದರಲ್ಲಿ ನೀವು ಇದ್ದೀರಿ, ಅವರೂ ಇದ್ದಾರೆ’ ಎಂದು ಹೇಳಿದರು. ಬಳಿಕ ಪ್ರತಿಕ್ರಿಯಿಸಿದ ಸುಶೀಲ್ ಮೋದಿ, ‘ಖರ್ಗೆ ಅವರಿಗೆ ಧೈರ್ಯವಿದ್ದರೆ, ಜಾತಿ ಗಣತಿ ವರದಿಯನ್ನು ಒಂದು ತಿಂಗಳೊಳಗೆ ಸಾರ್ವಜನಿಕವಾಗಿ ಬಿಡುಗಡೆ ಮಾಡುವುದಾಗಿ ಘೋಷಿಸಿ’ ಎಂದು ಸವಾಲು ಹಾಕಿದರು.
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.