ಖೋಟಾ ನೋಟು ಚಲಾವಣೆ, ಪ್ರಿಂಟ್‌ ಮಾಡೋದು ಸಹ ಭಯೋತ್ಪಾದನೆ!

KannadaprabhaNewsNetwork | Published : Dec 13, 2023 1:00 AM

ಸಾರಾಂಶ

ಪರಿಷ್ಕೃತ ಅಪರಾಧ ಮಸೂದೆ ಮಂಡನೆ. ಭಯೋತ್ಪಾದನೆ ವ್ಯಾಖ್ಯಾನ ಬದಲಾವಣೆ.

ಏನೇನು ಬದಲಾವಣೆ?

- ಮಹಿಳೆ ಮೇಲೆ ದೈಹಿಕ, ಮಾನಸಿಕ ದೌರ್ಜನ್ಯ ಎಸಗಿದರೆ ಕುಟುಂಬಸ್ಥರಿಗೆ 3 ವರ್ಷ ಜೈಲು

- ಕ್ರೌರ್ಯ ಪದಕ್ಕೆ ಹೊಸ ವ್ಯಾಖ್ಯಾನ ಸೇರ್ಪಡೆ

- ಅತ್ಯಾಚಾರ ಸಂತ್ರಸ್ತರ ಗುರುತು ಬಹಿರಂಗಕ್ಕೆ 2 ವರ್ಷ ಜೈಲು ಶಿಕ್ಷೆ

- 3 ಪರಿಷ್ಕೃತ ಅಪರಾಧ ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಿದ ಅಮಿತ್‌ ಶಾ

- ಈ ಮಸೂದೆ ಪಾಸಾದರೆ ಹಳೆಯ ಐಪಿಸಿ, ಸಿಆರ್‌ಪಿಸಿ, ಸಾಕ್ಷ್ಯ ಕಾಯ್ದೆಗಳು ರದ್ದು

-----ನವದೆಹಲಿ: ಖೋಟಾ ನೋಟು ಚಲಾವಣೆ, ಮುದ್ರಣ ಹಾಗೂ ಇಂಥ ಕೃತ್ಯಕ್ಕೆ ಪ್ರಚೋದನೆ ನೀಡುವುದನ್ನು ಭಯೋತ್ಪಾದಕ ಕೃತ್ಯ ಎಂದು ಪರಿಗಣಿಸುವ ಹಾಗೂ ಮಹಿಳೆ ಮೇಲೆ ದೈಹಿಕ ದೌರ್ಜನ್ಯ ಮಾತ್ರವಲ್ಲ, ಮಾನಸಿಕ ದೌರ್ಜನ್ಯ ಎಸಗಿದರೂ ಕುಟುಂಬಸ್ಥರಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸುವ ಪರಿಷ್ಕೃತ ಮಸೂದೆಗಳನ್ನು ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಮಂಡಿಸಿದೆ.ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ದೇಶದ ಹಳೆಯ 3 ಕ್ರಿಮಿನಲ್ ಕಾನೂನುಗಳನ್ನು ಬದಲಿಸುವ 3 ಮಸೂದೆಗಳನ್ನು ಮಂಡಿಸಲಾಗಿತ್ತು. ಆದರೆ ಅವನ್ನು ಹಿಂಪಡೆದು ಸಂಸದೀಯ ಸಮಿತಿಯ ಶಿಫಾರಸುಗಳನ್ನು ಸೇರಿಸಿ, 3 ಪರಿಷ್ಕೃತ ಮಸೂದೆಗಳನ್ನು ಮಂಗಳವಾರ ಗೃಹ ಸಚಿವ ಅಮಿತ್ ಶಾ ಮಂಡಿಸಿದ್ದಾರೆ. ಅದರಲ್ಲಿ ಈ ಮೇಲ್ಕಾಣಿಸಿದ ಮಹತ್ವದ ಅಂಶಗಳಿವೆ.ಗುರುವಾರ ಸದನದಲ್ಲಿ ಇವುಗಳ ಚರ್ಚೆ ನಡೆಯಲಿದ್ದು, ಶುಕ್ರವಾರ ಮತಕ್ಕೆ ಹಾಕಲಾಗುತ್ತದೆ.ಮರುರೂಪಿಸಲಾದ ಭಾರತೀಯ ನ್ಯಾಯ ಸಂಹಿತಾ ಮಸೂದೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮಸೂದೆ ಮತ್ತು ಭಾರತೀಯ ಸಾಕ್ಷಿ ಅಧಿನಿಯಮ ಮಸೂದೆಗಳು ಕ್ರಮವಾಗಿ ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್ ಆ್ಯಕ್ಟ್-1898, ಭಾರತೀಯ ದಂಡ ಸಂಹಿತೆ-1860, ಮತ್ತು ಭಾರತೀಯ ಸಾಕ್ಷ್ಯ ಕಾಯಿದೆ-1872ರ ಸ್ಥಾನ ಅಲಂಕರಿಸಲಿವೆ.48 ತಾಸು ಅಧ್ಯಯನಕ್ಕೆ ಅವಕಾಶ:

ಇವು ಮಹತ್ವದ ಮಸೂದೆಯಾಗಿರುವ ಕಾರಣ ಸಂಸದರಿಗೆ 48 ತಾಸು ಕಾಲ ಅಧ್ಯಯನಕ್ಕೆ ಅವಕಾಶವಿದೆ. ಬಳಿಕ ಮಸೂದೆಗಳ ಮೇಲಿನ ಚರ್ಚೆ ಗುರುವಾರ ನಡೆಯಲಿದೆ, 12 ತಾಸುಗಳ ಚರ್ಚೆಗೆ ಅವಕಾಶ ನೀಡಲಾಗಿದೆ. ಶುಕ್ರವಾರ ಮತದಾನ ನಡೆಯಲಿದೆ ಎಂದು ಸಚಿವ ಅಮಿತ್ ಶಾ ಹೇಳಿದರು.

ಪರಿಷ್ಕೃತ ಮಸೂದೆಯಲ್ಲಿದೆ?:ಭಾರತೀಯ ನ್ಯಾಯ ಸಂಹಿತೆಯಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳ ವಿರುದ್ಧ ಹೋರಾಡಲು ಸರ್ಕಾರವು ಇನ್ನೂ 3 ಹೊಸ ಅಂಶ ಸೇರಿಸಿದೆ.

1. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 113 ರ ಪ್ರಕಾರ, ಖೋಟಾನೋಟು ತಯಾರಿಕೆ, ಕಳ್ಳಸಾಗಣೆ ಮತ್ತು ಚಲಾವಣೆ ಮಾಡಿ ಭಾರತದ ಆರ್ಥಿಕ ಸ್ಥಿರತೆಗೆ ಹಾನಿ ಉಂಟುಮಾಡಿದರೆ ಅದು ಭಯೋತ್ಪಾದಕ ಕೃತ್ಯ ಎನ್ನಿಸಿಕೊಳ್ಳುತ್ತದೆ. ಇಂಥ ಭಯೋತ್ಪಾದಕ ಕೃತ್ಯ ಎಸಗಿದವರಿಗೆ ಗಲ್ಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ವಿಧಿಸುವ ಅವಕಾಶ ಇರಲಿದೆ. ಇದರ ಜತೆಗೆ ಇಂಥ ಕೃತ್ಯಗಳಿಗೆ ಉತ್ತೇಜನ ನೀಡಿದರೆ ಅಥವಾ ಇಂಥ ಕೃತ್ಯ ನಡೆಯುತ್ತಿದೆ ಎಂದು ಗೊತ್ತಿದ್ದೂ ಸುಮ್ಮನಿದ್ದು ಅವುಗಳಿಗೆ ಅವಕಾಶ ನೀಡಿದರೆ, 5 ವರ್ಷಕ್ಕಿಂತ ಕಡಿಮೆ ಇಲ್ಲದ ಸಜೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ.2. ಮಸೂದೆಯ ಹಿಂದಿನ ಆವೃತ್ತಿಯಲ್ಲಿ, ಸೆಕ್ಷನ್ 85 ರ ಪ್ರಕಾರ ಮಹಿಳೆ ಮೇಲೆ ಆಕೆಯ ಪತಿ ಅಥವಾ ಅತ್ತೆ ಅಥವಾ ಕುಟುಂಬ ಸದಸ್ಯರು ಕ್ರೌರ್ಯ ನಡೆಸಿದರೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಅಂಶವಿತ್ತು. ಆದರೆ ಕ್ರೌರ್ಯ ಎಂದರೆ ಏನು ಎಂದು ವಿವರಿಸಿರಲಿಲ್ಲ. ಈಗ ನವೀಕರಿಸಿದ ಮಸೂದೆಯಲ್ಲಿ, ಸೆಕ್ಷನ್ 86 ಅನ್ನು ಹೊಸದಾಗಿ ಸೇರಿಸಲಾಗಿದೆ ಹಾಗೂ ಅದರಲ್ಲಿ ‘ಕ್ರೌರ್ಯ’ ಪದವನ್ನು ವ್ಯಾಖ್ಯಾನಿಸಲಾಗಿದೆ. ಮಹಿಳೆಯ ಮೇಲೆ ದೈಹಿಕ ದೌರ್ಜನ್ಯದ ಜೊತೆಗೆ ಮಾನಸಿಕ ದೌರ್ಜನ್ಯ ಮಾಡಿದರೂ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ತಿಳಿಸಲಾಗಿದೆ.2. ಇನ್ನು 2ನೇ ವಿಭಾಗದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರ ಗುರುತನ್ನು ಅನುಮತಿ ಇಲ್ಲದೆ ಬಹಿರಂಗಪಡಿಸಿದರೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

Share this article