ಕನ್ನಡಪ್ರಭ ವಾರ್ತೆ ವಿಧಾನಸಭೆ
ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಮಂಗಳವಾರ ನಡೆದ ಚರ್ಚೆಯಲ್ಲಿ ಮಾತನಾಡಿದ ಶಾಸಕರು, ತಮ್ಮ ಕ್ಷೇತ್ರ ಹಾಗೂ ಉತ್ತರ ಕರ್ನಾಟಕ ಭಾಗ ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರಲ್ಲದೇ ಪ್ರತ್ಯೇಕ ಕೂಗಿಗೆ ಅವಕಾಶ ನೀಡದೇ ಅಭಿವೃದ್ಧಿಗೆ ಒತ್ತು ನೀಡಿ ಎಂದು ಆಗ್ರಹಿಸಿದರು.
ಪ್ರತಿಸಲದ ಅಧಿವೇಶನದಲ್ಲೂ ಕೊನೆಯ ಎರಡು ದಿನಗಳ ಕಾಲ ಮಾತ್ರ ಕಾಟಾಚಾರಕ್ಕೆ ಎಂಬಂತೆ ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತು ನಡೆಯುತ್ತಿದ್ದ ಚರ್ಚೆ ಈ ಬಾರಿ ಅಧಿವೇಶನದ ಮೊದಲ ವಾರದಲ್ಲೇ ಉತ್ತರ ಕರ್ನಾಟಕ ಹಾಗೂ ಬರದ ಕುರಿತಂತೆ ಚರ್ಚೆಗೆ ಅವಕಾಶ ಕಲ್ಪಿಸಿದ್ದು ವಿಶೇಷ.ಮಂಗಳವಾರ ಪ್ರಶ್ನೋತ್ತರ, ಗಮನ ಸೆಳೆಯುವ ಕಲಾಪ ಹೊರತು ಪಡಿಸಿ ಇಡೀ ದಿನ ಸದನದಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆಯೇ ಚರ್ಚೆ ನಡೆಯಿತು. ಶಾಸಕರೆಲ್ಲರೂ ತಮ್ಮ ತಮ್ಮ ಕ್ಷೇತ್ರಗಳ ಸಮಸ್ಯೆಗಳನ್ನೇ ಗಮನ ಸೆಳೆಯುವ ಮೂಲಕವೇ ಉತ್ತರ ಕರ್ನಾಟಕ ಎಷ್ಟರ ಮಟ್ಟಿಗೆ ಹಿಂದುಳಿದಿದೆ ಎಂಬುದನ್ನು ವಿವರಿಸಿದರು.ಪ್ರತ್ಯೇಕತೆ ಬಾರದಂತೆ ನೋಡಿಕೊಳ್ಳಿ:ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ನಮ್ಮ ಭಾಗ ಬಹಳಷ್ಟು ಹಿಂದುಳಿದಿದೆ. ಉನ್ನತ ಹುದ್ದೆಗಳು ಕೂಡ ಅಲ್ಲಿನವರಿಗೆ ದೊರೆಯುತ್ತವೆ. ಅಭಿವೃದ್ಧಿ ಮತ್ತು ಹುದ್ದೆ ಪಡೆಯುವಲ್ಲಿಯೂ ಹಿಂದೆ ಬಿದ್ದಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಜನ ರೊಚ್ಚಿಗೇಳುತ್ತಾರೆ. ನಿಮಗೆ ಪಾಠ ಕಲಿಸಬಹುದು. ಜತೆಗೆ ಪ್ರತ್ಯೇಕತೆಯ ಕೂಗು ಕೇಳಿ ಬರಬಹುದು. ಅದಕ್ಕೆ ಅವಕಾಶ ನೀಡದೇ ಈ ಭಾಗದ ಅಭಿವೃದ್ಧಿಗೆ ಒತ್ತು ನೀಡಬೇಕೆಂದರು.ಯಾದಗಿರಿ ಶಾಸಕ ಶರಣು ಕಂದಕೂರ ಮಾತನಾಡಿ, ಕಲುಷಿತ ನೀರಿನಿಂದ ಮೂರು ಜನ ಸಾವಿಗೀಡಾಗಿದ್ದಾರೆ ಎಂದರೆ ನಮ್ಮಲ್ಲಿನ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ಶುದ್ಧ ನೀರು ನಮ್ಮ ಭಾಗಕ್ಕೆ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂಬುದು ವಿಪರ್ಯಾಸ ಎಂದು ನೀರಿನ ಸಮಸ್ಯೆ ತೆರೆದಿಟ್ಟರು. ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿನ ಶಾಲೆಗಳಲ್ಲಿನ ಶಿಕ್ಷಕರ ಕೊರತೆ, ಪಿಎಚ್‌ಸಿ ಸೆಂಟರ್‌ಗಳಲ್ಲಿ ವೈದ್ಯರ ಸಮಸ್ಯೆ ಬಿಚ್ಚಿಟ್ಟರು. ಅಲ್ಲದೇ, ಶಿಕ್ಷಣ ಆರೋಗ್ಯ, ಕುಡಿವ ನೀರಿನ ಸಮಸ್ಯೆ ಬಗೆಹರಿಸಿದರೆ ಎಷ್ಟೋ ಸುಧಾರಣೆಯಾಗುತ್ತದೆ ಎಂದರು.ರಾಯಚೂರು ಗ್ರಾಮಾಂತರ ಶಾಸಕ ಬಸವರಾಜ ದದ್ದಲ ಮಾತನಾಡಿ, ಆಲಮಟ್ಟಿ ಡ್ಯಾಂನ ಗೇಟ್ ಎತ್ತರಿಸಿದರೆ ನೀರಾವರಿ ಪ್ರದೇಶ ಹೆಚ್ಚಾಗುತ್ತದೆ. ಇದರಿಂದ ಗುಳೆ ಹೋಗುವುದು ತಪ್ಪುತ್ತದೆ ಎಂದು ಸಲಹೆ ನೀಡಿದರು.ಕಾಗವಾಡ ಶಾಸಕ ರಾಜು ಕಾಗೆ, ಪ್ರತಿವರ್ಷ ಕುಡಿವ ನೀರಿನ ಸಮಸ್ಯೆ ಎದುರಿಸುತ್ತೇವೆ. ಆಗ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ನೀರು ಬಿಡಿ ಎಂದು ಕೇಳಬೇಕಾಗುತ್ತದೆ. ಅವರು ಸೊಲ್ಲಾಪುರ ಹಾಗೂ ಜತ್ತ ಕೃಷ್ಣಾ ನದಿಯಿಂದ ನೀರು ಕೊಡಿ ಎಂದು ಹೇಳುತ್ತಾರೆ. ಅದಕ್ಕೆ ಈ ಸಂಬಂಧ ಒಪ್ಪಂದ ಮಾಡಿಕೊಳ್ಳಬೇಕು. ಈ ಕೆಲಸ ಸರ್ಕಾರದಿಂದ ಆಗಬೇಕು ಎಂದರು.