;Resize=(412,232))
ಚೆನ್ನೈ: ಸತತ 60 ವರ್ಷಗಳಿಂದ ದ್ರಾವಿಡ ಪಕ್ಷಗಳಾದ ಡಿಎಂಕೆ, ಅಣ್ಣಾಡಿಎಂಕೆ ಪಕ್ಷಗಳ ರಾಜಕೀಯದ ಅಂಗಣವಾಗಿದ್ದ ತಮಿಳುನಾಡಿನಲ್ಲಿ ಹೊಸ ನಾಯಕನ ಉದಯವಾಗಿದೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರದ ಅಬ್ಬರ, ವಿಪಕ್ಷ ಅಣ್ಣಾಡಿಎಂಕೆ ಭಾರೀ ಪ್ರತಿಸ್ಪರ್ಧೆಯನ್ನು ಮೆಟ್ಟಿನಿಲ್ಲುವಲ್ಲಿ ಯಶಸ್ವಿಯಾಗಿರುವ ನಟ, ಟಿವಿಕೆ ಪಕ್ಷದ ಅಧ್ಯಕ್ಷ ವಿಜಯ್, ತಮ್ಮ ಚೊಚ್ಚಲ ಚುನಾವಣೆಯಲ್ಲೇ ಭರ್ಜರಿ ಗೆಲುವು ಸಾಧಿಸಿ ಅಧಿಕಾರದತ್ತ ಹೆಜ್ಜೆ ಹಾಕಿದ್ದಾರೆ.
ಆದರೆ 234 ಸ್ಥಾನಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ ಅಗತ್ಯವಾದ 118 ಸ್ಥಾನಗಳು ಯಾವುದೇ ಪಕ್ಷಕ್ಕೂ ಸಿಗದೇ ಇರುವ ಕಾರಣ ಅತಂತ್ರ ವಿಧಾನಸಭೆ ರಚನೆಯಾಗಿದೆ. ಆದಾಗ್ಯೂ ಕಾಂಗ್ರೆಸ್ ಹಾಗೂ ಸಣ್ಣಪುಟ್ಟ ಪಕ್ಷಗಳ ಜತೆ ಅವರು ಸಂಪರ್ಕದಲ್ಲಿದ್ದು, ಬಹುಮತಕ್ಕೆ ಯತ್ನ ನಡೆಸಿದ್ದಾರೆ ಎಂದು ಗೊತ್ತಾಗಿದೆ.
ಹಾಲಿ ಅಧಿಕಾರದಲ್ಲಿದ್ದ ಡಿಎಂಕೆಯಲ್ಲಿ ಮುಖ್ಯಮಂತ್ರಿ ಸ್ಟಾಲಿನ್ ಆದಿಯಾಗಿ ಹಲವು ಸಚಿವರು ಆಘಾತಕಾರಿ ಸೋಲು ಕಂಡಿದ್ದಾರೆ. ಪಕ್ಷ 2ನೇ ಸ್ಥಾನಕ್ಕೆ ಕುಸಿದಿದೆ. ಮತ್ತೊಂದೆಡೆ ಅಧಿಕಾರಕ್ಕೆ ಮರಳುವ ಆಶಯದಲ್ಲಿದ್ದ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಅಣ್ಣಾಡಿಎಂಕೆ ಮೂರನೇ ಸ್ಥಾನ ತಲುಪಿದೆ. ಸರ್ಕಾರ ರಚನೆಗಾಗಿ ವಿಜಯ್, ಚುನಾವಣೆ ವೇಳೆತ ತಾವು ಬಹುವಾಗಿ ಟೀಕಿಸಿದ್ದ ಡಿಎಂಕೆ ಬೆಂಬಲ ಪಡೆಯುತ್ತಾರೋ ಅಥವಾ ಸೈದ್ಧಾಂತಿಕವಾಗಿ ಸಾಕಷ್ಟು ಭಿನ್ನಾಭಿಪ್ರಾಯ ಹೊಂದಿರುವ ಬಿಜೆಪಿ ಜೊತೆ ನಂಟು ಹೊಂದಿರುವ ಅಣ್ಣಾಡಿಎಂಕೆ ಜತೆಗೆ ಮೈತ್ರಿ ಮಾಡಿಕೊಳ್ಳುತ್ತಾರೋ ಎಂಬ ಕುತೂಹಲ ಇದೆ.
ಆಧಿಪತ್ಯ ಅಂತ್ಯ: ಕಾಂಗ್ರೆಸ್ ಸರ್ಕಾರ ಪತನಗೊಳಿಸಿ 1967ರಲ್ಲಿ ಸಿ.ಎನ್.ಅಣ್ಣಾದೊರೈ ನಾಯಕತ್ವದ ಡಿಎಂಕೆ ಅಧಿಕಾರಕ್ಕೆ ಬರುವುದರೊಂದಿಗೆ ತಮಿಳ್ನಾಡಲ್ಲಿ ಕೇವಲ ಡಿಎಂಕೆ ಮತ್ತು ಅಣ್ಣಾಡಿಎಂಕೆ ಪಕ್ಷಗಳದ್ದೇ ಆಧಿಪತ್ಯವಾಗಿತ್ತು. ಉಳಿದ ಪಕ್ಷಗಳಿಗೇನಿದ್ದರೂ ಮೈತ್ರಿಪಕ್ಷದ ಭಾಗ್ಯವಾಗಿತ್ತು. ಆದರೆ ತಮ್ಮನ್ನು ತಾವು ಮಾಡ್ರನ್ ದ್ರಾವಿಡ ನಾಯಕ ಎಂದು ಬಿಂಬಿಸಿಕೊಂಡು 2 ವರ್ಷಗಳ ಹಿಂದಷ್ಟೇ ರಾಜಕೀಯ ಪಕ್ಷ ಕಟ್ಟಿದ್ದ ವಿಜಯ್, ಯಾರೂ ಊಹಿಸದ ಸಾಧನೆ ಮಾಡಿ ಎಲ್ಲರನ್ನೂ ಅಚ್ಚರಿಗೆ ಗುರಿ ಮಾಡಿದ್ದಾರೆ.
ಇತರೆ ಪಕ್ಷಗಳಂತೆ ಹಲವು ಗ್ಯಾರಂಟಿಗಳು, ಮಹಿಳೆಯರು, ಯುವಸಮುದಾಯ ಗುರಿಯಾಗಿಸಿಕೊಂಡು ಘೋಷಿಸಿದ ಹಲವು ಚುನಾವಣಾ ಪ್ರಣಾಳಿಕೆಗಳ ಜೊತೆಗೆ, ಕ್ರೈಸ್ತ, ಅಲ್ಪಸಂಖ್ಯಾತ, ಹಿಂದುಳಿದ ಸಮುದಾಯ, ಮಹಿಳೆಯರು, ಯುವಸಮೂಹದ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದು ವಿಜಯ್‌ಗೆ ಅಧಿಕಾರ ತಂದುಕೊಟ್ಟಿದೆ. ಇದರ ಜೊತೆಗೆ ಡಿಎಂಕೆ ಮತ್ತು ಅಣ್ಣಾಡಿಎಂಕೆ ಹೊರತಾದ, ಆದರೆ ಸ್ಥಳಿಯವಾದುದೇ ಆದಂತ ಪರ್ಯಾಯ ನಾಯಕತ್ವಕ್ಕೆ ಹುಡುಕಾಡುತ್ತಿದ್ದ ಜನರಿಗೆ ವಿಜಯ್ ಸೂಕ್ತವಾಗಿ ಕಂಡಿದ್ದು ಟಿವಿಕೆಗೆ ಗೆಲುವು ತಂದುಕೊಟ್ಟಿದೆ ಎಂದು ವಿಶ್ಲೇಷಿಸಲಾಗಿದೆ.
ಇನ್ನೊಂದೆಡೆ ಕುಟುಂಬ ರಾಜಕಾರಣ, ಭ್ರಷ್ಟಾಚಾರ, ಹೊಸತನವಿಲ್ಲದ ಆಡಳಿತ, ಆಡಳಿತವಿರೋಧಿ ಅಲೆಗೆ ಸಿಕ್ಕ ಡಿಎಂಕೆ ಆಘಾತಕಾರಿ ಸೋಲುಕಂಡಿದೆ. ಬಹುತೇಕ ಸಮೀಕ್ಷೆಗಳು ಮರಳಿ ಡಿಎಂಕೆ ಗೆಲುವಿನ ಸುಳಿವು ನೀಡಿದ್ದ ಕಾರಣ, ಪಕ್ಷ ಸಂಭ್ರಮಾಚರಣೆಗೂ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಸೋಮವಾರ ಬೆಳಗ್ಗೆ ಕೆಲ ಹೊತ್ತು ಮತ ಎಣಿಕೆ ವೇಳೆ ಮುನ್ನಡೆ ಸಾಧಿಸಿದ್ದು ಬಿಟ್ಟರೆ ಮತ್ತೆ ಕಂಡುಬಂದಿದ್ದು ವಿಜಯ್ ನಾಗಾಲೋಟ. ಅದನ್ನು ಕಟ್ಟಿಹಾಕಲು ಡಿಎಂಕೆ ಪೂರ್ಣ ವಿಫಲವಾಯ್ತು.
ಇನ್ನೊಂದೆಡೆ ಡಿಎಂಕೆಗೆ ಪರ್ಯಾಯವೆಂದೇ ಬಿಂಬಿತ ಅಣ್ಣಾಡಿಎಂಕೆ ತನ್ನ ಆಂತರಿಕ ಬಿಕ್ಕಟ್ಟು, ಪ್ರಭಾವಿ ನಾಯಕತ್ವದ ಕೊರತೆ ಮತ್ತು ವಿಜಯ್‌ರ ಅಲೆಯ ಅಬ್ಬರಕ್ಕೆ ಸಿಕ್ಕಿ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಗಿ ಬಂತು.
ಮೂರೂ ಪಕ್ಷಗಳು ಭರ್ಜರಿ ಗ್ಯಾರಂಟಿ ಘೋಷಣೆ ಮೂಲಕ ಜನರ ಗಮನ ಸೆಳೆಯುವ ಯತ್ನ ಮಾಡಿದ್ದವಾದರೂ, ಪರ್ಯಾಯ, ಹೊಸತನ, ‘ಜನ’ ನಾಯಕತ್ವದ ಹುಡುಕಾಟ ವಿಜಯ್ ಅವರಿಗೆ ಜಯದ ಮಾಲೆ ಹಾಕಿದೆ.
ಸ್ಥಾಪನೆಯಾದ ಎರಡೇ ವರ್ಷಗಳಲ್ಲಿ ನಟ ವಿಜಯ್ ಅವರ ಟಿವಿಕೆ ಆಡಳಿತಾರೂಢ ಡಿಎಂಕೆಯನ್ನು ಧೂಳಿಪಟ ಮಾಡಿದೆ. ಈ ಮೂಲಕ ಚುನಾವಣೆಗೆ ಸ್ಪರ್ಧಿಸಿದ ಮೊದಲ ಬಾರಿಗೇ ವಿಜಯ್ ತಮಿಳುನಾಡಿದ ಮುಖ್ಯಮಂತ್ರಿಯಾಗುವತ್ತ ದಾಪುಗಾಲು ಇಟ್ಟಿದ್ದಾರೆ. ರಾಜ್ಯದಲ್ಲಿ ಸ್ಪಷ್ಟ ಬಹುಮತಕ್ಕೆ 118 ಸ್ಥಾನಗಳು ಬೇಕು. ಟಿವಿಕೆ ಇದಕ್ಕೆ ಹತ್ತಿರದಲ್ಲಿದೆ. ಕಾಂಗ್ರೆಸ್ ಪಕ್ಷ ಹಾಗೂ ಇತರ ಸಣ್ಣಪುಟ್ಟ ಪಕ್ಷಗಳ ಜತೆ ಅವರು ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಸೂಕ್ತ ಮೈತ್ರಿಯೊಂದಿಗೆ ಸರ್ಕಾರ ರಚಿಸಿ, ವಿಜಯ್ ಸಿಎಂ ಕುರ್ಚಿಯನ್ನು ಅಲಂಕರಿಸುವುದು ಬಹುತೇಕ ಖಚಿತವಾಗಿದೆ.
ಡಿಎಂಕೆ, ಎಐಎಡಿಎಂಕೆಗೆ ಪರ್ಯಾಯ ನಾಯಕನಾಗಿ ಗುರುತಿಸಿಕೊಳ್ಳುವಲ್ಲಿ ವಿಜಯ್ ಯಶಸ್ವಿ
ದಲಿತ, ಕ್ರೈಸ್ತ, ಮಹಿಳೆಯರು, ಯುವಸಮೂಹ ಮತ ಸೆಳೆಯುವಲ್ಲಿ ಯಶಸ್ವಿಯಾದ ಟಿವಿಕೆ ಪಕ್ಷ
ಡಿಎಂಕೆ ಕುಟುಂಬ ರಾಜಕಾರಣ, ಸರ್ಕಾರ ಭ್ರಷ್ಟಾಚಾರದ ಬಗ್ಗೆ ಜನರ ಗಮನ ಸೆಳೆದ ವಿಜಯ್
ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗದ ಮತ ಸೆಳೆಯುವಲ್ಲಿ ಟಿವಿಕೆ ಹೆಚ್ಚಿನ ಯಶಸ್ಸು
ಮೈತ್ರಿ ಆಫರ್ ಹೊರತಾಗಿಯೂ ಟಿವಿಕೆ ಏಕಾಂಗಿಯಾಗಿ ಸ್ಪರ್ಧಿಸಿ ಭಿನ್ನವಾಗಿ ಗುರುತಿಸಿಕೊಂಡಿದ್ದು
ಚಿತ್ರರಂಗದಲ್ಲಿ ತನಗಿದ್ದ ಬೆಂಬಲವನ್ನು ಮತವಾಗಿ ಪರಿವರ್ತಿಸುವಲ್ಲಿ ವಿಜಯ್ ಯಶಸ್ವಿಯಾಗಿದ್ದು
ಸಾಂಪ್ರದಾಯಿಕ ದ್ರಾವಿಡ ಪರಿಕಲ್ಪನೆ ಬಿಟ್ಟು, ಆಧುನಿಕ ದ್ರಾವಿಡ ಪರಿಕಲ್ಪನೆ ಬಗ್ಗೆ ವಿಜಯ್ ಮಾತು
ಡಿಎಂಕೆ, ಬಿಜೆಪಿಯನ್ನು ದೂಷಿಸಿತೇ ಹೊರತೂ ವಿಜಯ್ ಪಕ್ಷ ಟೀಕಿಸಲು ಅಸ್ತ್ರಗಳೇ ಇರಲಿಲ್ಲ
ಆಡಳಿತ ವಿರೋಧಿ ಅಲೆ ಮೆಟ್ಟಿನಿಲ್ಲುವಲ್ಲಿ ಡಿಎಂಕೆ ವಿಫಲ. ಅತಿ ಆತ್ಮವಿಶ್ವಾಸ ಸೋಲಿಗೆ ಕಾರಣ
ವಿಭಜನೆಯಿಂದ ಎಐಎಡಿಎಂಕೆಗೆ ಹೊಡೆತ. ಡಿಎಂಕೆಗೆ ಪರ್ಯಾಯವಾಗುವಲ್ಲಿ ಈ ಬಾರಿ ವಿಫಲ
* ರಾಜಕಾರಣದಲ್ಲೂ ವಿಜಯ್ ದಳಪತಿ
- ಎಂಜಿಆರ್ ನಂತರ ಪಕ್ಷ ಕಟ್ಟಿ ಅಧಿಕಾರಕ್ಕೇರಿದ ಮೊದಲ ನಟ ವಿಜಯ್
- 60 ವರ್ಷದ ಬಳಿಕ ತ.ನಾಡಲ್ಲಿ ದ್ರಾವಿಡ ಪಕ್ಷಗಳ ಸತತ ಆಟಕ್ಕೆ ಬ್ರೇಕ್
ಡಿಎಂಕೆಯಿಂದ ಅಮಾನತುಗೊಂಡ ನಂತರ ಎಂ.ಜಿ.ರಾಮಚಂದ್ರನ್ ಅವರು ಅಣ್ಣಾಡಿಎಂಕೆ ಎಂಬ ಹೊಸ ಪಕ್ಷವನ್ನು ಕಟ್ಟಿ ತಮಿಳುನಾಡನ್ನು ಆಳಿದ್ದು ಇತಿಹಾಸ. ಅದಾದ ಬಳಿಕ ತಮಿಳುನಾಡಿನಲ್ಲಿ ವಿಜಯಕಾಂತ್, ಕಮಲಹಾಸನ್‌ರಂತಹ ಪ್ರಸಿದ್ಧ ನಟರು ಪಕ್ಷ ಕಟ್ಟಿದರೂ ಅಧಿಕಾರ ಗಗನಕುಸುಮವೇ ಆಯಿತು. ಆದರೆ 50 ವರ್ಷಗಳ ಬಳಿಕ ವಿಜಯ್ ತಮಿಳುನಾಡಿನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಎಂಜಿಆರ್ ಬಳಿಕ, ಪಕ್ಷ ಕಟ್ಟಿ ಮೊದಲ ಹಂತದಲ್ಲೇ ಅಧಿಕಾರಕ್ಕೆ ತಂದ ಮೊದಲ ಸಿನಿಮಾ ನಟ ಎಂಬ ಚರಿತ್ರೆ ನಿರ್ಮಿಸಿದ್ದಾರೆ. ಜಯಲಲಿತಾ ಅವರೂ ಸಿನಿಮಾ ನಟಿ. ಅವರು ಚುನಾವಣೆ ಎದುರಿಸಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರಾದರೂ, ಅಣ್ಣಾಡಿಎಂಕೆ ಎಂಬುದು ಅವರು ಕಟ್ಟಿದ ಪಕ್ಷವಲ್ಲ. ಎಂಜಿಆರ್‌ರಿಂದಾಗಿ ಅದಾಗಲೇ ದೈತ್ಯವಾಗಿ ಬೆಳೆದಿದ್ದ ಪಕ್ಷವನ್ನು ಅವರು ಮುಂದುವರಿಸಿಕೊಂಡು ಹೋದವರು.
ಕಳೆದ 60 ವರ್ಷಗಳಿಂದ ತಮಿಳುನಾಡಿನಲ್ಲಿ ಡಿಎಂಕೆ ಹಾಗೂ ಅಣ್ಣಾಡಿಎಂಕೆಯದ್ದೇ ಪಾರುಪತ್ಯ. ಇದೇ ಮೊದಲ ಬಾರಿಗೆ ಆ ಎರಡೂ ಪಕ್ಷಗಳಿಗೆ ಸೇರಿಲ್ಲದ ವ್ಯಕ್ತಿಯೊಬ್ಬರು ತಮಿಳುನಾಡು ಮುಖ್ಯಮಂತ್ರಿಯಾಗುತ್ತಿದ್ದಾರೆ.
ಎರಡು ವರ್ಷದ ಹಿಂದೆ ವಿಜಯ್ ಪಕ್ಷ ಕಟ್ಟಿ, ಇದೆಲ್ಲವನ್ನೂ ಸಾಕಾರಗೊಳಿಸಿಕೊಂಡರು ಎಂದು ಹಲವು ವಿಶ್ಲೇಷಕರು ಹೇಳುತ್ತಿದ್ದಾರೆ. ಆದರೆ, ವಿಜಯ್ ಅವರ ರಾಜಕೀಯ ಪ್ರಯತ್ನಕ್ಕೆ ಮೊದಲ ಬುನಾದಿ ಬಿದ್ದಿದ್ದು 2 ವರ್ಷಗಳ ಹಿಂದೆ ಅಲ್ಲ. 2009ರಲ್ಲೇ!
ಭವಿಷ್ಯದಲ್ಲಿ ರಾಜಕೀಯ ಪ್ರವೇಶಿಸಬೇಕೆಂಬ ದೂರದೃಷ್ಟಿಯಿಂದಲೇ 2009ರಲ್ಲಿ ವಿಜಯ್ ಅವರು ತಮ್ಮ ಅಭಿಮಾನಿ ಸಂಘಗಳನ್ನು ವಿಜಯ್ ಮಕ್ಕಳ ಇಯಕ್ಕಂ (ಜನರ ಆಂದೋಲನ) ಎಂದು ಬದಲಿಸಿದರು. ಅವರ ಉದ್ದೇಶ ಜನಸೇವೆಯಾಗಿತ್ತು. ಶೈಕ್ಷಣಿಕ ನೆರವು, ಪರಿಹಾರ ಕಾರ್ಯಗಳನ್ನು ಆ ಆಂದೋಲನದ ಮೂಲಕ ಮಾಡಲಾಯಿತಾದರೂ, ಅದೆಲ್ಲವೂ ನಡೆದಿತ್ತು ಚುನಾವಣೆ ನಡೆಯುವ ಬೂತ್‌ಗಳನ್ನು ಗಮನದಲ್ಲಿರಿಸಿಕೊಂಡೇ.
2011ರಲ್ಲಿ ಬಹಿರಂಗವಾಗಿ ವಿಜಯ್ ಅವರು ಜಯಲಲಿತಾ ನೇತೃತ್ವದ ಅಣ್ಣಾಡಿಎಂಕೆಗೆ ಬೆಂಬಲ ಘೋಷಿಸಿ, ರಾಜಕೀಯದ ಹವಾಮಾನ ಪರೀಕ್ಷೆಗೆ ಇಳಿದರು. ಅದಾದ ಬಳಿಕ ವಿಜಯ್ ಅವರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ರಾಜಕೀಯ ವ್ಯವಸ್ಥೆಗೆ ಟಾಂಗ್ ಇರುತ್ತಿತ್ತು. 2019ರಲ್ಲಿ ಸಿಎಎ ವಿರೋಧಿಸಿ ಅವರು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಸಿನಿಮಾ ಕಾರ್ಯಕ್ರಮಗಳು, ಸಭೆ- ಸಮಾರಂಭಗಳಲ್ಲಿ ನೀಟ್ ಪರೀಕ್ಷೆ, ನಿರುದ್ಯೋಗ, ಭ್ರಷ್ಟಾಚಾರ, ಆಡಳಿತದಂತಹ ವಿಷಯಗಳ ಬಗ್ಗೆ ಅವರು ದನಿ ಎತ್ತಲಾರಂಭಿಸಿದರು. ಆಗಲೇ ಅವರು ರಾಜಕೀಯ ಪ್ರವೇಶಿಸುವ ಸ್ಪಷ್ಟ ಸುಳಿವುಗಳು ಲಭಿಸಿದ್ದವು.
2021ರಲ್ಲಿ ವಿಜಯ್ ಮಕ್ಕಳ್ ಇಯಕ್ಕಂ ನೇರವಾಗಿ ಸ್ಥಳೀಯ ಸಂಸ್ಥೆ ಚುನಾವಣೆ ಕಣಕ್ಕೆ ಇಳಿದು, ಅದೃಷ್ಟ ಪರೀಕ್ಷೆಗೆ ಇಳಿಯಿತು. ಸಾಕಷ್ಟು ಮಂದಿ ಗೆದ್ದರು. ಆಗ ವಿಜಯ್‌ಗೆ ಖಾತ್ರಿಯಾಯಿತು. ತಮ್ಮ ಅಭಿಮಾನಿಗಳು ನೋಡಲಷ್ಟೇ ಬರುತ್ತಿಲ್ಲ, ತಾವು ರಾಜಕೀಯ ಪ್ರವೇಶಿಸಿದರೆ ಬೆಂಬಲಿಸಲು ಸಿದ್ಧರಿದ್ದಾರೆ ಎಂಬ ವಿಷಯ.
2024ರಲ್ಲಿ ತಮಿಳಿಗ ವೆಟ್ರಿ ಕಳಗಂ ಎಂಬ ಪಕ್ಷವನ್ನು ಸ್ಥಾಪಿಸಿದರು. ಅಷ್ಟರಲ್ಲಿ ಅವರಲ್ಲಿ ರಾಜಕೀಯ ಪ್ರವೇಶ ಬಗ್ಗೆ ಸ್ಪಷ್ಟತೆ ಇತ್ತು. 2026ರ ಚುನಾವಣೆಯೇ ಗುರಿಯಾಗಿತ್ತು. ಡಿಎಂಕೆ- ಅಣ್ಣಾಡಿಎಂಕೆಗೆ ತಮ್ಮ ಪಕ್ಷ ಪರ್ಯಾಯ ಪಕ್ಷವಾಗಿರಬೇಕು ಎಂಬ ನಿಲುವಿತ್ತು.
ವಿಜಯ್ ರಾಜಕೀಯ ಪ್ರವೇಶಿಸಿದರೂ ಅನನುಭವಿ, ಸಿನಿಮಾ ನಟ, ಎಷ್ಟು ದಿನ ಇರುತ್ತಾರೋ ಎಂಬ ಸಂದೇಹ ಇತ್ತು. ಅದನ್ನು ಹೋಗಲಾಡಿಸಲು ಅವರು ಇನ್ನು ಸಿನಿಮಾ ಮಾಡುವುದಿಲ್ಲ ಎಂದು ಘೋಷಿಸಿದರು. ಅಷ್ಟರಲ್ಲಿ ಕರೂರಿನಲ್ಲಿ 40 ಮಂದಿಯ ಬಲಿ ಪಡೆದ ಕಾಲ್ತುಳಿತ ವಿಜಯ್‌ಗೆ ದೊಡ್ಡ ಹಿನ್ನಡೆ ಎಂದೇ ಭಾವಿಸಲಾಯಿತು. ಹಿನ್ನಡೆ ಎಂದು ಅದನ್ನು ನಂಬಿದವರಿಗೆ, ಆ ಘಟನೆಯಿಂದ ಹೋದ ಸಂದೇಶ ಗೊತ್ತಾಗಲಿಲ್ಲ! ಕಾಲ್ತುಳಿತ ಘಟನೆಯನ್ನು ವಿಜಯ್ ನಿರ್ವಹಿಸಿದ ರೀತಿ, ಅವರೊಬ್ಬ ಉತ್ತಮ ಆಡಳಿತಗಾರರಾಗಬಹುದು ಎಂಬ ನಂಬಿಕೆಯನ್ನು ಜನರಲ್ಲಿ ಬಿತ್ತಿತು.
ಕಳೆದ 2 ವರ್ಷಗಳಲ್ಲಿ ವಿಜಯ್ ಪ್ರಚಾರವನ್ನಷ್ಟೇ ಮಾಡಲಿಲ್ಲ. ತಮ್ಮ ಅಭಿಮಾನಿ ಸಂಘಗಳನ್ನು ಸಕ್ರಿಯ ರಾಜಕೀಯಕ್ಕೆ ದೂಡಿದರು. ಬೂತ್, ಜಿಲ್ಲೆ, ವಿಧಾನಸಭಾ ಕ್ಷೇತ್ರವಾರು ಮಟ್ಟದ ಹೊಣೆಗಾರಿಕೆ ನೀಡಿದರು. ಶಿಕ್ಷಣ, ನಿರುದ್ಯೋಗ, ಭ್ರಷ್ಟಾಚಾರ, ಸಾಂಸ್ಥಿಕ ಹೊಣೆಗಾರಿಕೆ ಕುರಿತು ಭರವಸೆ ನೀಡಿದರು. ಹೊಸ ಪ್ರಚಾರ ವಿಧಾನಗಳನ್ನು ಬಳಸಿಕೊಂಡರು. ಅದೆಲ್ಲವೂ ಈಗ ಫಲ ನೀಡಿದೆ. ತಮಿಳುನಾಡು ರಾಜಕೀಯದಲ್ಲಿ ಹೊಸ ಸ್ಟಾರ್ ಉದಯಕ್ಕೆ ಕಾರಣವಾಗಿದೆ.