ಮೇಘಾಲಯ ರಾಜ್ಯಪಾಲರಾಗಿ ನೇಮಕ : ಸಿಮೆಂಟ್ ಅಂಗಡಿಯಿಂದ ರಾಜಭವನವರೆಗೆ ವಿಜಯಶಂಕರ್ ಯಾತ್ರೆ

KannadaprabhaNewsNetwork | Updated : Jul 29 2024, 04:13 AM IST

ಸಾರಾಂಶ

ರಾಜ್ಯದ ಕುರುಬ ಸಮುದಾಯದ ನಾಯಕ, ಮಾಜಿ ಸಚಿವ ಸಿ.ಎಚ್. ವಿಜಯಶಂಕರ್ ಅವರನ್ನು ಮೇಘಾಲಯ ರಾಜ್ಯಪಾಲರಾಗಿ ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆದೇಶಿಸಿದ್ದಾರೆ.

 ಮೈಸೂರು : ರಾಜ್ಯದ ಕುರುಬ ಸಮುದಾಯದ ನಾಯಕ, ಮಾಜಿ ಸಚಿವ ಸಿ.ಎಚ್. ವಿಜಯಶಂಕರ್ ಅವರನ್ನು ಮೇಘಾಲಯ ರಾಜ್ಯಪಾಲರಾಗಿ ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆದೇಶಿಸಿದ್ದಾರೆ.

ಕನ್ನಡಪ್ರಭ ಜತೆಗೆ ಭಾನುವಾರ ಸಂತಸ ಹಂಚಿಕೊಂಡ ವಿಜಯಶಂಕರ್ ಅವರು, ಶನಿವಾರ ಬೆಳಗ್ಗೆ ಪ್ರಧಾನಮಂತ್ರಿ ಅವರ ಕಾರ್ಯಾಲಯದಿಂದ ದೂರವಾಣಿ ಕರೆ ಮಾಡಿ ಶುಭಸುದ್ದಿ ಬರಲಿದೆ ಎಂದು ತಿಳಿಸಿದ್ದರು. ಆದರೆ, ರಾಜ್ಯಪಾಲರ ಹುದ್ದೆ ಒಲಿಯಲಿದೆ ಎಂದು ಗೊತ್ತಿರಲಿಲ್ಲ. ಶನಿವಾರ ತಡರಾತ್ರಿ ರಾಷ್ಟ್ರಪತಿ ಅವರು ನನ್ನನ್ನು ಮೇಘಾಲಯ ರಾಜ್ಯಪಾಲ ಹುದ್ದೆಗೆ ನಿಯೋಜಿಸಿದ್ದಾರೆ. ಅಧಿಕೃತ ಆದೇಶ ಕೈಸೇರಿದ ಕೂಡಲೇ ಮೇಘಾಲಯಕ್ಕೆ ತೆರಳಿ ಅಧಿಕಾರ ವಹಿಸಿಕೊಳ್ಳುವೆ. ನೇಮಕಕ್ಕೆ ಕಾರಣವಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವೆ ಎಂದು ಹೇಳಿದರು.

ಹಾವೇರಿಯಿಂದ ಮೈಸೂರಿಗೆ ವಲಸೆ:

ಮೂಲತಃ ಹಾವೇರಿ ಜಿಲ್ಲೆಯವರಾದ ಸಿ.ಎಚ್.ವಿಜಯಶಂಕರ್ ಅವರು ರಾಣೆಬೆನ್ನೂರಿನ ಮಾಕೂರಿನಲ್ಲಿ 1956ರಲ್ಲಿ ಜನಿಸಿದರು. ಹುಣಸೂರಿನಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿದ್ದ ಅವರ ಭಾವ ತೀರಿಕೊಂಡಾಗ ಅಕ್ಕನ ಕುಟುಂಬಕ್ಕೆ ನೆರವಾಗಲು ಮೈಸೂರು ಜಿಲ್ಲೆಗೆ ವಲಸೆ ಬಂದರು. ಆರಂಭದಲ್ಲಿ ಸಿಮೆಂಟ್ ಅಂಗಡಿ ನಡೆಸುತ್ತಿದ್ದ ವಿಜಯಶಂಕರ್ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡು ಯುವ ಘಟಕದ ಅಧ್ಯಕ್ಷರಾದರು.

ರಾಜಕೀಯ ಹಿನ್ನೆಲೆ:

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ವಿಜಯಶಂಕರ್ ಅವರು 1991ರಲ್ಲಿ ಹುಣಸೂರು ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡರು. 1994ರ ಚುನಾವಣೆಯಲ್ಲಿ ಗೆದ್ದು ಶಾಸಕರಾದರು. 1998ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ‘ಕಮಲ’ ಅರಳಿಸಿದರು. ಆದರೆ, 1999ರ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಎದುರು ಸೋತರು. 2004ರಲ್ಲಿ ಗೆಲುವು ಸಾಧಿಸಿ ಎರಡನೇ ಬಾರಿಗೆ ಸಂಸದರಾದರು. 2009ರಲ್ಲಿ ಸೋಲು ಕಂಡ ವಿಜಯಶಂಕರ್ ಅವರು, ಬಿ.ಎಸ್.ಯಡಿಯೂರಪ್ಪ ಸರ್ಕಾರದಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಸಣ್ಣ ಕೈಗಾರಿಕೆ ಹಾಗೂ ಅರಣ್ಯ ಸಚಿವರಾಗಿ ಸೇವೆ ಸಲ್ಲಿಸಿದರು.

ಬಿಜೆಪಿ 2014ರಲ್ಲಿ ಪತ್ರಕರ್ತ ಪ್ರತಾಪ್ ಸಿಂಹ ಅವರಿಗೆ ಮೈಸೂರು ಟಿಕೆಟ್ ನೀಡಿದ್ದರಿಂದ ವಿಜಯಶಂಕರ್ ಅವರು ಹಾಸನದಿಂದ ಸ್ಪರ್ಧಿಸಿ ಸೋತರು. 2018ರಲ್ಲಿ ಪಿರಿಯಾಪಟ್ಟಣದಿಂದ ಬಿಜೆಪಿ ಟಿಕೆಟ್ ಸಿಗದ್ದಕ್ಕೆ ಸಿದ್ದರಾಮಯ್ಯ ಮೂಲಕ ಕಾಂಗ್ರೆಸ್ ಸೇರಿದರು. 2019ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಬಿಜೆಪಿಯ ಪ್ರತಾಪ್ ಸಿಂಹ ಎದುರು ಸೋತರು. ಇದರಿಂದ ನಿರಾಶರಾದ ವಿಜಯಶಂಕರ್ ಅವರು ಹಲವು ಸ್ಥಾನಗಳನ್ನು ನೀಡಿದ ಬಿಜೆಪಿಗೆ ಮರಳಿ 2023ರಲ್ಲಿ ಪಿರಿಯಾಪಟ್ಟಣದಿಂದ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದರು. ಇಲ್ಲಿಗೆ ತಮ್ಮ ರಾಜಕೀಯ ಭವಿಷ್ಯ ಮುಗಿಯಿತು ಎಂದೇ ಭಾವಿಸಿದ್ದ ವಿಜಯಶಂಕರ್ ಅವರಿಗೆ ರಾಜ್ಯಪಾಲ ಹುದ್ದೆ ಒಲಿದು ಬಂದಿದೆ.

ರಾಜ್ಯಪಾಲ ಹುದ್ದೆ ಅಲಂಕರಿಸಿದ ಕರ್ನಾಟಕದ ನಾಯಕರು

ವಿಜಯಶಂಕರ್‌ ಅವರು ಮೇಘಾಲಯ ರಾಜ್ಯಪಾಲರಾಗಿ ನೇಮಕವಾಗುವ ಮೂಲಕ ಅವಿಭಜಿತ ಮೈಸೂರು ಜಿಲ್ಲೆಯಿಂದ ಬಿ.ರಾಚಯ್ಯ ಅವರ ನಂತರ ರಾಜ್ಯಪಾಲದ ಎರಡನೇಯವರು ಎನ್ನಿಸಿದ್ದಾರೆ. ಸ್ವಾತಂತ್ರ್ಯ ಬಳಿಕ ಮೈಸೂರಿನ ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ್‌ ಅವರು ಕರ್ನಾಟಕ ಹಾಗೂ ತಮಿಳುನಾಡಿನ ರಾಜ್ಯಪಾಲರಾಗಿದ್ದರು. ನಂತರ ಬಿ.ರಾಚಯ್ಯ ಹಿಮಾಚಲಪ್ರದೇಶ ಹಾಗೂ ಕೇರಳದ ರಾಜ್ಯಪಾಲ ಹುದ್ದೆ ಅಲಂಕರಿಸಿದ್ದರು. ಅಲ್ಲದೆ, ಎಸ್.ಎಂ.ಕೃಷ್ಣ ಅವರು ಮಹಾರಾಷ್ಟ್ರ, ಮಾರ್ಗರೇಟ್‌ ಆಳ್ವಾ ಅವರು ಉತ್ತರಾಖಂಡ್‌, ನ್ಯಾಯಮೂರ್ತಿ ಎಂ.ರಾಮಾ ಜೋಯಿಸ್‌ ಅವರು ಬಿಹಾರ್‌ ಹಾಗೂ ಜಾರ್ಖಂಡ್‌ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ.

ಶನಿವಾರ ಬೆಳಗ್ಗೆ ಪ್ರಧಾನಮಂತ್ರಿ ಅವರ ಕಾರ್ಯಾಲಯದಿಂದ ದೂರವಾಣಿ ಕರೆ ಮಾಡಿ ಶುಭಸುದ್ದಿ ಬರಲಿದೆ ಎಂದು ತಿಳಿಸಿದ್ದರು. ಆದರೆ, ರಾಜ್ಯಪಾಲರ ಹುದ್ದೆ ಒಲಿಯಲಿದೆ ಎಂದು ಗೊತ್ತಿರಲಿಲ್ಲ.

- ವಿಜಯಶಂಕರ್‌

Share this article