ವಕ್ಫ್‌ ಮಂಡಳಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಛಲವಾದಿ ಜಂಟಿ ಹೋರಾಟ

KannadaprabhaNewsNetwork |  
Published : Dec 05, 2024, 12:31 AM ISTUpdated : Dec 05, 2024, 04:06 AM IST
ವಿಜಯೇಂದ್ರ | Kannada Prabha

ಸಾರಾಂಶ

ವಕ್ಫ್‌ ಮಂಡಳಿ ಹೆಸರಲ್ಲಿ ರೈತರ, ಬಡವರ, ಮಠ-ಮಂದಿರಗಳ ಜಮೀನುಗಳನ್ನು ರಾಜ್ಯ ಸರ್ಕಾರ ಅಕ್ರಮವಾಗಿ ಕಬಳಿಸುತ್ತಿದೆ ಎಂದು ಆರೋಪಿಸಿದ್ದ ಬಿಜೆಪಿ, ಈ ಸಂಬಂಧ ಮಾಹಿತಿ ಸಂಗ್ರಹ ಮತ್ತು ಜನಜಾಗೃತಿಗಾಗಿನ ಆಂದೋಲನಕ್ಕೆ ಬುಧವಾರ ಚಾಲನೆ ನೀಡಿದೆ.

 ಬೀದರ್‌/ಹಾವೇರಿ : ವಕ್ಫ್‌ ಮಂಡಳಿ ಹೆಸರಲ್ಲಿ ರೈತರ, ಬಡವರ, ಮಠ-ಮಂದಿರಗಳ ಜಮೀನುಗಳನ್ನು ರಾಜ್ಯ ಸರ್ಕಾರ ಅಕ್ರಮವಾಗಿ ಕಬಳಿಸುತ್ತಿದೆ ಎಂದು ಆರೋಪಿಸಿದ್ದ ಬಿಜೆಪಿ, ಈ ಸಂಬಂಧ ಮಾಹಿತಿ ಸಂಗ್ರಹ ಮತ್ತು ಜನಜಾಗೃತಿಗಾಗಿನ ಆಂದೋಲನಕ್ಕೆ ಬುಧವಾರ ಚಾಲನೆ ನೀಡಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದ ತಂಡ ಬೀದರ್‌, ಕಲಬುರಗಿಯಲ್ಲಿ ಮತ್ತು ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ತಂಡ ಹುಬ್ಬಳ್ಳಿ, ಹಾವೇರಿಯಲ್ಲಿ ಆಂದೋಲನಕ್ಕೆ ಚಾಲನೆ ನೀಡಿದೆ.

ಸರ್ಕಾರಕ್ಕೆ ಶಾಪ:

ಬೀದರ್‌ನ ಗಾಂಧಿಗಂಜ್‌ನಲ್ಲಿ ಹಮ್ಮಿಕೊಂಡಿದ್ದ ‘ನಮ್ಮ ಭೂಮಿ ನಮ್ಮ ಹಕ್ಕು’ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ‘ಒಂದು ಸಮುದಾಯದ ಓಲೈಕೆಗಾಗಿ ರೈತರ ಕಣ್ಣಲ್ಲಿ ನೀರು ಬರುವಂತೆ ಮಾಡುವುದು ಸರಿಯಲ್ಲ. ಅಧಿಕಾರದ ಮದದಿಂದ ರೈತರ ಕಣ್ಣಲ್ಲಿ ನೀರು ಬಂದರೆ ಸರ್ಕಾರಕ್ಕೆ ಶಾಪ ತಟ್ಟೇ ತಟ್ಟುತ್ತೆ’ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೂ ಮೊದಲೂ ವಿಜಯೇಂದ್ರ ನೇತೃತ್ವದ ತಂಡ, ಎಪಿಎಂಸಿ ಮಾರ್ಕೆಟ್‌ನಲ್ಲಿರುವ ಬಸವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ವಕ್ಫ್ (ನಮ್ಮ ಭೂಮಿ ನಮ್ಮ ಹಕ್ಕು) ಹೋರಾಟಕ್ಕೆ ಚಾಲನೆ ನೀಡಿತು. ಮಾಜಿ ಉಪ ಮುಖ್ಯಮಂತ್ರಿ ಡಾ.ಅಶ್ವತ ನಾರಾಯಣ, ಮಾಜಿ ಸಚಿವರಾದ ಭೈರತಿ ಬಸವರಾಜ, ಶ್ರೀರಾಮಲು, ಪ್ರಭು ಚವ್ಹಾಣ್‌, ಎಂ.ಪಿ.ರೇಣುಕಾಚಾರ್ಯ, ಮುರುಗೇಶ ನಿರಾಣಿ ಇತರರು ಉಪಸ್ಥಿತರಿದ್ದರು.

ಬಳಿಕ, ನಗರದ ಗಾಂಧಿ ಗಂಜ್‌ನಲ್ಲಿರುವ ಬಸವೇಶ್ವರ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಎತ್ತಿನ ಬಂಡಿಗಳ ಮೂಲಕ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಈ ವೇಳೆ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳು ಮೊಳಗಿದವು. ಸಚಿವ ಜಮೀರ್‌ ಅವರ ರಾಜೀನಾಮೆಗೆ ಆಗ್ರಹಿಸಿ ಭಿತ್ತಿ ಪತ್ರಗಳನ್ನು ಪ್ರದರ್ಶಿಸಲಾಯಿತು. ಬಳಿಕ, ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ನೀಡಲಾಯಿತು. ಬಳಿಕ, ಗಾಂಧಿಗಂಜ್‌ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ವಿಜಯೇಂದ್ರ, ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.

ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಹೇಯ ಕೃತ್ಯಗಳು ಹೆಚ್ಚುತ್ತಿವೆ. ವಕ್ಫ್‌ ಹೆಸರಲ್ಲಿ ಬಡವರ, ರೈತರ, ಮಠ-ಮಾನ್ಯಗಳ ಆಸ್ತಿ ಕಬಳಿಸಲಾಗುತ್ತಿದೆ. ಸಿಎಂರಿಂದ ವಕ್ಫ್‌ ಹೆಸರಲ್ಲಿ ಹಿಂದೂಗಳನ್ನು ರಸ್ತೆಗೆ ತರುವ ಕೆಲಸವಾಗುತ್ತಿದೆ ಎಂದು ಹರಿಹಾಯ್ದರು. ಬಳಿಕ, ಬೀದರ್ ತಾಲೂಕಿನ ಚಟ್ನಳ್ಳಿ ಗ್ರಾಮದಲ್ಲಿ ರೈತರೊಂದಿಗೆ ಸಂವಾದ ನಡೆಸಿದ ತಂಡ, ಕಲಬುರಗಿಗೆ ತೆರಳಿ, ಪ್ರತಿಭಟನಾ ರ್‍ಯಾಲಿ ನಡೆಸಿತು.

ಇದೇ ವೇಳೆ, ಹುಬ್ಬಳ್ಳಿ ಮತ್ತು ಹಾವೇರಿಯಲ್ಲಿ ಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಸಿ.ಟಿ.ರವಿ, ನಳಿನ್‌ ಕುಮಾರ್‌ ಕಟೀಲ್‌ ನೇತೃತ್ವದಲ್ಲಿ ಜನಾಂದೋಲನಕ್ಕೆ ಚಾಲನೆ ನೀಡಲಾಯಿತು. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾರಾಯಣ ಸ್ವಾಮಿ, ವಕ್ಫ್ ಹೆಸರಿನಲ್ಲಿ ರೈತರ ಪಾರಂಪರಿಕ ಭೂಮಿ ಕಬಳಿಸುವ ಕೆಲಸವಾಗುತ್ತಿದೆ ಎಂದು ಆರೋಪಿಸಿದರು. ಸಿ.ಟಿ. ರವಿ ಮಾತನಾಡಿ, ರಾಜ್ಯದಲ್ಲಿ ವಕ್ಫ್‌ ಹೆಸರಲ್ಲಿ ಲ್ಯಾಂಡ್‌ ಜಿಹಾದ್‌ ನಡೆಯುತ್ತಿದೆ ಎಂದು ಕಿಡಿ ಕಾರಿದರು. ಬಳಿಕ, ತಂಡದ ಸದಸ್ಯರು ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಹೆಡಿಗ್ಗೊಂಡ ಗ್ರಾಮಕ್ಕೆ ಭೇಟಿ ನೀಡಿ, ಸಂತ್ರಸ್ತರ ಅಹವಾಲು ಆಲಿಸಿದರು.

PREV

Recommended Stories

''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ಶೇ.40 ಕಮಿಷನ್‌ ಆರೋಪ : ನ್ಯಾ. ದಾಸ್‌ ವರದಿ ಪರಿಶೀಲನೆಗೆ ಮತ್ತೊಂದು ಸಮಿತಿ