ಶಿವಮೊಗ್ಗ : ರಾಜ್ಯ ಸರ್ಕಾರ ನೀಡಿದ ಅನ್ಯ ಭಾಗ್ಯಕ್ಕೆ ಸರ್ಕಾರವೇ ಕನ್ನ ಹಾಕುತ್ತಿದೆ. 10 ಕೆ.ಜಿ. ಅಕ್ಕಿ ಕೊಡುವುದಾಗಿ ಹೇಳಿ ಕೇವಲ 5 ಕೇಜಿ ಕೊಡುತ್ತಿದ್ದಾರೆ. ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯತ್ತ ಸಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತು ಅವರ ಸಚಿವ ಸಂಪುಟ ತಾವು ಕೊಟ್ಟ ಭರವಸೆ ಈಡೇರಿಸಿದ್ದೇವೆ ಎಂದು ತಮಗೆ ತಾವೇ ಶಹಬಾಸ್‌ಗಿರಿ ಕೊಡುತ್ತಿದ್ದಾರೆ. ಆದರೆ, ಸರ್ಕಾರಿ ನೌಕರರಿಗೆ ಸಂಬಳ ಕೊಡಲು ದುಡ್ಡಿಲ್ಲ. ಗ್ಯಾರಂಟಿ ನಿಲ್ಲಿಸಬೇಕಾಗುತ್ತದೆ ಎಂದು ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಶಾಸಕರು ಸಿದ್ದರಾಮಯ್ಯನವರ ಮೇಲಿನ ವಿಶ್ವಾಸ ಕಳೆದುಕೊಂಡಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ ಎಂದು ಕುಟುಕಿದರು.
ಸಿಎಂ ಸಿದ್ದರಾಮಯ್ಯನವರಿಗೆ ಹಣಕಾಸು ಕ್ರೋಢಿಕರಿಸಲು ಸಾಧ್ಯವಾಗುತ್ತಿಲ್ಲ. ಒಂದೆಡೆ ಮಹಾನಗರ ಪಾಲಿಕೆ ನೌಕರರು, ಲಾರಿ ಮಾಲೀಕರು ಬೀದಿಗೆ ಇಳಿದು ಹೋರಾಟ ಮಾಡುತ್ತಿದ್ದಾರೆ. ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಆಗುತ್ತಿಲ್ಲ. ಶಾಸಕರಿಗೆ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೂಡ ಸಿಗುತ್ತಿಲ್ಲ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ. ಸಿದ್ದರಾಮಯ್ಯ ಆಡಳಿತದ ಮೇಲಿನ ಹಿಡಿತ ಕಳೆದುಕೊಂಡಿದ್ದಾರೆ ಎಂದರು.
ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಆರ್‌ಸಿಬಿ ವಿಜಯೋತ್ಸವಕ್ಕೆ ಕರೆ ಕೊಟ್ಟಿದ್ದರು. ಈಗ ಕೆಸಿಎ ಆಮೇಲೆ ಹಾಕುವ ಷಡ್ಯಂತ್ರ ಮಾಡುತ್ತಿದ್ದಾರೆ. ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳಲು ಸಿಎಂ ಮತ್ತು ಡಿಸಿಎಂಗೆ ಚಟ ಇತ್ತು. ಇದರ ಪರಿಣಾಮ ಕಾಲ್ತುಳಿತ ಪ್ರಕರಣ ನಡೆಯಿತು.
-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ.
ರಾಜ್ಯ ಕಾಂಗ್ರೆಸ್ ಸರ್ಕಾರ
ದಿವಾಳಿ: ಯಡಿಯೂರಪ್ಪ
ರಾಜ್ಯದ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಅನೇಕ ಬಾರಿ ಸರ್ಕಾರ ದಿವಾಳಿಯಾಗಿದೆ ಎಂಬುದನ್ನು ಹೇಳಿದ್ದೇವೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಮಾಡುವಂತಹ ಪರಿಸ್ಥಿತಿ ಈ ಸರ್ಕಾರಕ್ಕೆ ಇಲ್ಲ ಎಂದು ತಿಳಿಸಿದರು.
ಪ್ರಸ್ತುತ ಗೃಹಲಕ್ಷ್ಮೀ ಯೋಜನೆಗೆ ಕಳೆದ ಮೂರು ತಿಂಗಳಿಂದ ಹಣ ಬಿಡುಗಡೆ ಮಾಡಿಲ್ಲ. ಅನ್ನಭಾಗ್ಯ ಯೋಜನೆಯಡಿ ಆಹಾರ ಸರಬರಾಜು ಮಾಡುವ ಲಾರಿ ಮಾಲೀಕರಿಗೆ ಸುಮಾರು 250 ಕೋಟಿ ರು. ಬಾಡಿಗೆ ಬಾಕಿ ಇಟ್ಟುಕೊಂಡಿದ್ದಾರೆ. ಈ ಕೂಡಲೇ ಲಾರಿ ಮಾಲೀಕ ಸಂಘದ ಅಧ್ಯಕ್ಷ ಷಣ್ಮುಗಪ್ಪ ಅವರನ್ನು ಕರೆದು ಚರ್ಚಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಸರ್ಕಾರದ ಯಾವುದೇ ಒಂದು ಕಾರ್ಯಕ್ರಮ ಕೇವಲ ಪ್ರಚಾರಕ್ಕಾಗಿ ನಡೆಯುವ ಕಾರ್ಯಕ್ರಮವೇ ಹೊರತು ಅದನ್ನು ಕಾರ್ಯರೂಪಕ್ಕೆ ತರುವಂಥ ಯಾವುದೇ ಪ್ರಾಮಾಣಿಕ ಪ್ರಯತ್ನ ಮಾಡಿರುವುದಿಲ್ಲ. ಹೀಗಾಗಿ ಸರ್ಕಾರ ದಿವಾಳಿಯಾಗಿದೆ ಎಂಬುದು ಹಾಗೂ ಈ ಎಲ್ಲ ವಿಷಯ ಮತ್ತು ದಾಖಲೆಗಳ ಮೂಲಕ ಸ್ಪಷ್ಟವಾಗುತ್ತಿದೆ.
ಸರ್ಕಾರದ ವಾಸ್ತವಿಕ ಸ್ಥಿತಿಯನ್ನು ಸಿಎಂ ಮತ್ತು ಡಿಸಿಎಂ ಒಪ್ಪಿಕೊಂಡು ರಾಜ್ಯದಲ್ಲಿನ ವಾಸ್ತವಿಕ ಹಣಕಾಸಿನ ಸ್ಥಿತಿಯನ್ನು ಬಿಡುಗಡೆ ಮಾಡಬೇಕು ಎಂದು ಯಡಿಯೂರಪ್ಪ ಆಗ್ರಹಿಸಿದರು.