ಬಿಹಾರ ಚುನಾವಣೆ ಬೆನ್ನಲ್ಲೇ ರಾಜ್ಯ ಬಿಜೆಪಿ ಹಿರಿಯ ನಾಯಕರ ಮನೆಗೆ ವಿಜಯೇಂದ್ರ ಭೇಟಿ

KannadaprabhaNewsNetwork |  
Published : Nov 19, 2025, 12:45 AM IST
ವಿಜಯೇಂದ್ರ | Kannada Prabha

ಸಾರಾಂಶ

ಕಳೆದ ಕೆಲ ದಿನಗಳಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪಕ್ಷದ ಹಿರಿಯ ನಾಯಕರ ಮನೆಗೆ ತೆರಳಿ ಭೇಟಿ ಮಾಡುತ್ತಿರುವುದು ಕುತೂಹಲ ಮೂಡಿಸಿದೆ.

- ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ- ಸಚಿವ ಜೋಶಿ, ಅಶೋಕ್‌, ಡಿವಿಎಸ್‌,ಬೊಮ್ಮಾಯಿ ಮನೆಗೆ ಬಿಜೆಪಿ ಅಧ್ಯಕ್ಷ

---

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಳೆದ ಕೆಲ ದಿನಗಳಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪಕ್ಷದ ಹಿರಿಯ ನಾಯಕರ ಮನೆಗೆ ತೆರಳಿ ಭೇಟಿ ಮಾಡುತ್ತಿರುವುದು ಕುತೂಹಲ ಮೂಡಿಸಿದೆ.

ಇದೇ ತಿಂಗಳ 10ಕ್ಕೆ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ನೇಮಕಗೊಂಡು ಎರಡು ವರ್ಷ ಕಳೆದಿದೆ. ಅದು ನೇಮಕ. ಈಗ ಮುಂದಿನ ಮೂರು ವರ್ಷಗಳಿಗೆ ಚುನಾಯಿತರಾಗಬೇಕು ಎಂಬ ಉದ್ದೇಶದೊಂದಿಗೆ ಈ ಭೇಟಿಗಳನ್ನು ಆರಂಭಿಸಿದ್ದಾರೆ ಎನ್ನಲಾಗಿದೆ.

ಬಿಹಾರ ವಿಧಾನಸಭೆ ಚುನಾವಣೆ ಮುಗಿದಿರುವುದರಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯಾಧ್ಯಕ್ಷ ಹುದ್ದೆಯ ನೇಮಕ ಪ್ರಕ್ರಿಯೆಗೆ ಚಾಲನೆ ದೊರಕುವ ನಿರೀಕ್ಷೆಯಿದೆ. ಹೀಗಾಗಿ, ಅಷ್ಟರೊಳಗಾಗಿ ಪಕ್ಷದಲ್ಲಿನ ಅಪಸ್ವರದ ಪ್ರಮಾಣ ಸಾಧ್ಯವಾದ ಮಟ್ಟಿಗಾದರೂ ತಗ್ಗಿಸಬೇಕು ಎಂಬ ನಿಲುವಿಗೆ ವಿಜಯೇಂದ್ರ ಬಂದಿದ್ದಾರೆ ಎನ್ನಲಾಗಿದೆ.

ಈ ನಡುವೆ, ವಿಜಯೇಂದ್ರ ಅವರನ್ನೇ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಸುವ ಬಗ್ಗೆ ಹೈಕಮಾಂಡ್ ಚಿಂತನೆ ನಡೆಸಿದೆ. ಬಹುತೇಕ ಕೆಲ ದಿನಗಳಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ. ಆದರೆ, ಅಷ್ಟರಲ್ಲಿ ನಿಮ್ಮ ಬಗ್ಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅಸಮಾಧಾನ ಹೊಂದಿರುವವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿ ಎಂಬ ಸಲಹೆಯನ್ನೂ ವರಿಷ್ಠರು ನೀಡಿದ್ದಾರೆ ಎಂಬ ಮಾತೂ ಪಕ್ಷದ ಮೂಲಗಳಿಂದ ಗೊತ್ತಾಗಿದೆ.

ಈ ಕಾರಣಕ್ಕಾಗಿಯೇ ಇತ್ತೀಚೆಗೆ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಎರಡು ವರ್ಷ ಪೂರೈಸಿರುವುದನ್ನು ನೆಪವಾಗಿಟ್ಟುಕೊಂಡು ಪ್ರತಿಪಕ್ಷ ನಾಯಕ ಆರ್.ಅಶೋಕ್‌, ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದಗೌಡ, ಬಸವರಾಜ ಬೊಮ್ಮಾಯಿ ಅವರ ಆಶೀರ್ವಾದ ಮತ್ತು ಮಾರ್ಗದರ್ಶನ ಪಡೆದಿದ್ದಾರೆ. ಮಂಗಳವಾರವಷ್ಟೇ ಮಾಜಿ ಸಚಿವ ವಿ.ಸುನೀಲ್‌ಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಕುರಿತು ಇದ್ದ ತುಸು ಮುನಿಸನ್ನು ನಿವಾರಿಸುವ ಯತ್ನ ಮಾಡಿದ್ದಾರೆ.

ದೊಡ್ಡ ಮಟ್ಟದ ವಿರೋಧ:

ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಸಲು ಪಕ್ಷದಲ್ಲಿ ದೊಡ್ಡ ಮಟ್ಟದ ವಿರೋಧ ಎದುರಾಗಿರುವುದು ಗುಟ್ಟಿನ ವಿಷಯವೇನಲ್ಲ. ಈ ಕುರಿತು ದೆಹಲಿವರೆಗೂ ನಾಯಕರ ನಿಯೋಗಗಳು ತೆರಳಿ ದೂರನ್ನೂ ಸಲ್ಲಿಸಿವೆ. ವಿಜಯಂದ್ರ ನಾಯಕತ್ವವನ್ನು ಬಹಿರಂಗವಾಗಿ ವಿರೋಧಿಸುವ ನಾಯಕರ ಗುಂಪು ಒಂದಾದರೆ, ತೆರೆಮರೆಯಲ್ಲಿ ವಿರೋಧಿಸುವ ಗುಂಪು ಮತ್ತೊಂದು.

ಬಹಿರಂಗವಾಗಿ ವಿರೋಧಿಸುವ ಬಣದ ನಾಯಕರನ್ನು ನೇರವಾಗಿ ಭೇಟಿ ಮಾಡುವ ಬಗ್ಗೆ ಇನ್ನೂ ವಿಜಯೇಂದ್ರ ಅವರು ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಆದರೆ, ಅದಕ್ಕೂ ಮೊದಲು ತೆರೆಮರೆಯಲ್ಲಿ ವಿರೋಧಿಸುತ್ತಿರುವ ನಾಯಕರನ್ನಾದರೂ ಭೇಟಿ ಮಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಬೇಕು ಎಂಬ ವರಿಷ್ಠರ ಸಲಹೆ ಮೇರೆಗೆ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

PREV

Recommended Stories

ಬಿಹಾರ ಸರ್ಕಾರ ರಚನೆಗೆ ನಿತೀಶ್ ಸಿದ್ಧತೆ ಶುರು : ನ. 20ಕ್ಕೆ ಬಿಹಾರ ನೂತನ ಸರ್ಕಾರದ ಪ್ರಮಾಣ
ಇಂಡಿ ಕೂಟಕ್ಕೆ ಕೈ ಬದಲು ಎಸ್ಪಿ ನಾಯಕತ್ವಕ್ಕೆ ಬೇಡಿಕೆ