ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ಭಾನುವಾರ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಭರ್ಜರಿ ರೋಡ್ ಶೋ ಹಾಗೂ ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದರು.
ಬೆಂಗಳೂರು : ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ಭಾನುವಾರ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಭರ್ಜರಿ ರೋಡ್ ಶೋ ಹಾಗೂ ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದರು.
ಸೌಮ್ಯಾರೆಡ್ಡಿ ಅವರು ಚಿಕ್ಕಪೇಟೆ, ಜೆ.ಸಿ.ರಸ್ತೆ, ವಿವಿಪುರ, ಹೊಂಬೇಗೌಡ ನಗರ, ಜಯನಗರ, ಸಿದ್ದಾಪುರ, ಬಸಪ್ಪ ವೃತ್ತ, ಸೋಮೇಶ್ವರ ನಗರ, ಮಾವಳ್ಳಿ, ಭೈರಸಂದ್ರ ಸೇರಿದಂತೆ ಮೊದಲಾದ ಕಡೆ ಭರ್ಜರಿ ಪ್ರಚಾರ ನಡೆಸಿದರು. ಕೆಲವು ಕಡೆ ನಡೆಸಿದ ಪಾದಯಾತ್ರೆ ವೇಳೆ ಸಾರ್ವಜನಿಕರ ಜೊತೆ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ಮತ ನೀಡುವಂತೆ ಮನವಿ ಮಾಡಿದರು.
ತೆರೆದ ವಾಹನದಲ್ಲಿ ನಡೆಸಿದ ಪ್ರಚಾರದಲ್ಲಿ ಸೌಮ್ಯಾರೆಡ್ಡಿ ಅವರ ಜೊತೆ ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಶಾಸಕ ಆರ್.ವಿ.ದೇವರಾಜ್ ಸೇರಿದಂತೆ ಕಾಂಗ್ರೆಸ್ ಹಲವು ಮುಖಂಡರು ಭಾಗಿಯಾಗಿದ್ದರು.
ಇದೇ ವೇಳೆ ಸ್ಥಳೀಯ ಹಿರಿಯ ಮುಖಂಡರ ಮನೆಗಳಿಗೆ ಭೇಟಿ ನೀಡಿ ಚರ್ಚೆ ನಡೆಸಿದರು. ಕ್ಷೇತ್ರದಲ್ಲಿರುವ ಅಂಗವಿಕಲ ಸಂಸ್ಥೆಗಳಿಗೆ ಭೇಟಿ ನೀಡಿ ರಾಜ್ಯದ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಯೋಜನೆಗಳನ್ನು ಕಾರ್ಯಕ್ರಮಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ನಿಮ್ಮ ಕಷ್ಟ ಸುಖಗಳಿಗೆ ಸದಾ ನಿಮ್ಮ ಜೊತೆಗೆ ಇರುತ್ತೇವೆ ಎಂದು ಸೌಮ್ಯಾರೆಡ್ಡಿ ಆಶ್ವಾಸನೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೌಮ್ಯಾ ರೆಡ್ಡಿ, ಕಾಂಗ್ರೆಸ್ ಸರ್ಕಾರದ ಗೃಹ ಲಕ್ಷ್ಮೀ, ಗೃಹ ಜ್ಯೋತಿ, ಯುವ ನಿಧಿ, ಅನ್ನಭಾಗ್ಯ ಹಾಗೂ ಶಕ್ತಿ ಯೋಜನೆಯಿಂದ ಬದುಕು ಉತ್ತಮವಾಗಿದೆ ಎಂದು ಜನರು ಎಲ್ಲೆಡೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಹೇಳುತ್ತಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬದಲಾವಣೆ ಅಗತ್ಯವಿದೆ ಎಂದು ಹೇಳುತ್ತಿದ್ದಾರೆ ಎಂದರು.
ಬೆಂಗಳೂರಿನಿಂದ ಈವರೆಗೆ ಯಾವೊಬ್ಬ ಮಹಿಳೆ ಸಂಸದೆಯಾಗಿ ಆಯ್ಕೆಯಾಗಿಲ್ಲ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ತಮಗೆ ಇಲ್ಲಿನ ಜನರ ಕಷ್ಟ ಕಾರ್ಪಣ್ಯಗಳ ಬಗ್ಗೆ ಅರಿವಿದೆ. ತಂದೆಯವರಾದ ರಾಮಲಿಂಗಾರೆಡ್ಡಿ ಅವರು ಶಾಸಕರಾಗಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವರಾದಾಗ ಮಾಡಿರುವ ಒಳ್ಳೆಯ ಕೆಲಸಗಳು ನನಗೆ ಶ್ರೀರಕ್ಷೆಯಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗೆಲುವಿನ ವಿಶ್ವಾಸ:
ಚುನಾವಣಾ ಪ್ರಚಾರಕ್ಕೆ ಹೋದ ಕಡೆಯಲೆಲ್ಲಾ ಜನರು ಆತ್ಮೀಯವಾಗಿ ಬರ ಮಾಡಿಕೊಂಡು ಗೆಲುವು ಸಾಧಿಸುವ ವಿಶ್ವಾಸದ ಶಕ್ತಿಯನ್ನು ತುಂಬುತ್ತಿದ್ದಾರೆ. ಪಕ್ಷ ಬೇಧ ಮರೆತು ಬೆಂಬಲ ನೀಡುತ್ತಿದ್ದಾರೆ. ಗೆಲುವು ಸಾಧಿಸಿದರೆ ಅವರ ವಿಶ್ವಾಸಕ್ಕೆ ಚ್ಯುತಿ ಬರದಂತೆ ಕೆಲಸ ಮಾಡುತ್ತೇನೆ ಎಂದರು.
ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಉದಯಶಂಕರ್, ಯುವ ಮುಖಂಡ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಯುವರಾಜ್ ಸೇರಿದಂತೆ ಹಲವಾರು ಮುಖಂಡರು, ನೂರಾರು ಕಾರ್ಯಕರ್ತರು ಪ್ರಚಾರದಲ್ಲಿ ಭಾಗವಹಿಸಿದ್ದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಾದ್ಯಂತ ಶಿಕ್ಷಣಕ್ಕೆ ಹೈ-ಟೆಕ್ ಸ್ಪರ್ಶ ನೀಡುವುದು ನನ್ನ ಗುರಿಯಾಗಿದೆ. ಈಗಾಗಲೇ ಜಯನಗರ ಮತ್ತು ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿನ ಸರ್ಕಾರಿ ಶಾಲೆಗಳನ್ನು ಯಶಸ್ವಿಯಾಗಿ ನವೀಕರಿಸಲಾಗಿದೆ.-ಸೌಮ್ಯಾರೆಡ್ಡಿ, ದಕ್ಷಿಣ ಕ್ಷೇತ್ರ ಅಭ್ಯರ್ಥಿ