ಅಂಬೇಡ್ಕರ್‌ ಪರಂಪರೆ ಉಳಿಸಿದ ಮೋದಿ: ಸುಧಾಕರ್‌

KannadaprabhaNewsNetwork |  
Published : Apr 15, 2024, 01:33 AM ISTUpdated : Apr 15, 2024, 04:37 AM IST
ಬಾಗೇಪಲ್ಲಿಯ ಗೂಳೂರು ಗ್ರಾಮದ ಬಿಜೆಪಿಯ ದಲಿತ ಕಾರ್ಯಕರ್ತ ನಾರಾಯಣಪ್ಪ ಅವರ ಮನೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ। ಕೆ.ಸುಧಾಕರ್‌ ಅವರು ಉಪಾಹಾರ ಸೇವಿಸಿದರು. | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿಯವರು ಡಾ। ಬಿ.ಆರ್.ಅಂಬೇಡ್ಕರರ ಆಶಯದ ಹಾದಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ. ಅದರೆ ಕಾಂಗ್ರೆಸ್ ಸರ್ಕಾರ, ಜವಹರಲಾಲ್ ನೆಹರೂ ಹಾಗೂ ಇಂದಿರಾಗಾಂಧಿ ಅವರು ಅಂಬೇಡ್ಕರ್‌ಗೆ ಅಪಮಾನ ಮಾಡಿದ್ದರು‌ ಎಂಬುದು ಡಾ.ಸುಧಾಕರ್‌ ಆರೋಪ

 ಚಿಕ್ಕಬಳ್ಳಾಪುರ : ಪ್ರಧಾನಿ ನರೇಂದ್ರ ಮೋದಿ ಅವರು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಪರಂಪರೆಯನ್ನುಳಿಸಲು ಶ್ರಮಿಸಿದ್ದರೆ, ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ಬಾಬಾ ಸಾಹೇಬರನ್ನು ಮೂಲೆಗೆ ಸರಿಸಲು ಸಾಕಷ್ಟು ಪ್ರಯತ್ನ ಪಟ್ಟಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ। ಕೆ.ಸುಧಾಕರ್ ಹೇಳಿದರು.

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಸೂರ್ಯ ಕನ್ವೆನ್ಷನಲ್ ಹಾಲ್‌ನಲ್ಲಿ ಆಯೋಜಿಸಿದ್ದ ಡಾ। ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಂಬೇಡ್ಕರ್ ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ, ಅವರು ಒಂದು ಶಕ್ತಿ. ದೇಶದಲ್ಲಿ ಸಾವಿರಾರು ಭಾಷೆ, ಬೇರೆ ಬೇರೆ ಜಾತಿ, ಧರ್ಮಗಳಿದ್ದರೂ ಎಲ್ಲರೂ ಅಂಬೇಡ್ಕರ್ ರಚಿತ ಸಂವಿಧಾನದಡಿ ಸಮನ್ವಯದಿಂದ ಜೀವನ ನಡೆಸುತ್ತಿದ್ದಾರೆ. ಸಮ ಸಮಾಜವನ್ನು ನಿರ್ಮಿಸಿದ ಅವರು ಶೋಷಿತರ ಕಣ್ಣೀರು ಒರೆಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತಂದರು ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಡಾ। ಬಿ.ಆರ್.ಅಂಬೇಡ್ಕರರ ಆಶಯದ ಹಾದಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ. ಅದರೆ ಕಾಂಗ್ರೆಸ್ ಸರ್ಕಾರ, ಜವಹರಲಾಲ್ ನೆಹರೂ ಹಾಗೂ ಇಂದಿರಾಗಾಂಧಿ ಅವರು ಅಂಬೇಡ್ಕರ್‌ಗೆ ಅಪಮಾನ ಮಾಡಿದ್ದರು‌ ಎಂದು ಹೇಳಿದರು.

ಸ್ವಾತಂತ್ರ್ಯ ದೊರೆತ ಆರಂಭದಿಂದಲೇ, ಅಂಬೇಡ್ಕರ್‌ ಅವರನ್ನು ಬದಿಗೆ ಸರಿಸಲು ಕಾಂಗ್ರೆಸ್‌ ಪಕ್ಷ ಪ್ರಯತ್ನಿಸಿತ್ತು. 1952ರ ಲೋಕಸಭಾ ಚುನಾವಣೆ ಮತ್ತು 1954ರ ಉಪಚುನಾವಣೆಯಲ್ಲಿ, ಅಂಬೇಡ್ಕರ್ ವಿರುದ್ಧ ಜವಹರಲಾಲ್‌ ನೆಹರು ನೇತೃತ್ವದಲ್ಲಿ ಪ್ರಚಾರ ಮಾಡಿದ ಕಾಂಗ್ರೆಸ್, ದಾದರ್‌ನಲ್ಲಿ ಅವರನ್ನು ಸೋಲಿಸಿತು. ನಂತರ, ಭಾರತೀಯ ಜನಸಂಘ ಮತ್ತು ಇತರ ಪಕ್ಷಗಳು ಕೈಜೋಡಿಸಿ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಮತ್ತೆ ಸಂಸತ್ತಿಗೆ ಕಳುಹಿಸಿದವು ಎಂದು ವಿವರಿಸಿದರು‌.

ಅಂಬೇಡ್ಕರ್‌ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಆದರೆ ಅವರ ಪುಸ್ತಕ ಮತ್ತು ಸಮಾಜ ಸುಧಾರಣಾ ಕಾರ್ಯಗಳನ್ನು ಕಾಂಗ್ರೆಸ್‌ ಎಂದಿಗೂ ಪ್ರಚಾರ ಮಾಡಲಿಲ್ಲ. ಏಕೆಂದರೆ ಕಾಂಗ್ರೆಸ್‌ ಪಕ್ಷ ಅಂಬೇಡ್ಕರ್ ಪರಂಪರೆಯನ್ನು ಅಳಿಸಿ ಹಾಕಲು ಬಹಳ ಶ್ರಮ ವಹಿಸಿತ್ತು. ಸ್ವಾತಂತ್ರ್ಯದ ನಂತರ 35 ವರ್ಷಗಳ ಕಾಲ ಅಂಬೇಡ್ಕರ್ ಅವರಿಗೆ ಭಾರತರತ್ನ ನೀಡಲು ಕಾಂಗ್ರೆಸ್‌ ನಿರಾಕರಿಸಿತ್ತು. ಆದರೆ ಅದೇ ಪ್ರಶಸ್ತಿಯನ್ನು ಜವಹರಲಾಲ್‌ ನೆಹರು ಮತ್ತು ಇಂದಿರಾ ಗಾಂಧಿ ಅವರಿಗೆ ನೀಡಲಾಗಿತ್ತು. ನಂತರ 1990ರಲ್ಲಿ ಬಿಜೆಪಿ ಬೆಂಬಲಿತ ವಿ.ಪಿ.ಸಿಂಗ್ ಸರ್ಕಾರ ಅಂಬೇಡ್ಕರ್ ಅವರಿಗೆ ಮರಣೋತ್ತರ ಭಾರತರತ್ನ ನೀಡಿ ಗೌರವ ಸಲ್ಲಿಸಿತ್ತು ಎಂದು ಸ್ಮರಿಸಿದರು.

ಡಾ। ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು 1949ರ ನವೆಂಬರ್‌ 26ರಂದು ಅಳವಡಿಸಿಕೊಳ್ಳಲಾಯಿತು. ಪ್ರಧಾನಿ ಮೋದಿಯವರು ನವೆಂಬರ್ 26ರಂದು ಸಂವಿಧಾನ ದಿನ ಎಂದು ಘೋಷಣೆ ಮಾಡಿದರು. ಪ್ರಧಾನಿ ಮೋದಿ 2016ರಲ್ಲಿ ಪಂಚತೀರ್ಥ ಯೋಜನೆ ಜಾರಿ ಮಾಡಿದರು. ಅಂಬೇಡ್ಕರರ ಬದುಕಿನ ಪ್ರಮುಖ ಐದು ಸ್ಥಳಗಳ ಅಭಿವೃದ್ಧಿ ಮಾಡಿ ಇಲ್ಲಿಗೆ ಜನರು ಪ್ರವಾಸ ಮಾಡುವಂತೆ ಉತ್ತೇಜನ ನೀಡಿದರು‌ ಎಂದರು.ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು, ಸಂಸದ ಮುನಿಸ್ವಾಮಿ, ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಮಂಡಲ ಅಧ್ಯಕ್ಷ ಪ್ರತಾಪ್, ಗಂಗರೆಡ್ಡಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ, ಜೆಡಿಎಸ್ ಮುಖಂಡ ಹರಿನಾಥರೆಡ್ಡಿ, ತಾಲೂಕು ದಲಿತಪರ ಸಂಘಟನೆಯ ಮುಖಂಡ ಆರ್.ವೆಂಕಟೇಶ್, ಚಿನ್ನಪುಜಪ್ಪ, ಕೆ.ಟಿ.ವೀರಾಂಜನೇಯ, ಜಯಂತ್, ಎಸ್.ಆರ್.ಲಕ್ಷ್ಮೀನಾರಾಯಣ, ರಾಮಪ್ಪ, ಪಿ.ಡಿ.ವೆಂಕಟರಮಣ, ವಿನಯ್ ಕುಮಾರ್, ಸಮುದಾಯದ ಮುಖಂಡರು ಉಪಸ್ಥಿತರಿದ್ದರು. 

ದಲಿತರ ಮನೆಯಲ್ಲಿ ಉಪಾಹಾರ

ಅಭ್ಯರ್ಥಿ ಡಾ। ಕೆ.ಸುಧಾಕರ್ ಬಾಗೇಪಲ್ಲಿಯ ಗೂಳೂರು ಗ್ರಾಮದ ಬಿಜೆಪಿಯ ದಲಿತ ಕಾರ್ಯಕರ್ತ ನಾರಾಯಣಪ್ಪ ಅವರ ಮನೆ ಭೇಟಿ ನೀಡಿ ಬೆಳಗಿನ ಉಪಾಹಾರ ಸೇವಿಸಿದರು. ನಾರಾಯಣಪ್ಪನವರ ಕುಟುಂಬ ಸದಸ್ಯರು ಅತ್ಯಂತ ಆತ್ಮೀಯತೆಯಿಂದ ನೀಡಿದ ಆತಿಥ್ಯ, ಮನೆ ಮಂದಿಯೆಲ್ಲಾ ತೋರಿದ ಪ್ರೀತಿ, ವಿಶ್ವಾಸಕ್ಕೆ ನಾನು ಆಭಾರಿ ಎಂದು ಅವರು ಕೃತಜ್ಞತೆ ಸಲ್ಲಿಸಿದರು.

ಇದಕ್ಕೂ ಮುನ್ನ ಬಾಗೇಪಲ್ಲಿ ಪಟ್ಟಣದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಣೆ ಮಾಡಿದರು‌‌.

ಅಂಬೇಡ್ಕರ್‌ ಅವರ ದೇಹಾಂತ್ಯವಾದಾಗ ಕೂಡ ಅವರ ಅಂತ್ಯಸಂಸ್ಕಾರ ಮಾಡಲು ಹಾಗೂ ಸ್ಮಾರಕ ಮಾಡಲು ಕಾಂಗ್ರೆಸ್‌ ಅವಕಾಶ ನೀಡಲಿಲ್ಲ. ಇದನ್ನು ಇತಿಹಾಸ ಎಂದಿಗೂ ಕ್ಷಮಿಸಲ್ಲ. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಅಂಬೇಡ್ಕರ್‌ ಪರಂಪರೆಗೆ ಹೊಸ ದಿಕ್ಕು ನೀಡಿದರು.

-ಡಾ। ಕೆ.ಸುಧಾಕರ್‌, ಎನ್‌ಡಿಎ ಅಭ್ಯರ್ಥಿ, ಚಿಕ್ಕಬಳ್ಳಾಪುರ ಕ್ಷೇತ್ರ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಅನುದಾನಕ್ಕಾಗಿ ಕೇಂದ್ರದ ವಿರುದ್ಧ ರಾಜ್ಯ ಸುಪ್ರೀಂಗೆ?
ಕೆಪಿಸಿಸಿ ಸಾರಥಿ ಡಿಕೆಗೆ 6ರ ಸಂಭ್ರಮ-- ಕಾಂಗ್ರೆಸ್ಸಿಗೆ ಹೊಸ ಶಕ್ತಿ ತುಂಬಿದ ನಾಯಕ