ನವದೆಹಲಿ: ‘ಅಮಿತ್ ಶಾ ಅವರು ಇತರ ವಿಷಯಗಳ (ಜನರಲ್ ಟಾಪಿಕ್ಸ್) ಬಗ್ಗೆ ಮಾಡುವ ಫ್ಯಾಂಟಸಿ ಭಾಷಣದ ಬಗ್ಗೆ ದೇಶಕ್ಕೆ ಆಸಕ್ತಿಯಿಲ್ಲ. ಅವರು ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಮೂಲಕ ಗುಂಡು ಹಾರಿಸಲು ಯಾರು ಅನುಮತಿ ನೀಡಿದರು ಎಂಬ ಬಗ್ಗೆ ಮೊದಲು ಸ್ಪಷ್ಟನೆ ನೀಡಬೇಕು’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೋಮವಾರ ಆಗ್ರಹಿಸಿದ್ದಾರೆ.
ವಿದ್ಯಾರ್ಥಿ ಪ್ರತಿಭಟನೆ ಹಾಗೂ ಪೊಲೀಸ್ ಕ್ರಮದ ಕುರಿತು ಲೋಕಸಭೆಯಲ್ಲಿ ಮಾತನಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಿದ್ಧ ಎಂದು ಸರ್ಕಾರ ಘೋಷಿಸಿದ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್, ‘ಕಳೆದ 15 ದಿನಗಳಿಂದಲೂ ಸದನಕ್ಕೆ ಬರುವ ಧೈರ್ಯ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಬಂದಿಲ್ಲ. ತಮ್ಮ ಕೃತ್ಯಗಳ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳುವ ಛಾತಿ ಅವರಲ್ಲಿ ಯಾರಿಗೂ ಇಲ್ಲ. ದೆಹಲಿಯಲ್ಲಿ ನಡೆದ ಘಟನೆಯು ಪ್ರತಿಕ್ರಿಯೆ ನೀಡಲು ಯೋಗ್ಯವಾದುದು ಎಂದು ಗೃಹ ಸಚಿವರಾಗಲಿ ಅಥವಾ ಪ್ರಧಾನಿಯಾಗಲಿ ಭಾವಿಸುವುದಿಲ್ಲ ಎಂಬುದನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು’ ಎಂದು ಕುಟುಕಿದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ‘ಮೋದಿ ದೇಶದ ಕ್ಷಮೆ ಕೇಳಬೇಕು. ಅಮಿತ್ ಶಾ ಗೋಲಿಬಾರ್ ಬಗ್ಗೆ ಉತ್ತರಿಸಬೇಕು. ಸದನದಲ್ಲಿ ರಾಮಮಂದಿದರ ದೇಣಿಗೆ ಕಳವು ಬಗ್ಗೆ ಚರ್ಚೆ ಆಗಬೇಕು’ ಎಂದು ಆಗ್ರಹಿಸಿದರು.
ಮೋದಿ ಇಮೇಜ್ ಧ್ವಂಸ- ರಾಹುಲ್:
ಜು.20ರಂದು ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ಹಿಂಸಾಚಾರ ನಡೆಸಿದ್ದರಿಂದ ಪ್ರಧಾನಿ ನರೇಂದ್ರ ಮೋದಿ ಅವರ ಇಮೇಜ್ ಸಂಪೂರ್ಣವಾಗಿ ನಾಶವಾಗಿದೆ. ಅದನ್ನು ಎಂದಿಗೂ ಮರುನಿರ್ಮಾಣ ಮಾಡಲು ಸಾಧ್ಯವಿಲ್ಲ’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಿಂದು ಪತ್ರಿಕೆಹೆ ಬರೆದ ಲೇಖನದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಹುಲ್ ಪಲಾಯನವಾದ
ರಾಹುಲ್ ಆರೋಪಿಸಿದಂತೆ ಜಂತರ್ ಮಂತರ್‌ನಲ್ಲಿ ಗೋಲಿಬಾರ್ ನಡೆದಿಲ್ಲ. ಈ ಬಗ್ಗೆ ಉತ್ತರಿಸಲು ಅಮಿತ್ ಶಾ ಸಿದ್ಧರಿದ್ದರೂ ರಾಹುಲ್ ಪಲಾಯನ ಮಾಡುತ್ತಿದ್ದಾರೆ. ಜಾರ್ಖಂಡ್‌ನಲ್ಲೇ ಜೆನ್‌ಝೀಗಳ ಮೇಲೆ ಬಲಪ್ರಯೋಗಿಸಲಾಗಿದೆ.
- ಜೆ.ಪಿ. ನಡ್ಡಾ, ಕೇಂದ್ರ ಸಚಿವ
