ರಾಜ್ಯದಲ್ಲಿ ವೋಟರ್‌ ಐಡಿ ಹಗರಣ : ಅಶೋಕ್‌

Published : Oct 29, 2026, 10:43 AM IST
R Ashoka

ಸಾರಾಂಶ

ಎಸ್‌ಐಆರ್‌ ನಡೆಯುವ ವಿಚಾರ ಗೊತ್ತಿದ್ದರೂ ರಾಜ್ಯ ಚುನಾವಣಾ ಆಯೋಗದಿಂದ 90 ಲಕ್ಷ ಮತದಾರರ ಗುರುತಿನ ಚೀಟಿಗಳನ್ನು ಮುದ್ರಿಸಿ ಸುಮಾರು 20 ಕೋಟಿ ಮೊತ್ತದ ಹಗರಣ ನಡೆಸಲಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು : ಎಸ್‌ಐಆರ್‌ ನಡೆಯುವ ವಿಚಾರ ಗೊತ್ತಿದ್ದರೂ ರಾಜ್ಯ ಚುನಾವಣಾ ಆಯೋಗದಿಂದ 90 ಲಕ್ಷ ಮತದಾರರ ಗುರುತಿನ ಚೀಟಿಗಳನ್ನು ಮುದ್ರಿಸಿ ಸುಮಾರು 20 ಕೋಟಿ ಮೊತ್ತದ ಹಗರಣ ನಡೆಸಲಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಗಂಭೀರ ಆರೋಪ ಮಾಡಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮತದಾರರ ಗುರುತಿನ ಚೀಟಿ ಮುದ್ರಣ ಸಂಬಂಧ ಟೆಂಡರ್‌ ದಾಖಲೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿ, ಈ ಹಗರಣದಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಭಾಗಿಯಾಗಿದೆ. ಹೀಗಾಗಿ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.

ಬೆಂಗಳೂರಿನ ಮತದಾರರಿಗೆ ಸ್ಟೇಟ್‌ ವೋಟರ್‌ ಐಡೆಂಟಿಟಿ ಕಾರ್ಡ್‌ (ಎಸ್‌ವಿಐಸಿ) ಎಂದರೆ, ಮತದಾರರ ಗುರುತಿನ ಚೀಟಿ ನೀಡಲು ರಾಜ್ಯ ಚುನಾವಣಾ ಆಯೋಗದಿಂದ ಕ್ರಮ ವಹಿಸಲಾಗಿದೆ. 90 ಲಕ್ಷ ಕಾರ್ಡ್‌ ಮುದ್ರಿಸಲು ಒಂದೇ ಟೆಂಡರ್‌ ಕರೆಯಲಾಗಿದೆ. ಆರ್ಥಿಕ ಇಲಾಖೆಯ ಎಲ್ಲ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಪ್ರತಿ ಮನೆಗೆ ಹೋಗಿ ಮತದಾರರ ಮಾಹಿತಿ ಸಂಗ್ರಹಿಸಿ, ಫೋಟೋ ಸೆರೆಹಿಡಿದು ನಂತರ ಮುದ್ರಣ ಮಾಡಬೇಕು. ಇಲ್ಲಿ ಲೋಕಸಭಾ ಚುನಾವಣೆಯ ಮತದಾರರ ಪಟ್ಟಿಯನ್ನು ಆಧರಿಸಿ ಕಾರ್ಡ್‌ ಮುದ್ರಿಸಲಾಗಿದೆ ಎಂದು ಆರೋಪಿಸಿದರು.

ಕೇಂದ್ರ ಚುನಾವಣಾ ಆಯೋಗವು 2026 ರ ಮೇ 14 ರಂದು ಎಸ್‌ಐಆರ್‌ ಸಂಬಂಧ ಆದೇಶಿಸಿತ್ತು. ಆದರೆ ಮೇ 15 ರಂದು ರಾಜ್ಯ ಚುನಾವಣಾ ಆಯೋಗದಿಂದ ಟೆಂಡರ್‌ ಕರೆಯಲಾಗಿದೆ. ಮೇ 29 ರಂದು ಕಾರ್ಯಾದೇಶ ನೀಡಲಾಗಿದೆ. ಇದೇ ರಾಜ್ಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್‌ ಸಲ್ಲಿಸಿದ್ದು, ಎಸ್‌ಐಆರ್‌ ಬಳಿಕ ಮತದಾರರ ಹೊಸಪಟ್ಟಿ ಬಂದ ಬಳಿಕ ಸ್ಥಳೀಯ ಚುನಾವಣೆ ನಡೆಸುವುದಾಗಿ ಹೇಳಿದೆ ಎಂದು ಗಮನ ಸೆಳೆದರು.

59.09 ಲಕ್ಷ ಮತದಾರರು, ಮುದ್ರಿತ ಕಾರ್ಡ್‌ 90 ಲಕ್ಷ !

ಕೇಂದ್ರ ಚುನಾವಣಾ ಆಯೋಗದ ಮತದಾರರ ಪಟ್ಟಿಯಿಂದಲೇ ಚುನಾವಣೆ ನಡೆಯುವಾಗ, ರಾಜ್ಯ ಚುನಾವಣಾ ಆಯೋಗದಿಂದ ಪ್ರತ್ಯೇಕವಾಗಿ ಹೊಸ ಕಾರ್ಡ್‌ಗಳನ್ನು ಮುದ್ರಿಸಲಾಗಿದೆ. ಬೆಂಗಳೂರಿನಲ್ಲಿ ಎಸ್‌ಐಆರ್‌ ನಂತರ ಒಟ್ಟು 59,09,775 ಮತದಾರರಿದ್ದಾರೆ. ವಿಳಾಸ ಬದಲಾದವರ, ಸ್ಥಳಾಂತರಗೊಂಡವರ ಹೆಸರು ತೆಗೆಯಲಾಗಿದೆ. ಆದರೆ ಇಲ್ಲಿ 90 ಲಕ್ಷ ಗುರುತಿನ ಚೀಟಿ ಮುದ್ರಿಸಲಾಗಿದೆ. ಇದರಲ್ಲಿ ಹಗರಣ ನಡೆದಿರುವುದು ಖಚಿತವಾಗಿದೆ ಎಂದರು.

ಈ ಕಾರ್ಡ್‌ಗಳನ್ನು ಈಗ ಯಾರಿಗೆ ವಿತರಿಸಲಾಗುವುದು? ಮುದ್ರಣವಾಗಿ ಇಷ್ಟು ದಿನಗಳಾದರೂ ಏಕೆ ವಿತರಿಸಿಲ್ಲ? ಇದಕ್ಕೆ ಖರ್ಚು ಮಾಡಿರುವ 20 ಕೋಟಿ ರು. ಸಂಪೂರ್ಣ ವ್ಯರ್ಥವಾಗಿದೆ ಎಂದು ಅಶೋಕ್‌ ಕಿಡಿಕಾರಿದರು.

ವೋಟ್‌ ಚೋರಿಗಾಗಿ 31 ಲಕ್ಷ ಬೋಗಸ್‌ ಕಾರ್ಡ್‌:

ವೋಟ್‌ ಚೋರಿ ಎನ್ನುವ ರಾಹುಲ್‌ ಗಾಂಧಿಯವರೇ ಈಗ ಬೆಂಗಳೂರಿಗೆ ಬಂದು ಹೊಸ ಕಾರ್ಡ್‌ಗಳನ್ನು ವಿತರಣೆ ಮಾಡಬೇಕು. ಏಕೆಂದರೆ, ಬೆಂಗಳೂರಿನಲ್ಲಿ ವಾಸ್ತವದಲ್ಲಿ 59 ಲಕ್ಷ ಮತದಾರರಿದ್ದಾರೆ. ಆದರೆ, ರಾಜ್ಯ ಚುನಾವಣಾ ಆಯೋಗದಿಂದ 90 ಲಕ್ಷ ಕಾರ್ಡ್‌ ಮುದ್ರಿಸಲಾಗಿದೆ. ಇದು ಅತಿ ದೊಡ್ಡ ಹಗರಣವಾಗಿದ್ದು, ಸರ್ಕಾರದಿಂದ ಇದಕ್ಕೆ ಉತ್ತರ ನೀಡಬೇಕು. ಜಿಬಿಎ ಚುನಾವಣೆಯಲ್ಲಿ ವೋಟ್‌ ಚೋರಿಗಾಗಿ 31 ಲಕ್ಷ ಜನರಿಗೆ ಬೋಗಸ್‌ ಕಾರ್ಡ್‌ ನೀಡಲು ಕಾಂಗ್ರೆಸ್‌ ಮುಂದಾಗಿದೆ. ಈ 31 ಲಕ್ಷ ಮತದಾರರು ಎಲ್ಲಿದ್ದಾರೆ ಎಂಬುದನ್ನು ಈಗ ಸರ್ಕಾರ ಪತ್ತೆ ಮಾಡಬೇಕು ಎಂದು ಆಗ್ರಹಿಸಿದರು.

ಸ್ಟಿಂಗ್‌ ಕೇಸ್‌ ಸಿಬಿಐ ತನಿಖೆಗೆ ಆಗ್ರಹ

ಕೇಂದ್ರ ಸಚಿವ ಅಮಿತ್‌ ಶಾ ಅವರು ರಾಜ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಸ್ಟಿಂಗ್‌ ಆಪರೇಶನ್‌ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿಗೆ ಅನ್ಯಾಯವಾಗಿದ್ದು, ಅದರ ಬಗ್ಗೆ ಸರಿಯಾಗಿ ತನಿಖೆ ನಡೆಯಬೇಕು. ಹಂಚಿದವರು ಮಾತ್ರವಲ್ಲದೆ ವೀಡಿಯೋ ಮಾಡಿಸಿದವರನ್ನೂ ಪತ್ತೆ ಮಾಡಬೇಕು. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಇದನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಅಶೋಕ್‌ ಒತ್ತಾಯಿಸಿದರು.

ಅಶೋಕ್‌ ಆರೋಪವೇನು?

- ಎಸ್ಐಆರ್ ನಡೆಯುತ್ತಿದ್ದರೂ ವೋಟರ್ ಐಡಿ ಮುದ್ರಣ

- ಕೇಂದ್ರ ಚು. ಆಯೋಗದಿಂದ ಮೇ 14ಕ್ಕೆ ಎಸ್ಐಆರ್‌ ಆದೇಶ

=- ಮೇ 15ಕ್ಕೆ ರಾಜ್ಯ ಚುನಾವಣಾ ಆಯೋಗದಿಂದ ಟೆಂಡರ್‌

- ಬೆಂಗಳೂರಿನಲ್ಲಿ ಇರೋದೇ 59 ಲಕ್ಷ ಮತದಾರರು

- ಅಂಥದ್ದರಲ್ಲಿ 90 ಲಕ್ಷ ಐಡಿಗಳ ಮುದ್ರಣ. ಒಂದೇ ಟೆಂಡರ್‌

- ಆರ್ಥಿಕ ಇಲಾಖೆಯ ಎಲ್ಲ ನಿಯಮಗಳ ಉಲ್ಲಂಘನೆ

- ಈ ಹಗರಣದಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಭಾಗಿ

- ಈಗ ಆ ಕಾರ್ಡ್‌ಗಳನ್ನು ಯಾರಿಗೆ ವಿತರಿಸ್ತಾರೆ?

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸೋರಿಯಾಸಿಸ್ ಸಾಂಕ್ರಾಮಿಕವಲ್ಲ: ತಪ್ಪು ಕಲ್ಪನೆಗಳಿಂದ ದೂರವಿರಿ
ಬೆಂಗಳೂರು ಮೆಟ್ರೋ ಪಿಂಕ್‌ ಲೈನ್‌ ಲೋಕಾರ್ಪಣೆಗೆ ಮೋದಿ