85 ವರ್ಷ ಮೇಲ್ಪಟ್ಟವರಿಗೆ ಇಂದಿನಿಂದ ಮನೆಯಲ್ಲೇ ಮತದಾನ

Published : Apr 13, 2024, 08:46 AM IST
Voting

ಸಾರಾಂಶ

ಲೋಕಸಭಾ ಚುನಾವಣೆ ವೇಳೆ 85 ವರ್ಷಕ್ಕಿಂತ ಮೇಲ್ಪಟ್ಟ ಮತದಾರರು ಮತ್ತು ಅಂಗವಿಕಲ ಮತದಾರರಿಗೆ ಶನಿವಾರದಿಂದ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಒಟ್ಟು 49,648 ಮತದಾರರು ನೊಂದಾಯಿಸಿಕೊಂಡಿದ್ದಾರೆ.

ಬೆಂಗಳೂರು : ಲೋಕಸಭಾ ಚುನಾವಣೆ ವೇಳೆ 85 ವರ್ಷಕ್ಕಿಂತ ಮೇಲ್ಪಟ್ಟ ಮತದಾರರು ಮತ್ತು ಅಂಗವಿಕಲ ಮತದಾರರಿಗೆ ಶನಿವಾರದಿಂದ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಒಟ್ಟು 49,648 ಮತದಾರರು ನೊಂದಾಯಿಸಿಕೊಂಡಿದ್ದಾರೆ.

ಇದೇ ತಿಂಗಳ 18ರವರೆಗೆ ಮನೆಯಿಂದ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮನೆಯಿಂದ ಮತದಾನ ಮಾಡಲು ಈಗಾಗಲೇ ನೋಂದಾಯಿಸಿಕೊಂಡವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಚುನಾವಣಾ ಸಿಬ್ಬಂದಿ ಮನೆಗಳಿಗೆ ತೆರಳಿ ಬ್ಯಾಲೆಟ್‌ ಪೇಪರ್‌ ಮೂಲಕ ಗೌಪ್ಯ ಮತದಾನ ಮಾಡಿಸಲಾಗುತ್ತದೆ. ಕಳೆದ ವಿಧಾನಸಭಾ ಚುನಾವಣೆ ವೇಳೆಯಲ್ಲಿಯೇ ಕರ್ನಾಟಕ ರಾಜ್ಯವು ಮೊಟ್ಟಮೊದಲ ಬಾರಿಗೆ 80 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಿತ್ತು. ಇದನ್ನು ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ವಿಸ್ತರಣೆ ಮಾಡಲಾಗಿದ್ದು, 85 ವರ್ಷಕ್ಕೆ ಹೆಚ್ಚಿಸಲಾಗಿದೆ.

ರಾಜ್ಯದಲ್ಲಿ ಒಟ್ಟು 3,40,856 ಮತದಾರರು 85 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, 36,691 ಮತದಾರರು ಮನೆಯಿಂದಲೇ ಮತದಾನ ಮಾಡಲು ನೋಂದಾಯಿಸಿಕೊಂಡಿದ್ದಾರೆ. ಇನ್ನು, ಅಂಗವಿಕಲ ಮತದಾರರು ರಾಜ್ಯದಲ್ಲಿ ಒಟ್ಟು 2,76,042 ಇದ್ದು, ಈ ಪೈಕಿ ಮನೆಯಿಂದಲೇ ಮತದಾನ ಮಾಡಲು 12,957 ಮತದಾರರು ನೋಂದಾಯಿಸಿಕೊಂಡಿದ್ದಾರೆ. ಒಟ್ಟು 49,648 ರಷ್ಟು 85 ವರ್ಷಕ್ಕಿಂತ ಮೇಲ್ಪಟ್ಟು ಮತ್ತು ಅಂಗವಿಕಲ ಮತದಾರರಾಗಿದ್ದಾರೆ. ಮತದಾನದ ವೇಳೆ ಕೈಗೊಳ್ಳುವ ಕ್ರಮಗಳನ್ನೇ ಮಾಡಲಾಗುತ್ತದೆ. ಮನೆಯಲ್ಲಿಯೇ ಗೌಪ್ಯ ಮತದಾನದ ವ್ಯವಸ್ಥೆ ಮಾಡಿಕೊಂಡು ಮತಚಲಾಯಿಸಲು ಅವಕಾಶ ನೀಡಲಾಗುತ್ತದೆ.

ನೊಂದಾಯಿತ 85 ವರ್ಷಕ್ಕಿಂತ ಮೇಲ್ಪಟ್ಟ ಮತದಾರರಲ್ಲಿ ದಕ್ಷಿಣ ಕನ್ನಡ ಕ್ಷೇತ್ರದವರು ಹೆಚ್ಚಾಗಿದ್ದಾರೆ. ಈ ಕ್ಷೇತ್ರದಲ್ಲಿ 6,053 ಮಂದಿ ನೋಂದಾಯಿಸಿಕೊಂಡಿದ್ದಾರೆ. ಚಾಮರಾಜ ನಗರದಲ್ಲಿ 982 ಮಂದಿ ನೋಂದಾಯಿಸಿಕೊಳ್ಳುವ ಮೂಲಕ ಕಡಿಮೆ ನೋಂದಾಯಿತ ಕ್ಷೇತ್ರವಾಗಿದೆ.

ಇನ್ನು, ಮನೆಯಿಂದಲೇ ಮತದಾನ ಮಾಡಲು ನೋಂದಾಯಿಸಿಕೊಂಡ ಅಂಗವಿಕಲರ ಪೈಕಿ ಚಿತ್ರದುರ್ಗ ಕ್ಷೇತ್ರದಲ್ಲಿ ಹೆಚ್ಚಾಗಿ ನೋಂದಾಯಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ 2059 ಮಂದಿ ನೋಂದಾಯಿಸಿಕೊಂಡಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ನೋಂದಾಯಿಸಿಕೊಳ್ಳಲಾಗಿದ್ದು, 54 ಮಂದಿ ಮಾತ್ರ ನೋಂದಾಯಿಸಿಕೊಂಡಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

40 ಲಕ್ಷ ಮಹಿಳೆಯರಿಗೆ 9000 ರು. ಗ್ಯಾರಂಟಿ ! ಎಲೆಕ್ಷನ್‌ ಮುನ್ನ ಬಂಪರ್‌
ಡಿಕೆ ರಾಜಕೀಯ ಹೋರಾಟ ಎಲ್ಲರಿಗೂ ಸ್ಪೂರ್ತಿ : ಸಿಎಂ ಸಿದ್ದರಾಮಯ್ಯ