- ಬಯಸಿದರೆ ಸಿಎಂ ಆಗಬಹುದು: ತಂಗಡಗಿ- ಖರ್ಗೆ ಸಿಎಂ ಆಗೋದಾದ್ರೆ ಸ್ವಾಗತ: ಅಜಯ್
==- 1999ರಲ್ಲಿ ಸಿಎಲ್‌ಪಿ ನಾಯಕ ಆಗಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದ, ಸಿಎಂ ಪಟ್ಟ ಸಿಗಲಿಲ್ಲ ಎಂದಿದ್ದ ಖರ್ಗೆ
- ಇದರ ಬೆನ್ನಲ್ಲೇ ‘ಖರ್ಗೆ ಸಿಎಂ’ ಕುರಿತು ಚರ್ಚೆಗಳು ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಮುನ್ನೆಲೆಗೆ- ಖರ್ಗೆ ರಾಜ್ಯ ರಾಜಕಾರಣಕ್ಕೆ ಬಂದರೆ ತಪ್ಪೇನು? ಅವರ ಹೇಳಿಕೆಯನ್ನು ತಪ್ಪಾಗಿ ಭಾವಿಸಬೇಡಿ ಎಂದ ಪರಂ
- ಅವರು ಆಸೆ ಪಟ್ಟರೆ ಯಾವಾಗ ಬೇಕಾದರೂ ಸಿಎಂ ಆಗಬಹುದು ಎಂದು ಹೇಳಿದ ಸಚಿವ ತಂಗಡಗಿ- ಖರ್ಗೆ ಅವರು ಮುಖ್ಯಮಂತ್ರಿ ಆಗಲು ಒಲವು ತೋರಿದರೆ ಯಾರಾದರೂ ಬೇಡ ಅಂತಾರಾ ಎಂದ ಅಜಯ್ ಸಿಂಗ್
===ಕನ್ನಡಪ್ರಭ ವಾರ್ತೆ ಬೆಂಗಳೂರುಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಸ್ಥಾನದ ಕುರಿತು ಆಡಿರುವ ಮಾತು ಇದೀಗ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಕೆಲ ಸಚಿವರು ಹಾಗೂ ಶಾಸಕರು ‘ಅವರು ಸಿಎಂ ಆದ್ರೆ ತಪ್ಪೇನು?’, ‘ಅವರು ಎಲ್ಲಾ ಹುದ್ದೆಗಳಿಗೂ ಅರ್ಹರು’ ಎನ್ನುವ ಮೂಲಕ ‘ಖರ್ಗೆ ಸಿಎಂ’ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಚಿವರಾದ ಡಾ. ಜಿ.ಪರಮೇಶ್ವರ್, ಶಾಸಕ ಅಜಯ್ ಧರ್ಮಸಿಂಗ್ ಅವರು ಖರ್ಗೆ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಖರ್ಗೆ ಅವರು ರಾಜ್ಯ ರಾಜಕಾರಣಕ್ಕೆ ಮರಳುವುದಾದರೆ ಅದರಲ್ಲಿ ತಪ್ಪೇನೂ ಇಲ್ಲ. ಅವರು ನಮ್ಮ ಪಕ್ಷದಲ್ಲಿ ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಹಾಗಾಗಿ ರಾಜ್ಯ ರಾಜಕಾರಣಕ್ಕೆ ಬರುತ್ತೇನೆಂದರೆ ತಪ್ಪೆಂದು ಯಾರೂ ಅರ್ಥೈಸಬಾರದು ಎಂದು ಹೇಳಿದ್ದಾರೆ.ಅಲ್ಲದೆ, ಸುದೀರ್ಘ 50 ವರ್ಷ ರಾಜಕಾರಣ ಮಾಡಿರುವುದರಿಂದ ಅವರಿಗೆ ಅಪಾರ ಅನುಭವವಿದೆ. ಹೀಗಾಗಿ ಅವರ ಹೇಳಿಕೆಯನ್ನು ತಪ್ಪಾಗಿ ಭಾವಿಸುವುದು ಸರಿಯಲ್ಲ. ಖರ್ಗೆಯವರ ಬಗ್ಗೆ ಈಗ ಯಾರ್‍ಯಾರು ಮಾತಾಡಿದ್ದಾರೋ ಅವರು ಯಾರೂ ಖರ್ಗೆಯವರ ಹಂತಕ್ಕೆ ಬೆಳೆದವರಲ್ಲ. ಖರ್ಗೆಯವರು ಏನಾದರೂ ಹೇಳಿದಾಗ ತಪ್ಪಾಗಿ ಭಾವಿಸುವ ಅಗತ್ಯ ಇಲ್ಲ. ಅವರು ರಾಜ್ಯಕ್ಕೆ ಬರುತ್ತೇನೆಂದು ಹೇಳಿದರೆ ತಪ್ಪೇನೂ ಇಲ್ಲ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ಸ್ವಾಗತ:ಕಲಬುರಗಿಯಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷ, ಜೇವರ್ಗಿ ಶಾಸಕ ಡಾ. ಅಜಯ್ ಧರ್ಮಸಿಂಗ್ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಹಿರಿಯರು, ಮುತ್ಸದ್ದಿ ರಾಜಕಾರಣಿ. ಎಐಸಿಸಿ ಅಧ್ಯಕ್ಷರಾಗಿರುವ ಅವರಿಗೆ ಯಾರನ್ನಾದರೂ ಮುಖ್ಯಮಂತ್ರಿ ಮಾಡುವ ಸಾಮರ್ಥ್ಯ ಇದೆ. ಅವರೇ ಮುಖ್ಯಮಂತ್ರಿ ಆಗುವ ಒಲವು ತೋರಿದರೆ ಯಾರಾದರೂ ಬೇಡ ಅನ್ನೋದುಂಟೆ? ಸಹಜವಾಗಿಯೇ ಅದನ್ನು ಎಲ್ಲರೂ ಸ್ವಾಗತ ಮಾಡೇ ಮಾಡುತ್ತಾರೆ ಎಂದು ಹೇಳಿದರು.
ಸಿಎಂ ಬದಲಾವಣೆ ಇಲ್ಲ:ಖರ್ಗೆ ಅವರ ಮಾತನ್ನು ಕಾಂಗ್ರೆಸ್ ಅಧಿಕಾರದಲ್ಲಿರುವ ಎಲ್ಲ ಮುಖ್ಯಮಂತ್ರಿಗಳೂ ಕೇಳಬೇಕು. ಅಷ್ಟು ದೊಡ್ಡ ಹುದ್ದೆಯಲ್ಲಿದ್ದಾರೆ. ಆದರೆ ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ವಿಚಾರ ಇಲ್ಲ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರೆ, ಖರ್ಗೆ ಅವರು ಆಸೆಪಟ್ಟರೆ ಯಾವಾಗ ಬೇಕಾದರೂ ಸಿಎಂ ಆಗಬಹುದು. ಅವರು ಸಿಎಂ ಆಗೋದಲ್ಲ, 8 ರಿಂದ 10 ಮಂದಿಯನ್ನು ಸಿಎಂ ಮಾಡುವ ಶಕ್ತಿ ಅವರಿಗೆ ಈಗ ಇದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಈ ನಡುವೆ, ಹುದ್ದೆಗಳಿಗಾಗಿ ನಮ್ಮ ತಂದೆ ಎಂದೂ ಕಣ್ಣೀರು ಹಾಕಿದವರಲ್ಲ, ಹಾಕುವುದೂ ಇಲ್ಲ ಎಂದು ಪ್ರಿಯಾಂಕ್ ಖರ್ಗೆ ಅವರು ತಂದೆಯ ಹೇಳಿಕೆ ಕುರಿತು ಪ್ರತಿಪಕ್ಷಗಳು ನೀಡುತ್ತಿರುವ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.