;Resize=(412,232))
ಬೆಂಗಳೂರು : ಈ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ. ಇರಲಿ, ನಮಗೆ ಯಾವುದೇ ಬೇಸರವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
‘ಡಿ.ಕೆ.ಶಿವಕುಮಾರ್ ಅವರು 2028ಕ್ಕೆ ಸಿಎಂ ಆಗಬೇಕು, ಅಲ್ಲಿಯವರೆಗೆ ಸಿದ್ದರಾಮಯ್ಯ ಅವರೇ ಸಿಎಂ’ ಎಂದು ಸಚಿವ ಜಮೀರ್ ಅಹಮದ್ ಖಾನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಬಹಳ ಸಂತೋಷ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ, ಇರಲಿ, ಅದರಲ್ಲಿ ತಪ್ಪೇನಿದೆ. ನಮಗೆ ಯಾವುದೇ ಬೇಸರವಿಲ್ಲ. ನಾವು ಅವರ ಜತೆ ಕೆಲಸ ಮಾಡುತ್ತಿದ್ದೇವೆ, ಒಟ್ಟಿಗೆ ಇದ್ದೇವೆ. ಮುಂದೆಯೂ ಒಟ್ಟಿಗಿರುತ್ತೇವೆ’ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟ ಪುನಾರಚನೆ ಕುರಿತು ನಿಮ್ಮ ಬಳಿ ಚರ್ಚಿಸಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ನ.15ರಂದು ನಾನೂ ಸಿದ್ದರಾಮಯ್ಯ ಅವರಂತೆ ದೆಹಲಿಗೆ ಹೋಗುತ್ತಿದ್ದೇನೆ. ಕಪಿಲ್ ಸಿಬಲ್ ಅವರು ನನ್ನ ವಕೀಲರು. ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದು, ನಾನೂ ಹೋಗುತ್ತಿದ್ದೇನೆ. ಇನ್ನು, ಸಚಿವ ಸಂಪುಟ ಪುನಾರಚನೆ ವಿಚಾರ ಸಿಎಂ ಅವರಿಗೆ ಬಿಟ್ಟಿದ್ದು. ಅವರು ನನ್ನ ಬಳಿ ಆ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ ಎಂದ ಡಿ.ಕೆ.ಶಿವಕುಮಾರ್, ಪದವೀಧರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಗೆ ಪಕ್ಷದ ನಾಲ್ಕು ಅಭ್ಯರ್ಥಿಗಳ ಶಿಫಾರಸು ಪಟ್ಟಿಯನ್ನು ಇನ್ನೆರಡು ದಿನಗಳಲ್ಲಿ ದೆಹಲಿಗೆ ಕಳುಹಿಸಲಾಗುವುದು ಎಂದರು.