ಯಾರಿಗೆ ಯಾವ ಖಾತೆ : ತೀವ್ರ ಕುತೂಹಲ

Published : Jun 04, 2026, 12:33 PM IST
Deputy CM G Parameshwara

ಸಾರಾಂಶ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಂಪುಟದ ಸಚಿವರಿಗೆ ಖಾತೆ ಹಂಚುವ ಪ್ರಕ್ರಿಯೆ ಕುತೂಹಲಕಾರಿ ಘಟ್ಟ ತಲುಪಿದ್ದು, ಮಹತ್ವದ ಕಂದಾಯ ಖಾತೆಯು ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‌ ಹಾಗೂ ಗೃಹ ಖಾತೆಯು ಪ್ರಿಯಾಂಕ ಖರ್ಗೆ ಅವರ ಪಾಲಾಗುವ ಸಾಧ್ಯತೆಯಿದೆ.

  ಬೆಂಗಳೂರು :  ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಂಪುಟದ ಸಚಿವರಿಗೆ ಖಾತೆ ಹಂಚುವ ಪ್ರಕ್ರಿಯೆ ಕುತೂಹಲಕಾರಿ ಘಟ್ಟ ತಲುಪಿದ್ದು, ಮಹತ್ವದ ಕಂದಾಯ ಖಾತೆಯು ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‌ ಹಾಗೂ ಗೃಹ ಖಾತೆಯು ಪ್ರಿಯಾಂಕ ಖರ್ಗೆ ಅವರ ಪಾಲಾಗುವ ಸಾಧ್ಯತೆಯಿದೆ.

ಕುತೂಹಲ ಬೆಳವಣಿಗೆಯೊಂದರಲ್ಲಿ ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಪ್ರಭಾವಿ ಸಚಿವರಾದ ರಾಮಲಿಂಗಾರೆಡ್ಡಿ ಹಾಗೂ ಕೃಷ್ಣಬೈರೇಗೌಡ ಅವರ ನಡುವೆ ತೀವ್ರ ಪೈಪೋಟಿ ಶುರುವಾಗಿದ್ದು, ಅಂತಿಮವಾಗಿ ಬೆಂಗಳೂರು ನಗರಾಭಿವೃದ್ಧಿ ಖಾತೆ ಯಾರಿಗೆ ಒಲಿಯಲಿದೆ ಎಂಬುದು ಕುತೂಹಲ ಮೂಡಿಸಿದೆ.

ಬೆಂಗಳೂರು ನಗರಾಭಿವೃದ್ಧಿ ಮೇಲೆ ಕಣ್ಣಿಟ್ಟಿರುವ ರಾಮಲಿಂಗಾರೆಡ್ಡಿ ಅವರಿಗೆ ಜಲಸಂಪನ್ಮೂಲ ಇಲಾಖೆ ವಹಿಸಲು ಪ್ರಸ್ತಾಪವಿದೆ. ಎಐಸಿಸಿ ವರಿಷ್ಠರು ಕೃಷ್ಣಬೈರೇಗೌಡ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಹೊಣೆಗಾರಿಕೆ ವಹಿಸಿಕೊಡಲು ಆಸಕ್ತಿ ತೋರಿದ್ದಾರೆ. ಆದರೆ, ಕೃಷ್ಣ ಬೈರೇಗೌಡ ಅವರಿಗೆ ತಾವು ಹಿಂದೆ ನಿರ್ವಹಿಸಿದ್ದ ಕಂದಾಯ ಖಾತೆಯಲ್ಲೇ ಮುಂದುವರೆಯುವ ಮನಸ್ಸು ಇದೆ.

ಇನ್ನು ಶೀಘ್ರದಲ್ಲೇ ಜಿಬಿಎ ಚುನಾವಣೆಯಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಆದಿಯಾಗಿ ರಾಜ್ಯ ಕಾಂಗ್ರೆಸ್‌ ನಾಯಕರು ಮುಂಬರುವ ಜಿಬಿಎ ಪಾಲಿಕೆಗಳ ಚುನಾವಣೆ ಹಿನ್ನೆಲೆಯಲ್ಲಿ ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಜವಾಬ್ದಾರಿ ವಹಿಸಲು ಆಸಕ್ತಿಯಿದೆ.

ಈಗಾಗಲೇ ಬೆಂಗಳೂರು ನಗರಾಭಿವೃದ್ಧಿ ಖಾತೆ ನಿಭಾಯಿಸಿರುವ ಅನುಭವದ ಜತೆಗೆ 4 ದಶಕಗಳಿಂದ ಬೆಂಗಳೂರಿನ ರಾಜಕೀಯ ಅರಿತಿರುವ ರಾಮಲಿಂಗಾರೆಡ್ಡಿ ಇದಕ್ಕೆ ಸೂಕ್ತ ಆಯ್ಕೆ. 5 ಪಾಲಿಕೆಗಳಲ್ಲಿ ಕನಿಷ್ಠ 3 ಪಾಲಿಕೆಯನ್ನಾದರೂ ಕಾಂಗ್ರೆಸ್‌ ಗೆಲ್ಲಬೇಕಾದರೆ ತಳಮಟ್ಟದ ಸಮಸ್ಯೆ, ಪರಿಹಾರ ತಿಳಿದಿರುವ ನಾಯಕನಿಗೆ ಜವಾಬ್ದಾರಿ ವಹಿಸಬೇಕು ಎಂಬುದು ರಾಜ್ಯ ನಾಯಕತ್ವದ ನಿಲುವು.

ಇದಲ್ಲದೆ, 2023ರ ಚುನಾವಣೆಯಲ್ಲೇ ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ರಾಮಲಿಂಗಾರೆಡ್ಡಿ ಆಸಕ್ತಿ ವಹಿಸಿದ್ದರು. ಕೊನೆಯ ಕ್ಷಣದವರೆಗೆ ಭರವಸೆ ನೀಡಿದ್ದ ಡಿ.ಕೆ. ಶಿವಕುಮಾರ್‌ ಅವರು ಬಳಿಕ ಖಾತೆಯನ್ನೇ ತಾವೇ ವಹಿಸಿಕೊಂಡಿದ್ದರು. ಅದೇ ವೇಳೆ ಮುಂದಿನ ಸಂಪುಟ ಪುನರ್‌ ರಚನೆ ವೇಳೆ ಖಾತೆಯನ್ನು ನಿಮಗೆ ಬಿಟ್ಟುಕೊಡುತ್ತೇನೆ ಎಂದು ರಾಮಲಿಂಗಾರೆಡ್ಡಿ ಅವರಿಗೆ ಮಾತು ನೀಡಿದ್ದರು ಎಂದು ಸಹ ತಿಳಿದುಬಂದಿದೆ.

ಆದರೆ, ಹೈಕಮಾಂಡ್‌ ಕೃಷ್ಣಬೈರೇಗೌಡ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ವಹಿಸಲು ಆಸಕ್ತಿ ತೋರಿರುವುದರಿಂದ ಸಂದಿಗ್ದ ಸ್ಥಿತಿ ಎದುರಾಗಿದೆ. ಹೀಗಾಗಿ ಅಂತಿಮವಾಗಿ ಖಾತೆ ಯಾರಿಗೆ ಒಲಿಯಲಿದೆ ಎಂಬುದು ಕುತೂಹಲ ಮೂಡಿಸಿದೆ.

ಪ್ರಿಯಾಂಕ್‌ ಖರ್ಗೆಗೆ ಗೃಹ ಖಾತೆ:

ಕಂದಾಯ ಖಾತೆಯು ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‌ ಹಾಗೂ ಗೃಹ ಖಾತೆಯು ಪ್ರಿಯಾಂಕ್ ಖರ್ಗೆ ಅವರ ಪಾಲಾಗುವ ಸಾಧ್ಯತೆಯಿದೆ.

ಉಳಿದಂತೆ ಸಿದ್ದರಾಮಯ್ಯ ಸರ್ಕಾರದಲ್ಲಿ ಹಿರಿಯ ಸಚಿವರಾಗಿದ್ದ ಕೆ.ಎಚ್‌. ಮುನಿಯಪ್ಪ (ಆಹಾರಮತ್ತು ನಾಗರೀಕ), ಜಾರ್ಜ್ (ಇಂಧನ), ಎಂ.ಬಿ. ಪಾಟೀಲ (ಕೈಗಾರಿಕೆ) ಹಾಗೂ ಸತೀಶ್‌ ಜಾರಕಿಹೊಳಿ (ಲೋಕೋಪಯೋಗಿ), ಶರಣ ಪ್ರಕಾಶ್ ಪಾಟೀಲ್ (ವೈದ್ಯಕೀಯ ಶಿಕ್ಷಣ) ಅವರನ್ನು ಈ ಹಿಂದೆ ತಾವು ನಿಭಾಯಿಸಿದ್ದ ಖಾತೆಗಳಲ್ಲೇ ಮುಂದುವರೆಸುವ ಸಾಧ್ಯತೆಯಿದೆ.

ಈಶ್ವರ್‌ ಖಂಡ್ರೆ ಅವರಿಗೆ  ಗ್ರಾಮೀಣಾಭಿವೃದ್ಧಿ ಇಲಾಖೆ

ಇನ್ನು ಈಶ್ವರ್‌ ಖಂಡ್ರೆ ಅವರಿಗೆ ಅರಣ್ಯ ಖಾತೆ ಹೊಣೆ ಬದಲಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ಬೈರತಿ ಸುರೇಶ್‌ ಅವರಿಗೆ ನಗರಾಭಿವೃದ್ಧಿ ಖಾತೆ ಬದಲಿಗೆ ಸಾರಿಗೆ ಖಾತೆ ನೀಡುವ ನಿರೀಕ್ಷೆಯಿದೆ.

ಹೊಸ ಮುಖವಾಗಿರುವ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಈ ಹಿಂದೆ ಬೈರತಿ ಸುರೇಶ್‌ ನಿರ್ವಹಿಸುತ್ತಿದ್ದ ನಗರಾಭಿೃವದ್ಧಿ ಖಾತೆ ಹಾಗೂ ಯು.ಟಿ. ಖಾದರ್ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ದೊರೆಯುವ ಸಾಧ್ಯತೆಯಿದೆ ಎಂದು ಮೂಲಗಳ ತಿಳಿಸಿವೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸಿಎಂ ಖುರ್ಚಿ ನನ್ನದಲ್ಲ, ನಾಡಿನ ಜನರದ್ದು: ಡಿಕೆಶಿ
ಇವರೇ ಸಿಎಂ ಡಿಕೆ ಸಂಪುಟದ ನೂತನ ಸೇನಾನಿಗಳು